ಬೆಂಗಳೂರು: ನಿವೃತ್ತಿಗೂ ಮೊದಲೇ ನಿಧನರಾದ 100 ಸರ್ಕಾರಿ ನೌಕರರ ಕುಟುಂಬದವರಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅನುಕಂಪದ ಆಧಾರದ ಮೇಲೆ ಉದ್ಯೋಗ ಕಲ್ಪಿಸಿಕೊಟ್ಟಿದೆ. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಇಂದು ಬೆಂಗಳೂರಿನ ಆರೋಗ್ಯ ಸೌಧದಲ್ಲಿ ಫಲಾನುಭವಿಗಳಿಗೆ ನೇಮಕಾತಿ ಆದೇಶ ಪತ್ರ ವಿತರಿಸಿದರು.
ನಂತರ ಮಾತನಾಡಿದ ಸಚಿವರು, ಕುಟಂಬಕ್ಕೆ ಆರ್ಥಿಕ ಬೆನ್ನೆಲುಬಾಗಿದ್ದವರನ್ನು ಕಳೆದುಕೊಂಡಾಗ ದೊಡ್ಡ ಆಘಾತವಾಗುತ್ತದೆ. ಕುಟುಂಬ ನಿರ್ವಹಣೆ ಕಷ್ಟವಾಗುತ್ತದೆ. ಅನುಕಂಪದ ಆಧಾರದಲ್ಲಿ ಕೆಲಸ ನೀಡಬೇಕೆನ್ನುವ ನಿಯಮವಿದ್ದರೂ ಸಾಕಷ್ಟು ವಿಳಂಬವಾಗುತ್ತದೆ. ಆದರೆ, ನಮ್ಮ ಸರಕಾರ ಯಾರನ್ನೂ ಅಲೆದಾಡಿಸದೇ ತಕ್ಷಣ ಉದ್ಯೋಗ ನೀಡಿದೆ ಎಂದರು.
ಸದ್ಯ 116 ಮಂದಿಗೆ ಅನುಕಂಪದ ಆಧಾರದಲ್ಲಿ ಉದ್ಯೋಗ ನೀಡಲಾಗಿದ್ದು, ಇನ್ನೂ 60 ಪ್ರಕರಣಗಳು ಬಾಕಿ ಉಳಿದಿವೆ. ಅವುಗಳನ್ನು ಕೂಡ ಅತಿ ಶೀಘ್ರದಲ್ಲಿಯೇ ಇತ್ಯರ್ಥಗೊಳಿಸುವುದಾಗಿ ಇದೇ ವೇಳೆ ಸಚಿವ ದಿನೇಶ್ ಗುಂಡೂರಾವ್ ಭರವಸೆ ನೀಡಿದರು. ಸರ್ಕಾರದ ಜವಾಬ್ದಾರಿಯನ್ನು ಅತ್ಯಂತ ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡಿ, ತ್ವರಿತಗತಿಯಲ್ಲಿ ಅನುಷ್ಠಾನ ಮಾಡಿರುವಂತ ಒಂದು ಕಾರ್ಯ ಆರೋಗ್ಯ ಇಲಾಖೆಯಲ್ಲಿ ನಡೆದಿದೆ. ಸರ್ಕಾರಿ ವ್ಯವಸ್ಥೆಯಲ್ಲಿ ಸರ್ಕಾರದ ಸೇವೆ ಮಾಡುತ್ತಿದ್ದಂತಹ ನೌಕರರಿಗೆ ಅವರು ಮೃತಪಟ್ಟಾಗ ಅವರ ಕುಟುಂಬದ ಯಾರಾದರೂ ಒಬ್ಬ ಸದಸ್ಯರಿಗೆ ಅನುಕಂಪದ ಆಧಾರದ ಮೇಲೆ ಸರ್ಕಾರಿ ನೌಕರಿ ನೀಡುವಂತಹ ಯೋಜನೆ ಇದೆ. ಆದರೆ ನಮ್ಮ ಆಡಳಿತ ವ್ಯವಸ್ಥೆಯಲ್ಲಿ ವರ್ಷಾನುಗಟ್ಟಲೆ ಅವರಿಗೆ ಉದ್ಯೋಗ ಸಿಗುವುದಿಲ್ಲ. ಅದಕ್ಕಾಗಿ ಓಡಾಡುವಂತ ಪರಿಸ್ಥಿತಿ ನಿರ್ಮಾಣವಾಗಿರುತ್ತದೆ. ಈ ಪ್ರಕ್ರಿಯೆಗಳು, ಅದರ ಅನುಸರಣೆಗಳು ಮುಂತಾದ ಹಲವಾರು ಓಡಾಟದಿಂದಾಗಿ ಹಲವಾರು ಬಾರಿ ಎಷ್ಟು ವರ್ಷಗಳಾದರೂ ಕೆಲಸ ಸಿಗುವುದಿಲ್ಲ. ಆದರೆ ಆರೋಗ್ಯ ಇಲಾಖೆಯಲ್ಲಿ ತ್ವರಿತಗತಿಯಲ್ಲಿ ಉದ್ಯೋಗ ದೊರಕಿಸಿಕೊಡಲಾಗಿದೆ ಎಂದರು.
ಸರ್ಕಾರಿ ಕೆಲಸ ಪಡೆದುಕೊಂಡವರು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ಇಲಾಖೆಗೆ, ಸಮಾಜಕ್ಕೆ ಮಾದರಿಯಾಗಬೇಕು. ಆರೋಗ್ಯ ಇಲಾಖೆ ಅಧಿಕಾರಿಗಳು ತಕ್ಷಣ ನೇಮಕಾತಿಗೆ ಬೇಕಾದ ಎಲ್ಲಾ ಪ್ರಕ್ರಿಯೆ ಪೂರ್ಣಗೊಳಿಸಿ ಶೀಘ್ರ ಉದ್ಯೋಗ ಸಿಗುವಂತೆ ಮಾಡಿರುವ ಕೆಲಸ ಶ್ಲಾಘನೀಯ.
ಅಭ್ಯರ್ಥಿಗಳ ವಿದ್ಯಾರ್ಹತೆಗೆ ಅನುಸಾರವಾಗಿ ಆರೋಗ್ಯ ಇಲಾಖೆಯಲ್ಲಿ ಪ್ರಥಮ ದರ್ಜೆ ಸಹಾಯ, ದ್ವಿತೀಯ ದರ್ಜೆ ಸಹಾಯಕ, ಆರೋಗ್ಯಾಧಿಕಾರಿ, ಗ್ರೂಪ್ ಡಿ ದರ್ಜೆ ಹುದ್ದೆಗಳನ್ನು ನೀಡಲಾಗಿದೆ ಎಂದು ವಿವರಿಸಿದರು.
ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಅಭಿನಂದಿಸಿದ ಸಚಿವ ದಿನೇಶ್ ಗುಂಡೂರಾವ್, ಸರ್ಕಾರಿ ನೌಕರಿಗೆ ಇರುವ ಮಹತ್ವ ತಮಗೆಲ್ಲರಿಗೂ ಗೊತ್ತಿದೆ ಹಾಗಾಗಿ ನೀವು ತಮ್ಮ ಕೆಲಸಕ್ಕೆ ಬರೆದು ಮಾಡಿಕೊಂಡ ನಂತರ ತಮ್ಮ ಕರ್ತವ್ಯಕ್ಕೆ ಚ್ಯುತಿ ಆಗದಂತೆ ಪ್ರಾಮಾಣಿಕತೆ ಹಾಗೂ ನಿಷ್ಠೆಯಿಂದ ಕೆಲಸ ಮಾಡಬೇಕು ಇಲಾಖೆಗೂ ನಿಮ್ಮಿಂದ ಒಳ್ಳೆಯ ಹೆಸರು ಬರಬೇಕು ಎಂದು ನಾನು ಆಶಿಸುತ್ತೇನೆ ಎಂದು ಹುರಿದುಂಬಿಸಿದರು.
ಈ ಸಂದರ್ಭದಲ್ಲಿ ಪ್ರಾಸ್ತಾವಿಕ ಮಾತುಗಳನ್ನಾಡಿದ ಆರೋಗ್ಯ ಇಲಾಖೆಯ ಆಯುಕ್ತ ಶಿವಕುಮಾರ್, ಅನುಕಂಪದ ಆಧಾರದ ಮೇಲೆ ನೇಮಕಾತಿಗಾಗಿ ಹಲವಷ್ಟು ವಿನಂತಿಗಳು ಹಾಗೂ ದೂರುಗಳನ್ನು ಇಲಾಖೆ ಸ್ವೀಕರಿಸಿದ್ದು ಪ್ರತಿಯೊಂದನ್ನೂ ಪರಿಶೀಲಿಸಿ ಮೂರು ಹಂತಗಳಲ್ಲಿ ಸಮಾಲೋಚನೆ ನಡೆಸಿ ಈಗಾಗಲೇ ಒಟ್ಟು 116 ಹುದ್ದೆಗಳಿಗೆ ನೇಮಕಾತಿ ಆದೇಶಗಳನ್ನು ನೀಡಲಾಗಿದೆ. ಇದರ ಮುಂದಿನ ಹಂತವಾಗಿ ಪ್ರಥಮ ದರ್ಜೆ ಸಹಾಯಕರು, ದ್ವಿತೀಯ ದರ್ಜೆ ಸಹಾಯಕರು, ಗ್ರೂಪ್-ಡಿ, ಕಿರಿಯ ಪ್ರಯೋಗ ಶಾಲಾ ತಾಂತ್ರಿಕಾಧಿಕಾರಿ , ಆರೋಗ್ಯ ನಿರೀಕ್ಷಣಾಧಿಕಾರಿ ಸೇರಿದಂತೆ ಒಟ್ಟು ನೂರು ಹುದ್ದೆಗಳಿಗೆ ಈಗ ನೇಮಕಾತಿ ಆದೇಶ ವಿತರಿಸಲಾಗುತ್ತಿದೆ. ಮಾನ್ಯ ಸಚಿವರ ಅಧ್ಯಕ್ಷತೆಯಲ್ಲಿ ಹಾಗೂ ಪ್ರೋತ್ಸಾಹದೊಂದಿಗೆ ಈ ನೇಮಕಾತಿ ವಿತರಣಾ ಸಮಾರಂಭ ನಡೆದಿರುವುದು ಇಲಾಖೆಗೆ ಇನ್ನಷ್ಟು ಹೆಚ್ಚಿನ ಉತ್ಸಾಹ ತುಂಬುತ್ತದೆ, ಸರ್ಕಾರದ, ವ್ಯವಸ್ಥೆಯ ಮೇಲಿನ ಗೌರವ ಇಮ್ಮಡಿಯಾಗಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆ ಆಯುಕ್ತ ಕೆ.ಬಿ. ಶಿವಕುಮಾರ್ ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕ ಡಾ.ಅವಿನಾಶ್ ಮೆನನ್ ರಾಜೇಂದ್ರನ್, ರಾಷ್ಟ್ರೀಯ ಅರೋಗ್ಯ ಅಭಿಯಾನದ ನಿರ್ದೇಶಕರಾದ ಡಾ.ಅವಿನಾಶ್ ಮೆನನ್ ಆರೋಗ್ಯ ಇಲಾಖೆಯ ನಿರ್ದೇಶಕ ವಸಂತ್ ಕುಮಾರ್ ಉಪಸ್ಥಿತರಿದ್ದರು.