ಬೆಂಗಳೂರು: ರಾಜ್ಯದಲ್ಲಿ ಅತ್ಯಂತ ಹಿಂದುಳಿದ ಮಡಿವಾಳರನ್ನು ಪರಿಶಿಷ್ಟ ಸಮುದಾಯಕ್ಕೆ ಸೇರ್ಪಡೆ ಮಾಡುವವರೆಗೆ ಉಗ್ರ ರ ಹೋರಾಟ ನಡೆಸಲು ಕರ್ನಾಟಕ ರಾಜ್ಯ ಮಡಿವಾಳ ಎಸ್. ಸಿ. ಹೋರಾಟ ಕೇಂದ್ರ ಸಮಿತಿ ತೀರ್ಮಾನಿಸಿದೆ. ಕರ್ನಾಟಕ ರಾಜ್ಯ ಮಡಿವಾಳ ಎಸ್. ಸಿ. ಹೋರಾಟ ಕೇಂದ್ರ ಸಮಿತಿಯ ಅಧ್ಯಕ್ಷ ಹಾಗೂ ನಿವೃತ್ತ ಐಪಿಎಸ್ ಅಧಿಕಾರಿ ಎಚ್.ಎಸ್. ವೆಂಕಟೇಶ್ ಅಧ್ಯಕ್ಷತೆಯಲ್ಲಿ ನಡೆದ ಮಡಿವಾಳ ಮುಖಂಡರ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ರಾಜ್ಯದಲ್ಲಿ ಮಡಿವಾಳ ಸಮುದಾಯವು ಅತ್ಯಂತ ಹಿಂದುಳಿದಿದೆ. ಸಾಮಾಜಿಕ ಶೈಕ್ಷಣಿಕ ಹಾಗೂ ಆರ್ಥಿಕವಾಗಿಯೂ ಅತ್ಯಂತ ದುರ್ಬಲವಾಗಿದೆ. ರಾಜಕೀಯವಾಗಿಯೂ ಬಲ ಇಲ್ಲದೆ ತೀರಾ ನಿಶಕ್ತವಾಗಿದೆ. ಸ್ವಾತಂತ್ರ್ಯ ನಂತರದ ಬಂದ ಸರ್ಕಾರಗಳು ಈವರೆಗೂ ಮೇಲೆತ್ತುವ ಕೆಲಸವನ್ನು ಮಾಡಿಲ್ಲ ಎಂದು ಸಂಘವು ಆರೋಪಿಸಿದೆ.
ಸಭೆಯ ಅಧ್ಯಕ್ಷತೆ ವಹಿಸಿದ್ದ ಎಚ್.ಎಸ್. ವೆಂಕಟೇಶ್ ಮಾತನಾಡಿ, ಹಿಂದುಳಿದ ಜಾತಿಗಳ ಪಟ್ಟಿಯಲ್ಲಿರುವ ಅನೇಕ ಸಮುದಾಯಗಳು ಆರ್ಥಿಕ ಹಾಗೂ ರಾಜಕೀಯವಾಗಿ ಬಹಳ ಪ್ರಬಲವಾಗಿವೆ. ಆದರೂ, ಅಂತಹ ಜಾತಿಗಳೇ ಈಗ ಪರಿಶಿಷ್ಟ ಸಮುದಾಯಕ್ಕೆ ಸೇರ್ಪಡೆ ಮಾಡುವಂತೆ ಹಕ್ಕೊತ್ತಾಯ ಮಾಡುತ್ತಿವೆ. ಆದರೆ, ಹಿಂದುಳಿದ ಜಾತಿಗಳಲ್ಲೇ ಅತ್ಯಂತ ನಿಕೃಷ್ಟವಾಗಿರುವ ಮಡಿವಾಳರನ್ನು ಪರಿಶಿಷ್ಟ ಸಮುದಾಯಕ್ಕೆ ಸೇರ್ಪಡೆ ಮಾಡದಿರುವುದು ಅತ್ಯಂತ ನೋವಿನ ಸಂಗತಿ. ಸರ್ಕಾರದ ವಿರುದ್ಧ ಧ್ವನಿ ಎತ್ತಲು ಕೂಡ ಧ್ವನಿ ಇಲ್ಲದಂತಾಗಿದೆ ಎಂದು ಆಪಾದಿಸಿದರು.
ರಾಜ್ಯದಲ್ಲಿ ಸುಮಾರು 6 ಲಕ್ಷಕ್ಕೂ ಹೆಚ್ಚು ಮಡಿವಾಳರಿದ್ದು, ಇನ್ನು ಬಹುತೇಕ ಕುಟುಂಬಗಳು ತಮ್ಮ ಕುಲಕಸಬನ್ನೇ ನಂಬಿಕೊಂಡು ಜೀವನ ನಡೆಸುತ್ತಿವೆ. ಸಾಮಾಜಿಕ, ಶೈಕ್ಷಣಿಕ, ಆರ್ಥಿಕವಾಗಿ ತೀರಾ ಹಿಂದುಳಿದಿವೆ. ಮೀಸಲಾತಿ ಇಲ್ಲದೆ ಇನ್ನೂ ಈ ಸಮುದಾಯ ಶಿಕ್ಷಣ ಮತ್ತು ಉದ್ಯೋಗ ನೇಮಕಾತಿಯಲ್ಲಿ ವಂಚನೆಗೆ ಒಳಗಾಗಿದೆ. ಹಾಗಾಗಿ, ಸರ್ಕಾರ ಕೂಡಲೇ ಮಡಿವಾಳರನ್ನು ಪರಿಶಿಷ್ಟ ಸಮುದಾಯಕ್ಕೆ ಸೇರ್ಪಡೆ ಮಾಡಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಎದುರಿಸಬೇಕಾದೀತು ಎಂದು ಎಚ್ಚರಿಸಿದರು.
ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯ ಜಿ.ಡಿ ಗೋಪಾಲ್ ಮಾತನಾಡಿ, ರಾಜ್ಯದಲ್ಲಿ ಕಳೆದ ಮೂರು ದಶಕಗಳಿಂದಲೂ ಮಡಿವಾಳರನ್ನು ಪರಿಶಿಷ್ಟ ಸಮುದಾಯಕ್ಕೆ ಸೇರ್ಪಡೆ ಮಾಡಬೇಕೆಂದು ಸರ್ಕಾರಗಳಿಗೆ ಒತ್ತಾಯಿಸುತ್ತಾ ಬರಲಾಗುತ್ತಿದೆ. ಆದರೂ ಆಳುವ ಸರ್ಕಾರಗಳು ಸಂಪೂರ್ಣವಾಗಿ ನಿರ್ಲಕ್ಷಿಸಿವೆ. ಮಡಿವಾಳರ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದ ಡಾ. ಅನ್ನಪೂರ್ಣಮ್ಮ ವರದಿಯನ್ನು ಯಾವುದೇ ಪಕ್ಷದ ಸರ್ಕಾರ ಜಾರಿಗೊಳಿಸಿಲ್ಲ ಎಂದರು.
15 ರಾಜ್ಯಗಳಲ್ಲಿ ಎಸ್ ಸಿಗೆ ಸೇರ್ಪಡೆ:
ಸಮುದಾಯದ ಮುಖಂಡ ರಾಜಗೋಪಾಲ್ ಮಾತನಾಡಿ, 15 ರಾಜ್ಯ ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮಡಿವಾಳರನ್ನು ಈಗಾಗಲೇ ಪರಿಶಿಷ್ಟ ಸಮುದಾಯಕ್ಕೆ ಸೇರ್ಪಡೆ ಮಾಡಲಾಗಿದೆ. ಆದರೆ, ರಾಜ್ಯದಲ್ಲಿ ಇದುವರೆಗೂ ಆಗಿಲ್ಲ. ಆದ್ದರಿಂದ ಮಡಿವಾಳ ಸಮುದಾಯವನ್ನು ಪರಿಶಿಷ್ಟ ಸಮುದಾಯಕ್ಕೆ ಸೇರ್ಪಡೆ ಮಾಡುವವರೆಗೂ ಅನಿರ್ದಿಷ್ಟಾವಧಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.