ಜಾತಿ ಗಣತಿ: ಅ.18 ರವರೆಗೆ ಸರ್ಕಾರಿ, ಅನುದಾನಿತ ಶಾಲೆಗಳಿಗೆ ರಜೆ; ಪಿಯುಸಿ ಉಪನ್ಯಾಸಕರಿಗೆ ವಿನಾಯಿತಿ: ಸಿಎಂ ಸಿದ್ದರಾಮಯ್ಯ

Most read

ಬೆಂಗಳೂರು:  ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಸಮೀಕ್ಷೆ ಹಿನ್ನೆಲೆಯಲ್ಲಿ ಅಕ್ಟೋಬರ್ 18ರ ವರೆಗೆ ಸರ್ಕಾರಿ, ಅನುದಾನಿತ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಸಮೀಕ್ಷೆ  ಸ್ಥಿತಿ ಗತಿ ಕುರಿತು ಅಧಿಕಾರಿಗಳ ಜೊತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಡಿಯೊ ಕಾನ್ಷರೆನ್ಸ್ ಮೂಲಕ ಸಭೆ ನಡೆಸಿದ ನಂತರ ಅವರು ಈ ವಿಷಯ ತಿಳಿಸಿದರು.

ವಿಧಾನ‌ ಪರಿಷತ್ ಸದಸ್ಯ ಪುಟ್ಟಣ್ಣ ಮತ್ತು ಶಿಕ್ಷಕರ ಸಂಘ ಹೆಚ್ಚುವರಿಯಾಗಿ 10 ದಿನಗಳ‌ ಕಾಲಾವಕಾಶ ಕೇಳಿ ಮನವಿ ಮಾಡಿತ್ತು. ಈ ಮನವಿ ಪುರಸ್ಕರಿಸಿ ಅಕ್ಟೋಬರ್ 18ರ ವರೆಗೆ ಸರ್ಕಾರಿ, ಅನುದಾನಿತ ಶಾಲೆಗಳಿಗೆ ರಜೆ ಘೋಷಿಸಿದ್ದೇವೆ. 8 working days ರಜೆ ಘೋಷಿಸಲಾಗಿದೆ. ಇದೇ 12ನೇ ತಾರೀಕಿನಿಂದ ದ್ವಿತೀಯ ಪಿಯು ಮಧ್ಯಂತರ ಪರೀಕ್ಷೆ ನಡೆಯುತ್ತಿರುವುದರಿಂದ ಸಮೀಕ್ಷೆ ಕಾರ್ಯದಿಂದ ಪಿಯುಸಿ ಉಪನ್ಯಾಸಕರಿಗೆ ವಿನಾಯ್ತಿ ನೀಡಲಾಗಿದೆ ಎಂದರು.

ಸೆಪ್ಟೆಂಬರ್ 2 ರಿಂದ ರಾಜ್ಯದ ಜನರ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಸಮೀಕ್ಷೆ ಆರಂಭವಾಗಿದ್ದು, ಇಂದು  ಮುಗಿಯಬೇಕಿತ್ತು. ಕೆಲವು ಜಿಲ್ಲೆಗಳಲ್ಲಿ ಪೂರ್ಣಗೊಂಡಿಲ್ಲ. ಕೊಪ್ಪಳ ಜಿಲ್ಲೆಯಲ್ಲಿ ಶೇ.97 ರಷ್ಟು ಪ್ರಗತಿಯಾಗಿಗಿದ್ದರೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇ.67 ರಷ್ಟು ಆಗಿದೆ. ಹೀಗೆ ವ್ಯತ್ಯಾಸಗಳಿವೆ. ಹೀಗಾಗಿ ಶಿಕ್ಷಣ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಆಯೋಗ ಚರ್ಚಿಸಿದ್ದಾರೆ. 1 ಲಕ್ಷ 20 ಸಾವಿರ ಶಿಕ್ಷಕರು ಸೇರಿ ಒಂದು ಲಕ್ಷ ಅರವತ್ತು ಸಾವಿರ ಸಿಬ್ಬಂದಿ ಸಮೀಕ್ಷೆಯಲ್ಲಿ ತೊಡಗಿದ್ದಾರೆ ಎಂದರು.

ಬೆಂಗಳೂರು ನಗರದಲ್ಲಿ 6700 ಜನ ಶಿಕ್ಷಕರು ಸಮೀಕ್ಷೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಬೆಂಗಳೂರಿನಲ್ಲಿ 46 ಲಕ್ಷ ಮನೆಗಳಿವೆ. ದಿನಕ್ಕೆ 10-15 ಮನೆಗಳ ಸಮೀಕ್ಷೆ ನಡೆಸುವ ಗುರಿ ನೀಡಲಾಗಿದೆ. ಬೆಂಗಳೂರಿನಲ್ಲಿ ನರಕ ಚತುರ್ದಶಿಯೊಳಗೆ ಸಮೀಕ್ಷೆ ಮುಗಿಸಲು ಸೂಚಿಸಲಾಗಿದೆ. ಶಿಕ್ಷಕರು ಕೂಡ ಇಷ್ಟರೊಳಗೆ ಸಮೀಕ್ಷೆ ಮುಗಿಸುವ ಭರವಸೆ ನೀಡಿದ್ದಾರೆ ಎಂದು ಹೇಳಿದರು.

ಸಮೀಕ್ಷೆ ನಡೆಯುವಾಗ ಮೂವರು ಶಿಕ್ಷಕರು ಮೃತಪಟ್ಟಿದ್ದಾರೆ. ಇವರಿಗೆ ತಲಾ 20 ಲಕ್ಷ ಪರಿಹಾರ ನೀಡಲಾಗುವುದು ಎಂದರು‌.

ಸಮೀಕ್ಷೆಯಲ್ಲಿ ತೊಡಗಿಸಿಕೊಳ್ಳಲು ಒಪ್ಪದ, ಹಿಂದೇಟು ಹಾಕುವವರ ವಿರುದ್ಧ ಸರ್ಕಾರ ಶಿಸ್ತಿನ ಕ್ರಮ ಕೈಗೊಳ್ಳಲಿದೆ. GBA ಏರಿಯಾದಲ್ಲಿ ತಡವಾಗಿ ಸಮೀಕ್ಷೆ ಶುರುವಾಗಿದೆ. ಚುನಾವಣಾ ಆಯೋಗದ ಕೆಲಸ ಮತ್ತು ಇತರೆ ತರಬೇತಿ ಇದ್ದಿದ್ದರಿಂದ ತಡವಾಗಿ ಶುರುವಾಗಿದೆ. ಆದ್ದರಿಂದ GBA ಏರಿಯಾದಲ್ಲಿ ಸಮೀಕ್ಷೆ ಪ್ರಮಾಣ ಕಡಿಮೆ ಇದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

More articles

Latest article