ನ.  7- 9ರವರೆಗೆ 2ನೇ ರಾಷ್ಟ್ರೀಯ ಸಾಂಸ್ಕೃತಿಕ ಪೈಥಿಯನ್ ಕ್ರೀಡಾಕೂಟ: ಗದಾ ಯುದ್ಧ, ಗೋಣಿ ಚೀಲ ಓಟ, ಕಪ್ಪೆ ಜಿಗಿತಕ್ಕೂ ಅವಕಾಶ

Most read

ಬೆಂಗಳೂರು: ನಗರದ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ನವೆಂಬರ್  7 ರಿಂದ 9ರ ವರೆಗೆ ಕ್ರಿಕೆಟ್, ಪ್ರಾಚೀನ ಸಮರ ಕಲೆಗಳು, ಪಾರಂಪರಿಕ ಆಟೋಟಗಳು, ನೃತ್ಯ, ಸಂಗೀತ, ಸಂಸ್ಕೃತಿಕ ಸ್ಪರ್ಧೆಗಳನ್ನೊಳಗೊಂಡ ಹಲವು ವೈಶಿಷ್ಟ್ಯಗಳನ್ನು ಒಂದೇ ವೇದಿಕೆಯಡಿ ಪ್ರಸ್ತುತಪಡಿಸುವ 2ನೇ ರಾಷ್ಟ್ರೀಯ ಸಾಂಸ್ಕೃತಿಕ ಪೈಥಿಯನ್ ಕ್ರೀಡಾಕೂಟ 2025 ಆಯೋಜಿಸಲಾಗಿದೆ.

ಮೂರು ದಿನಗಳ ಕಾಲ ಆಧುನಿಕ ಗದಾ ಯುದ್ಧ, ತಾಯ್ಕ್ವಾಂಡೋ, ಗೋಣಿ ಚೀಲ ಓಟ, ಕಪ್ಪೆ ಜಿಗಿತ, ಟೆನಿಸ್, ವಾಲಿಬಾಲ್, ಸೈಕ್ಲೋಥಾನ್, ಮ್ಯಾರಥಾನ್ ಸೇರಿ ಎಂಟು ಬಗೆಯ ಕಲಾ ಪ್ರಕಾರಗಳ ಕ್ರೀಡಾ ಕೂಟ ನಡೆಯಲಿದ್ದು, ದೇಶ, ವಿದೇಶಗಳ ಹಲವಾರು ಗಣ್ಯರು ಪಾಲ್ಗೊಳ್ಳಲಿದ್ದಾರೆ. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಕ್ರೀಡಾ ಹಬ್ಬಕ್ಕೆ ಚಾಲನೆ ನೀಡಲಿದ್ದಾರೆ ಎಂದು ಪೈಥಿಯನ್ ಕ್ರೀಡಾಕೂಟಗಳ ಸಂಸ್ಥಾಪಕರಾದ ಬಿಜೇಂದರ್ ಗೋಯಲ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು. ಪೈಥಿಯನ್ ಕ್ರೀಡೆಗಳು ಪ್ರಾಚೀನ ಗ್ರೀಸ್‌ ನಿಂದ ಜನ್ಮ ತಳೆದಿದ್ದು, ಇದು ಒಲಿಂಪಿಕ್ಸ್ ನೊಂದಿಗೆ ಪ್ರಮುಖ ಪಾನ್-ಹೆಲ್ಲೆನಿಕ್ ಹಬ್ಬಗಳಲ್ಲಿ ಒಂದಾಗಿದೆ. ಪೈಥಿಯನ್ ಕ್ರೀಡೆಗಳು ಜಗತ್ತಿನ ಅತ್ಯಂತ ಹಳೆಯ ಸಾಂಸ್ಕೃತಿಕ ಕ್ರೀಡಾಕೂಟಗಳಾಗಿದ್ದು, 2600 ವರ್ಷಗಳ ಹಳೆಯ ಪರಂಪರೆಯನ್ನು ಆಧುನಿಕ ರೂಪದಲ್ಲಿ ಜೀವಂತಗೊಳಿಸುತ್ತಿದ್ದೇವೆ ಎಂದರು.

ಪೈಥಿಯನ್ ಕ್ರೀಡೆ ಜಾಗತಿಕ ಚಳುವಳಿಯಾಗಿದ್ದು, ಇದು ಪ್ರಾಚೀನ ಪರಂಪರೆ ಮತ್ತು ಆಧುನಿಕತೆಯ ನಡುವೆ ಸೇತುವೆ ನಿರ್ಮಿಸುತ್ತದೆ. ಕಲಾವಿದರು, ಕಲಾಪ್ರದರ್ಶಕರು, ಸಂಪ್ರದಾಯಿಕ ಆಟಗಾರರು ಮತ್ತು ಯುವ ಸಮೂಹವನ್ನು ಒಟ್ಟುಗೂಡಿಸುತ್ತದೆ. ತಮ್ಮೂಲಕ ಜಾಗತಿಕ ಸಾಂಸ್ಕೃತಿಕ ಮಾರುಕಟ್ಟೆಯಲ್ಲಿ ಭವಿಷ್ಯದಲ್ಲಿ ದೇಶಕ್ಕೆ ಮಹತ್ವದ ಸ್ಥಾನ ದೊರೆಯಲಿದೆ. ಕಳೆದ ವರ್ಷ ಮೊದಲ ಕ್ರೀಡಾಕೂಟ ಪಂಚಕುಲದಲ್ಲಿ ನಡೆದಿದ್ದು, ಐದು ಸಾವಿರಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು. ಈ ಬಾರಿ ವಿದೇಶಾಂಗ ಇಲಾಖೆಯ ಸಹಯೋಗದೊಂದಿಗೆ ಕ್ರೀಡಾ ಹಬ್ಬ ಆಚರಿಸುತ್ತಿದ್ದೇವೆ  ಎಂದು ಹೇಳಿದರು.

ಇದಕ್ಕಾಗಿ ವಿಶೇಷ ಒಟಿಟಿ ವೇದಿಕೆಯನ್ನು – https://tv.pythiangames.org  ಆರಂಭಿಸಲಾಗಿದ್ದು, ಇಂತಹ ವೈಶಿಷ್ಟ್ಯಪೂರ್ಣ ಸಂಸ್ಕೃತಿಯನ್ನು ಉಳಿಸಲು ಶೀಘ್ರದಲ್ಲೇ “ಪೈಥಿಯನ್” ವಾಹಿಯನ್ನು ಪ್ರಾರಂಭಿಸುತ್ತಿದ್ದೇವೆ. ಇದು ರಾಜ್ಯದ ಸಾಂಸ್ಕೃತಿಕ ಕೀರ್ತಿಯನ್ನು ಹೆಚ್ಚಿಸುವುದಷ್ಟೇ ಅಲ್ಲ, ಪ್ರವಾಸೋದ್ಯಮ, ಸ್ಥಳೀಯ ಆರ್ಥಿಕತೆ ಮತ್ತು ಅಂತರಾಷ್ಟ್ರೀಯ ಮಾನ್ಯತೆಗೂ ಉತ್ತೇಜನ ನೀಡುತ್ತದೆ. ತಂತ್ರಜ್ಞಾನ ಮತ್ತು ಸಂಸ್ಕೃತಿಯ ಕೇಂದ್ರವಾಗಿರುವ ಬೆಂಗಳೂರು, ಈ ಮಹೋತ್ಸವಕ್ಕೆ ಸೂಕ್ತ ವೇದಿಕೆಯಾಗಿದೆ ಎಂದು ಬಿಜೇಂದರ್ ಗೋಯಲ್ ಹೇಳಿದರು.

ನಿವೃತ್ತ ಐಎಎಸ್ ಅಧಿಕಾರಿ ಹಾಗೂ ಕ್ರೀಡಾಕೂಟದ ಸಂಘಟನಾ ವಿಭಾಗದ ಅಧ್ಯಕ್ಷ ಬಿ. ಹಚ್. ಅನಿಲ್ ಕುಮಾರ್ ಮಾತನಾಡಿ, ಪೈಥಿಯನ್ ಕ್ರೀಡೆಗಳು ಕಲಾವಿದರು ಮತ್ತು ಸಂಪ್ರದಾಯಿಕ ಆಟಗಾರರಿಗೆ ಸೂಕ್ತ ವೇದಿಕೆಯಾಗಿದೆ. ಇದು ಕಲೆ ಮತ್ತು ಸಂಪ್ರದಾಯಿಕ ಕ್ರೀಡೆಗಳಿಗೆ ಸಮಾನ ಗೌರವ ನೀಡುತ್ತದೆ. ಕರ್ನಾಟಕದ ಕಲಾವಿದರು ಮತ್ತು ಯುವ ಜನಾಂಗಕ್ಕೆ ಇದು ಇತಿಹಾಸ ಸೃಷ್ಟಿಸುವ ಅವಕಾಶ ಎಂದರು.

ಹರಿಯಾಣದ ಆಹಾರ ಇಲಾಖೆ ಆಯುಕ್ತ ರಾಜೇಶ್ ಗೋಪಾಲ್ ಮಾತನಾಡಿ, ಇದು ದೇಶದ ಕ್ರೀಡಾ ಮತ್ತು ಸಾಂಸ್ಕೃತಿ ಬಾಂಧವ್ಯವನ್ನು ಬಲಪಡಿಸಲು ಸೂಕ್ತ ವೇದಿಕೆಯಾಗಿದ್ದು, ಬೆಂಗಳೂರಿನಂತಹ ವೈವಿಧ್ಯಮಯ ನಗರದಲ್ಲಿ ಇಂತಹ ಭವ್ಯ ಕ್ರೀಡಾ ಕೂಟ ನಡೆಯುತ್ತಿರುವುದು ನಿಜಕ್ಕೂ ವಿಶೇಷ ಎಂದರು.

ಸುದ್ದಿಗೋಷ್ಠಿಯಲ್ಲಿ ಸಂಘಟನಾ ಕಾರ್ಯದರ್ಶಿ ಸ್ನೇಹಾ ವೆಂಕಟ್ರಮಣಿ, ಸ್ಥಾಪಕ ಟ್ರಸ್ಟಿ ಲಲಿತಾ ಗೋಯಲ್ ಮತ್ತು ಡೆಲ್ಫಿಕ್ ಇಂಡಿಯಾ ಟ್ರಸ್ಟ್‌ ನ ಟ್ರಸ್ಟಿ ಶಿವಕುಮಾರ್, ಕರ್ನಾಟಕ ಸಾಫ್ಟ್‌ ಬಾಲ್ ಪ್ರೀಮಿಯರ್ ಲೀಗ್ ನ ಅನಿಲ್  ದಾಸರಹಳ್ಳಿ ಮತ್ತಿತರರು ಉಪಸ್ಥಿತರಿದ್ದರು.

More articles

Latest article