ಜವಳಿ,ಸಿದ್ಧ ಉಡುಪು ಕ್ಷೇತ್ರದಲ್ಲಿ 2 ಲಕ್ಷ ಉದ್ಯೋಗ ಸೃಷ್ಟಿಗೆ ಒತ್ತು: ಸಚಿವ ಶಿವಾನಂದ ಪಾಟೀಲ

Most read

ಬೆಂಗಳೂರು: ಜವಳಿ ಹಾಗೂ ಸಿದ್ಧ ಉಡುಪು ಕ್ಷೇತ್ರದಲ್ಲಿ 2 ಲಕ್ಷ ಉದ್ಯೋಗ ಸೃಷ್ಟಿಗೆ ಪೂರಕವಾಗಿ ಜವಳಿ ನೀತಿ 2025-30 ನೀತಿ ರೂಪಿಸಲಾಗುವುದು ಎಂದು ಜವಳಿ, ಕಬ್ಬು ಅಭಿವೃದ್ಧಿ, ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ತಿಳಿಸಿದ್ದಾರೆ. ನೂತನ ಜವಳಿ ನೀತಿ ರಚನೆಗೆ ಸಲಹೆ ಪಡೆಯಲು ವಿಧಾನಸೌಧದಲ್ಲಿ ಇಂದು ಜನಪ್ರತಿನಿಧಿಗಳು ಮತ್ತು ಜವಳಿ ಉದ್ಯಮಿಗಳ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಹೆಚ್ಚಿನ ಬಂಡವಾಳ ಆಕರ್ಷಿಸಲು ಉದ್ದೇಶಿಸಲಾಗಿದೆ. ಜವಳಿ ಕ್ಷೇತ್ರದ ಅಭಿವೃದ್ಧಿಗೆ ಪೂರಕವಾದ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. 2020ರಿಂದ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ ಮತ್ತು ಕರ್ನಾಟಕ ರಾಜ್ಯ ಜವಳಿ ಮೂಲ ಸೌಕರ್ಯ ಅಭಿವೃದ್ಧಿ ನಿಗಮಗಳ ಲೆಕ್ಕಪರಿಶೋಧನೆ ಆಗಿರಲಿಲ್ಲ. ಈಗ ನಡೆಯುತ್ತಿದೆ. ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ ಮತ್ತು ಕರ್ನಾಟಕ ರಾಜ್ಯ ಜವಳಿ ಮೂಲ ಸೌಕರ್ಯ ಅಭಿವೃದ್ಧಿ ನಿಗಮ ಎರಡನ್ನೂ ವಿಲೀನ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ ಎಂದರು.

ಸರ್ಕಾರದ ಇಲಾಖೆಗಳಿಗೆ ಕೈಮಗ್ಗ ಉತ್ಪನ್ನಗಳನ್ನು ಖರೀದಿ ಮಾಡಲು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗಿದೆ. ಶಿಕ್ಷಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಿಗೆ ಕೈಮಗ್ಗ ಉತ್ಪನ್ನಗಳನ್ನು ಖರೀದಿ ಮಾಡಿದರೆ ನೇಕಾರರಿಗೆ ಉತ್ತೇಜನ ನೀಡಿದಂತಾಗುತ್ತದೆ ಎಂದು ಹೇಳಿದರು.

ಶೂನ್ಯ ಬಡ್ಡಿ ದರದ ಸಾಲದ ಮೇಲೂ ಜಿಎಸ್‌ಟಿ ವಿಧಿಸುತ್ತಿರುವುದಿಂದ ನೇಕಾರರಿಗೆ ಬಡ್ಡಿ ರಹಿತ ಸಾಲ ಸಿಕ್ಕರೂ ಪ್ರಯೋಜನ ಆಗುತ್ತಿಲ್ಲ ಎಂಬ ದೂರು ಕೇಳಿ ಬಂದಿದೆ. ಜಿಎಸ್‌ಟಿ ತೆರವಿಗೆ ಪ್ರಯತ್ನ ಮಾಡಲಾಗುವುದು. ಬೆಳಗಾವಿಯಲ್ಲಿ ಜವಳಿ ಸಂಶೋಧನಾ ಕೇಂದ್ರ ಆರಂಭಿಸಲಾಗುತ್ತದೆ. ಚರ್ಮ ಹೊರತುಪಡಿಸಿ ತಯಾರಾಗುವ ಚಪ್ಪಲಿ ಮತ್ತು ಶೂ ಉದ್ಯಮದ ಅಭಿವೃದ್ಧಿಗೂ ಹೊಸ ನೀತಿ ರೂಪಿಸಬೇಕು ಎಂಬ ಬೇಡಿಕೆ ಕೇಳಿ ಬಂದಿದೆ ಎಂದು ತಿಳಿಸಿದರು.

ಜವಳಿ ಕ್ಷೇತ್ರದ ಅಭಿವೃದ್ಧಿಗೆ ಯೋಜನೆಗಳಿಂದ ಪ್ರಯೋಜನ ಆಗುತ್ತಿಲ್ಲ. ಬಜೆಟ್‌ನಲ್ಲಿ ಅಗತ್ಯ ಅನುದಾನ ಒದಗಿಸಿದರೆ ಮಾತ್ರ ಪ್ರಯೋಜನ ಆಗುತ್ತದೆ. ಆದ್ದರಿಂದ ಮುಖ್ಯಮಂತ್ರಿಗಳ ಬಳಿ ನಿಯೋಗ ತೆರಳಿ ಅನುದಾನ ಪ್ರಮಾಣ ಹೆಚ್ಚಳ ಮಾಡಲು ಮನವಿ ಮಾಡಬೇಕು ಎಂದು ಮಾಜಿ ಶಾಸಕ ಎಂ.ಡಿ. ಲಕ್ಷ್ಮೀನಾರಾಯಣ ಸಲಹೆ ನೀಡಿದರು.

ಉತ್ತರ ಕರ್ನಾಟಕದಲ್ಲಿ ಜವಳಿ ಕ್ಷೇತ್ರದ ಅಭಿವೃದ್ಧಿಗೆ ಸಂಶೋಧನಾ ಕೇಂದ್ರ ಆರಂಭಿಸುವಂತೆ ಶಾಸಕ ಅಭಯ ಪಾಟೀಲ ಸಲಹೆ ನೀಡಿದರು.

ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಕಾರ್ಯದರ್ಶಿ ಸಮೀರ್‌ ಶುಕ್ಲಾ, ಯೋಜನಾ ಇಲಾಖೆ ಕಾರ್ಯದರ್ಶಿ ರಂದೀಪ್‌ ಚೌಧರಿ, ಜವಳಿ ಇಲಾಖೆ ಆಯುಕ್ತೆ ಜ್ಯೋತಿ, ಕೆಎಚ್‌ಡಿಡಿಸಿ ವ್ಯವಸ್ಥಾಪಕ ನಿರ್ದೇಶಕಿ ಗರೀಮಾ ಪನ್ವಾರ್‌ ಸೇರಿದಂತೆ ಜವಳಿ ಇಲಾಖೆ ಹಲವು ಅಧಿಕಾರಿಗಳು, ಜವಳಿ ಉದ್ಯಮಿಗಳು ಸಭೆಯಲ್ಲಿ ಭಾಗವಹಿಸಿದ್ದರು.

More articles

Latest article