ಬೆಂಗಳೂರು: ಅಕ್ಟೋಬರ್ 5ರಂದು ಕಲ್ಲಹಳ್ಳಿಯಲ್ಲಿ ನಡೆಯಲಿರುವ ವಾರ್ಷಿಕ ಸರ್ವಸದಸ್ಯರ ಸಭೆಗೆ ಜಾಣಗೆರೆ ವೆಂಕಟರಾಮಯ್ಯ ಮತ್ತು ವಸುಂಧರಾ ಭೂಪತಿ ಅವರು ಹಾಜರಾದರೆ ಅವರನ್ನು ಕತ್ತು ಹಿಡಿದು ದಬ್ಬಲಾಗುವುದು ಎಂದು ಬೆದರಿಕೆ ಒಡ್ಡಿರುವುದನ್ನು “ಕನ್ನಡ ನಾಡು-ನುಡಿ ಜಾಗೃತಿ ಸಮಿತಿ’ ತೀವ್ರವಾಗಿ ಖಂಡಿಸಿದೆ.
‘ಸದಸ್ಯತ್ವ ಅಮಾನತ್ತುಪಡಿಸಿರುವ ಆದೇಶವನ್ನು ಕಾನೂನಾತ್ಮಕವಾಗಿ ರದ್ದುಪಡಿಸಿಕೊಂಡು ಸಭೆಗೆ ಹಾಜರಾಗುವ ನಮ್ಮ ಹಕ್ಕನ್ನು’ ತಿಳಿಯದೆ ಹೋಗಿರುವ ರಾಜ್ಯಾಧ್ಯಕ್ಷ ಮತ್ತು ಜಿಲ್ಲಾಧ್ಯಕ್ಷರಿಗೆ ಅದನ್ನು ಮತ್ತೆ ಪಡೆದುಕೊಂಡೇ ಕಲ್ಲಹಳ್ಳಿಯ ಸಭೆಗೆ ಬರುವುದಾಗಿ ಸವಾಲು ಹಾಕುತ್ತಿದ್ದೇವೆ. ಆ ಸಂದರ್ಭದಲ್ಲಿ ಅಹಿತಕರ ಘಟನೆಗಳಿಗೆ ಅವಕಾಶ ಮಾಡಿಕೊಟ್ಟಲಿ ಕಸಾಪ ಅಧ್ಯಕ್ಷರೇ ಹೊಣೆಗಾರರಾಗಬೇಕಾಗುತ್ತದೆ ಎಂದು ಎಚ್ಚರಿಸುತ್ತಿದ್ದೇವೆ ಎಂದು ʼಕನ್ನಡ ನಾಡು-ನುಡಿ ಜಾಗೃತಿ ಸಮಿತಿ’ ಸಂಚಾಲಕರಾದ ಜಾಣಗೆರೆ ವೆಂಕಟರಾಮಯ್ಯ ಡಾ. ವಸುಂಧರಾ ಭೂಪತಿ ಸವಾಲು ಹಾಕಿದ್ದಾರೆ.
ಸರ್ಕಾರ ಆದಷ್ಟು ಶೀಘ್ರ ಕಸಾಪ ರಾಜ್ಯಾಧ್ಯಕ್ಷರ ಮೇಲೆ ಸೂಕ್ತ ಕ್ರಮ ಕೈಗೊಂಡು ಪರಿಷತ್ತನ್ನು ಇಂಥವರ ಕಪಿಮುಷ್ಠಿಯಿಂದ ಪಾರು ಮಾಡಬೇಕು ಎಂದೂ ಆಗ್ರಹಪಡಿಸಿದ್ದಾರೆ.
ಜಮಖಂಡಿಯ ಮಾಧ್ಯಮ ಗೋಷ್ಠಿಯಲ್ಲಿ ಕಸಾಪ ಜಿಲ್ಲಾಧ್ಯಕ್ಷರು ಅಡಿರುವ ದುರಹಂಕಾರದ, ಉದ್ಧಟತನದ ಮಾತನ್ನು ಅಲ್ಲಿ ಹಾಜರಿದ್ದ ಕಸಾಪ ರಾಜ್ಯಾಧ್ಯಕ್ಷ ಮಹೇಶ್ ಜೋಷಿಯವರು ತಣ್ಣಗೆ ಅನುಮೋದಿಸಿದ್ದಾರೆ. ಕಸಾಪದಲ್ಲಿ ಈತ ನಡೆಸುತ್ತಿರುವ ದುರಾಡಳಿತದ ಪ್ರತೀಕವಾಗಿದೆ. ಮಾತು ಮಾತಿಗೆ ‘ಕನ್ನಡ ಸಾಹಿತ್ಯ ಪರಿಷತ್ತಿನ ವಿರುದ್ಧ ಷಡ್ಯಂತ್ರ ನಡೆಸುತ್ತಿದ್ದಾರೆ” ಎಂದು ಜೋಷಿ ಹೇಳಿಕೊಳ್ಳುತ್ತಿದ್ದಾರೆ. ದುರಾಡಳಿತ ಮತ್ತು ಆರ್ಥಿಕ ಆಕ್ರಮಗಳ ವಿರುದ್ಧ ನಡೆಸುತ್ತಿರುವ ಹೋರಾಟ ಎಂದು ಮತ್ತೆ ಸ್ಪಷ್ಟಪಡಿಸುವ ಅನಿವಾರ್ಯತೆಯನ್ನು ಅವರೇ ಸೃಷ್ಟಿ ಮಾಡುತ್ತಿರುವುದಕ್ಕೆ ವಿಷಾದವಾಗುತ್ತಿದೆ ಎಂದು ಅವರು ಪ್ರಕಣೆಯಲ್ಲಿ ಹೇಳಿದ್ದಾರೆ.
ಸಹಕಾರ ಇಲಾಖೆ ಕಸಾಪ ಅಧ್ಯಕ್ಷರ ವಿರುದ್ಧ ನಡೆಸುತ್ತಿರುವ ವಿಚಾರಣೆಗೆ ಅಸಹಕಾರ ತೋರಿರುವ ಜೋಷಿಯವರ ವಿರುದ್ಧ ಈಗಾಗಲೇ ‘ಮಧ್ಯಂತರ ವರದಿ’ ಸಲ್ಲಿಕೆಯಾಗಿದ್ದು, ಅದರ ಆಧಾರದ ಮೇಲೆ ಅವರ ಮೇಲೆ ಕ್ರಮ ಕೈಗೊಳ್ಳಬೇಕಾದ ಹಂತದಲ್ಲಿಯೇ ದೂರದ ಯಾವುದೇ ಸಾರಿಗೆ ಮತ್ತು ವಸತಿ ಸೌಲಭ್ಯಗಳಿಲ್ಲದ ಕಲ್ಲಹಳ್ಳಿಯ ಸಣ್ಣ ಸಭಾಂಗಣದಲ್ಲಿ ಸಭೆ ನಡೆಸಲು ಮುಂದಾಗಿರುವುದರ ಹಿಂದಿನ ಕುತಂತ್ರಗಳನ್ನು ಮರೆಮಾಚಿ ಸಮಸ್ತ ಕಸಾಪ ಸದಸ್ಯರಿಗೆ ವಂಚಿಸಲು ಹೊರಟಿರುವ ಅಧ್ಯಕ್ಷರ ಧೋರಣೆ ಮತ್ತು ಕಪಟವನ್ನು ವಿರೋಧಿಸಬೇಕಾಗಿದೆ.
ಕಸಾಪಕ್ಕೆ ಹೊಸ ಹೊಸ ಸದಸ್ಯರನ್ನು ನೊಂದಣಿ ಮಾಡಿಸುವಲ್ಲಿ ವಿಫಲಗೊಂಡಿರುವ ಈ ಸ್ವಾರ್ಥಪರ ಅಧ್ಯಕ್ಷರು ಹಿರಿಯ ಅಜೀವ ಸದಸ್ಯರ ಸದಸ್ಯತ್ವದ ಹಕ್ಕು ಕಸಿಯುವ, ಅವರ ಸ್ವಾತಂತ್ರ್ಯ ಹರಣಕ್ಕೆ ಮುಂದಾಗಿರುವ ಪರಿಯು ದ್ವೇಷ ಸಾಧನೆಯಲ್ಲದೆ ಬೇರೇನೂ ಅಲ್ಲ. ಕಸಾಪದಂಥ ಸ್ವಾಯತ್ತ ಸಂಸ್ಥೆಯನ್ನು ಇಂತಹ ದುರುಳ ಅಧ್ಯಕ್ಷರು ಆಳುತ್ತಾ ಅಟ್ಟಹಾಸ ಮೆರೆಯುತ್ತಿರುವುದನ್ನು ಸರ್ಕಾರ ಹಾಗೂ ಸಹಕಾರ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳು ಕಣ್ಣುಮುಚ್ಚಿ ಸಹಿಸಿಕೊಳ್ಳಬಾರದು ಎಂದೂ ಅವರು ತಿಳಿಸಿದ್ದಾರೆ.
ಸಂಚಾಲಕರು
‘ಕನ್ನಡ ನಾಡು-ನುಡಿ ಜಾಗೃತಿ ಸಮತಿ’, ಬೆಂಗಳೂರು