ನವದೆಹಲಿ: 2023 ರ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಅಲ್ಪಸಂಖ್ಯಾತ, ಪರಿಶಿಷ್ಟ ಜಾತಿ ಮತ್ತು ಹಿಂದುಳಿದ ಜಾತಿಗಳ ಮತದಾರರನ್ನು ಮತದಾರರ ಪಟ್ಟಯಿಂದ ತೆಗೆದು ಹಾಕುವ ಉದ್ದೇಶ ಇತ್ತು ಎಂದು ಆಳಂದ ಕಾಂಗ್ರೆಸ್ ಶಾಸಕ ಬಿ.ಆರ್. ಪಾಟೀಲ್ ಆರೋಪಿಸಿದ್ದಾರೆ.
ಆಳಂದ ಕ್ಷೇತ್ರದಲ್ಲಿ ಮತಗಳ್ಳತನ ನಡೆಸಲು ಸಂಚು ನಡೆಸಿದ್ದರ ಬಗ್ಗೆ ಲೋಕಸಭೆ ಪ್ರತಿಫಕ್ಷ ನಾಯಕ ರಾಹುಲ್ ಗಾಂಧಿ ಅವರು ಇಂದು ಸುದ್ದಿಗೋಷ್ಠಿಯಲ್ಲಿ ಸಾಕ್ಷ್ಯಗಳ ಸಹಿತ ವಿವರಣೆ ನೀಡಿದ್ದರು.
ನಂತರ, ದೆಹಲಿಯಲ್ಲೇ ಸುದ್ದಿಗಾರರೊಂದಿಗೆ ಮಾತನಾಡಿದ ಪಾಟೀಲ್ ಅವರು, ಮತಗಳನ್ನು ಡಿಲೀಟ್ ಮಾಡುವ ಬಗ್ಗೆ ಸುಳಿವು ಸಿಕ್ಕಾಗ ನಾನು ಮತ್ತು ಸಚಿವ ಪ್ರಿಯಾಂಕ್ ಖರ್ಗೆ ಇಬ್ಬರೂ ಚುನಾವಣಾ ಆಯೋಗ ಮತ್ತು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ನಂತರ ನಾವು ಪತ್ರಿಕಾಗೋಷ್ಠಿ ನಡೆಸಿದ್ದನ್ನು ನೆನಪಿಸಿಕೊಂಡರು.
ದುರುದ್ದೇಶದಿಂದ ಚುನಾವಣೆಯಲ್ಲಿ ನನ್ನನ್ನು ಸೋಲಿಸಲು ಪಿತೂರಿ ನಡೆದಿದೆ. ಮತದಾರರ ಹೆಸರನ್ನು ಡಿಲೀಟ್ ಮಾಡಲು ಅನಾಮಧೇಯ ವ್ಯಕ್ತಿಗಳು ಚುನಾವಣಾ ಆಯೋಗದ ಫಾರ್ಮ್-7 ಅಡಿಯಲ್ಲಿ ಮನವಿ ಸಲ್ಲಿಸಿದ್ದಾರೆ. ಈ ಸಂಬಂಧ ಆಗಿನ ಚುನಾವಣಾ ಅಧಿಕಾರಿ ನೀಡಿದ ದೂರಿನ ಆಧಾರದ ಮೇಲೆ ಆಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆದರೆ ಪ್ರಕರಣಕ್ಕೆ ತಾರ್ಕಿಕ ಅಂತ್ಯ ಸಿಗಲಿಲ್ಲ. ನಂತರ ನಮ್ಮ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಆ ಪ್ರಕರಣವನ್ನು ಸಿಐಡಿಗೆ ವಹಿಸಿತ್ತು. ಆದರೆ ಸಿಐಡಿ ತನಿಖೆಗೆ ಚುನಾವಣಾ ಆಯೋಗದ ಅಧಿಕಾರಿಗಳು ಸಮರ್ಪಕ ಮಾಹಿತಿ ಪೂರೈಕೆ ಮಾಡದ ಹಿನ್ನೆಲೆಯಲ್ಲಿ ತನಿಖೆ ಸ್ಥಗಿತಗೊಂಡಿದೆ ಎಂದು ವಿವರಣೆ ನೀಡಿದರು.
ಆಳಂದ ಕ್ಷೇತ್ರದಲ್ಲಿ ನನ್ನ ಬೆಂಬಲಿಗ ಮತದಾರರನ್ನು ಕೈಬಿಡಲು ಮನವಿ ಸಲ್ಲಿಸಲಾಗಿದೆ. ನಾನು ಮತ್ತು ನಮ್ಮ ಪಕ್ಷ ಪ್ರಬಲವಾಗಿದ್ದ ಪ್ರದೇಶಗಳಲ್ಲಿ ನನ್ನ ಕಾರ್ಯಕರ್ತರು ಮತ್ತು ನನ್ನ ಬೆಂಬಲಿಗರ ಮೇಲೆ ದಾಳಿ ನಡೆಸಿದ್ದನ್ನೂ ಅವರು ನೆನಪಿಸಿಕೊಂಡರು.
ದುರುದ್ದೇಶದಿಂದ ಅಲ್ಪಸಂಖ್ಯಾತರು, ಪರಿಶಿಷ್ಟ ಜಾತಿ ಮತ್ತು ಹಿಂದುಳಿದ ಜಾತಿಯ ಮತಗಳನ್ನೇ ಡಿಲೀಟ್ ಮಾಡಲು ಗುರಿ ಹೊಂದಿದ್ದರು. ಸಮಗ್ರ ತನಿಖೆ ನಡೆಸಿದರೆ ಸತ್ಯಾಂಶ ಹೊರಬರಲಿದೆ. ಆದರೆ ತನಿಖೆ ನಡೆಸಲು ಚುನಾವಣಾ ಸಹಕರಿಸುತ್ತಿಲ್ಲ ಪಾಟೀಲ್ ಆಪಾದಿಸಿದರು.