ನವದೆಹಲಿ: ಖ್ಯಾತ ತಮಿಳು ನಟ ವಿಜಯ್ ನೇತೃತ್ವದ ತಮಿಳ ವೆಟ್ರಿ ಕಳಗಂ (ಟಿವಿಕೆ) ಪಕ್ಷವು ಕರೂರಿನಲ್ಲಿ ಹಮ್ಮಿಕೊಂಡಿದ್ದ ಸಮಾವೇಶದಲ್ಲಿ ಕಾಲ್ತುಳಿತ ಸಂಭವಿಸಿ 41 ಮಂದಿ ಮೃತಪಟ್ಟ ಪ್ರಕರಣದ ತನಿಖೆಯನ್ನು ಸುಪ್ರೀಂ ಕೋರ್ಟ್ ಸಿಬಿಐಗೆ ವಹಿಸಿದೆ.
ಸೆಪ್ಟೆಂಬರ್ 27ರಂದು ನಡೆದ ಈ ದುರಂತದ ತನಿಖೆಯನ್ನು ನಡೆಸಲು ಮದ್ರಾಸ್ ಹೈಕೋರ್ಟ್ ವಿಶೇಷ ತನಿಖಾ ದಳ (ಎಸ್ಐಟಿ) ರಚಿಸಿ ಆದೇಶ ನೀಡಿತ್ತು. ಈ ಆದೇಶವನ್ನು ಪ್ರಶ್ನಿಸಿ ವಿಜಯ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಜೆ.ಕೆ ಮಹೇಶ್ವರಿ ಹಾಗೂ ಎನ್.ವಿ ಅಂಜಾರಿಯಾ ಅವರ ದ್ವಿಸದಸ್ಯ ಪೀಠವು ಇಂದು ತೀರ್ಪು ಪ್ರಕಟಿಸಿದ್ದು, ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿದೆ. ಜತೆಗೆ ನಿವೃತ್ತ ನ್ಯಾಯಮೂರ್ತಿ ಅಜಯ್ ರಸ್ತೋಗಿ ನೇತೃತ್ವದ ತ್ರಿಸದಸ್ಯ ಪೀಠ ತನಿಖೆಯ ಮೇಲ್ವಿಚಾರಣೆ ನಡೆಸಲಿದೆ ಎಂದು ತಿಳಿಸಿದೆ.
ಮೂಲತಃ ತಮಿಳುನಾಡು ರಾಜ್ಯದವರಲ್ಲದ ಆದರೆ ತಮಿಳುನಾಡು ಕೇಡರ್ ನ ಇಬ್ಬರು ಐಪಿಎಸ್ ಅಧಿಕಾರಿಗಳು ಸಮಿತಿಯ ಸದಸ್ಯರಾಗಿ ಇರಲಿದ್ದಾರೆ. ನ್ಯಾಯಮೂರ್ತಿ ರಸ್ತೋಗಿ ಅವರ ನಿರ್ದೇಶನದಂತೆ ಸಮಿತಿ ತನ್ನದೇ ಆದ ಪ್ರಕ್ರಿಯೆಗಳನ್ನು ಆನುಸರಿಸಬಹುದಾಗಿದೆ. ಸಿಬಿಐ ತನ್ನ ತನಿಖಾ ವರದಿಯನ್ನು ಪ್ರತಿ ತಿಂಗಳು ಸಮಿತಿಗೆ ಸಲ್ಲಿಸಬೇಕು ಎಂದು ಸುಪ್ರೀಂಕೋರ್ಟ್ ನಿರ್ದೇಶಿಸಿದೆ.