ನಿಮಯಗಳ ಉಲ್ಲಂಘನೆ: ಬಿಗ್‌ ಬಾಸ್‌ ಸ್ಟುಡಿಯೋ ಬಂದ್; ಬಿಗ್‌ ಬಾಸ್‌ ಭವಿಷ್ಯ ಏನು?

Most read

ಬೆಂಗಳೂರು: ಪರಿಸರ ನಿಯಮಗಳನ್ನು ಉಲ್ಲಂಘಿಸುತ್ತಿರುವ ಹಿನ್ನೆಲೆಯಲ್ಲಿ ರಿಯಾಲಿಟಿ ಶೋ ಬಿಗ್ ಬಾಸ್ ಸ್ಟುಡಿಯೋವನ್ನು ಮುಚ್ಚುವಂತೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ನೋಟಿಸ್‌ ನೀಡಿದೆ.

 ಕನ್ನಡ ಸೀಸನ್ 12 ಶೋ ಶುರುವಾಗಿ ಒಂದು ವಾರವಷ್ಟೇ ಮುಗಿದು, ಎರಡನೇ ವಾರಕ್ಕೆ ಕಾಲಿಟ್ಟಿದೆ. ಆದರೆ ಈ ನಡುವೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಕಾರ್ಯಕ್ರಮವನ್ನು ರದ್ಧುಗೊಳಿಸುವಂತೆ ಆದೇಶ ಹೊರಡಿಸಿದೆ.

ವೆಲ್ಸ್ ಸ್ಟುಡಿಯೋಸ್ ಮತ್ತು ಎಂಟರ್‌ಟೈನ್‌ಮೆಂಟ್ ಪ್ರೈವೇಟ್ ಲಿಮಿಟೆಡ್ (ಜಾಲಿ ವುಡ್ ಸ್ಟುಡಿಯೋಸ್ ಮತ್ತು ಅಡ್ವೆಂಚರ್ಸ್) ಗೆ ನೋಟಿಸ್ ನೀಡಲಾಗಿದ್ದು, ಇಲ್ಲಿ ನಡೆಸಲಾಗುತ್ತಿರುವ ಎಲ್ಲ ಚಟುವಟಿಕೆಗಳನ್ನು ನಿಲ್ಲಿಸುವಂತೆ ಸೂಚನೆ ನೀಡಲಾಗಿದೆ.

ನೀರು (ಮಾಲಿನ್ಯ ತಡೆಗಟ್ಟುವಿಕೆ ಮತ್ತು ನಿಯಂತ್ರಣ) ಕಾಯ್ದೆ– 1974 ಮತ್ತು ವಾಯು (ಮಾಲಿನ್ಯ ತಡೆಗಟ್ಟುವಿಕೆ ಮತ್ತು ನಿಯಂತ್ರಣ) ಕಾಯ್ದೆ- 1981 ರ ಅಡಿಯಲ್ಲಿ ಚಿತ್ರೀಕರಣದ ಚಟುವಟಿಕೆಗಳಿಗೆ ಅಗತ್ಯವಾದ ಒಪ್ಪಿಗೆಯನ್ನು ಪಡೆಯದೆಯೇ ಬಳಸಲಾಗುತ್ತಿದೆ ಎಂದು ಮಂಡಳಿ ತನ್ನ ಆದೇಶದಲ್ಲಿ ತಿಳಿಸಿದೆ.

ಚಿತ್ರೀಕರಣ ಸ್ಥಗಿತಗೊಳಿಸುವ ಆದೇಶದ ಪ್ರತಿಗಳನ್ನು ರಾಮನಗರ ಜಿಲ್ಲೆಯ ಉಪ ಆಯುಕ್ತರು, ಬೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕರು ಮತ್ತು ರಾಮನಗರ ತಾಲ್ಲೂಕು ಕಾರ್ಯನಿರ್ವಾಹಕ ಎಂಜಿನಿಯರ್ ಮತ್ತು ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ (ವಿದ್ಯುತ್) ಅವರಿಗೆ ಕಳುಹಿಸಲಾಗಿದೆ.

ಈ ಆದೇಶವನ್ನು ಪಾಲಿಸಲು ವಿಫಲವಾದಲ್ಲಿ ಪರಿಸರ ಕಾನೂನುಗಳ ಅಡಿಯಲ್ಲಿ ದಂಡ ವಿಧಿಸಲಾಗುತ್ತದೆ ಎಂದು ಸೂಚನೆಯಲ್ಲಿ ಎಚ್ಚರಿಸಲಾಗಿದೆ. ನಟ ಕಿಚ್ಚ ಸುದೀಪ್ ಈ ಕಾರ್ಯಕ್ರಮವನ್ನು ಆಂಕರ್‌ ಆಗಿ ನಿರ್ವಹಿಸುತ್ತಿದ್ದಾರೆ.

ಕಂದಾಯ ಇಲಾಖೆ ಅಧಿಕಾರಿಗಳು ಜಾಲಿವುಡ್ ಸ್ಟುಡಿಯೋಗೆ ಬೀಗ ಹಾಕಿದ್ದಾರೆ ಎಂದು ತಿಳಿದು ಬಂದಿದೆ. ನಾಳೆಯಿಂದ ಯಾವುದೇ ಚಟುವಟಿಕೆ ನಡೆಸದಂತೆ ತಹಶೀಲ್ದಾರ್ ತೇಜಸ್ವಿನಿ ಅವರೂ ಎಚ್ಚರಿಕೆ ನೀಡಿದ್ದಾರೆ.

More articles

Latest article