ನೇಪಾಳ: ಸರ್ಕಾರ ರಚನೆಗೆ ಕಸರತ್ತು; ಜೈಲುಗಳಿಂದ 15,000 ಕೈದಿಗಳು ಪರಾರಿ

Most read

ಕಠ್ಮಂಡು: ನೇಪಾಳದಲ್ಲಿ ಮಧ್ಯಂತರ ಸರ್ಕಾರ ರಚನೆ ಕುರಿತು ಜೆನ್‌ ಝಿತಲೆಮಾರಿನ ಮುಖಂಡರು ಅಧ್ಯಕ್ಷ ರಾಮಚಂದ್ರ ಪೌಡೆಲ್ ಹಾಗೂ ಸೇನಾ ಮುಖ್ಯಸ್ಥ ಅಶೋಕ್ ರಾಜ್ ಸಿಗ್ನಲ್‌ ಅವರೊಂದಿಗೆ ಮಾತುಕತೆ ನಡೆಸಲು ಮುಂದಾಗಿದ್ದಾರೆ.

ಮತ್ತೊಂದು ಕಡೆ ಅರಾಜಕತೆಯನ್ನೇ ನೆಪವಾಗಿಟ್ಟುಕೊಂಡು ಬಂಧೀಖಾನೆಗಳಲ್ಲಿ ಭದ್ರತಾ ಸಿಬ್ಬಂದಿಯೊಂದಿಗೆ ಘರ್ಷಣೆ ನಡೆಸಿದ್ದಾರೆ. ವಿವಿಧ ಜೈಲುಗಳಿಂದ ಸುಮಾರು 15,000ಕ್ಕೂ ಹೆಚ್ಚು ಕೈದಿಗಳು ಪರಾರಿಯಾಗಿದ್ದಾರೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.

ಸರ್ಕಾರ ರಚನೆ ಕುರಿತು ಸೇನಾ ಪ್ರಧಾನ ಕಚೇರಿ ಭದ್ರಕಾಳಿಯಲ್ಲಿ ಮಾತುಕತೆ ನಡೆಯಲಿದೆ. ಮಾಜಿ ಮುಖ್ಯ ನ್ಯಾಯಮೂರ್ತಿ ಸುಶೀಲಾ ಕರ್ಕಿ, ಕಮ್ಮಂಡು ಮೇಯರ್ ಬಾಲೇಂದ್ರ ಶಾ ಮತ್ತಿತರರ ಹೆಸರು ಕೇಳಿಬರುತ್ತಿದೆ. ನೇಪಾಳ ಇಂಧನ ಪ್ರಾಧಿಕಾರದ ಸಿಇಒ ಕುಲ್ಕನ್ ಘಿಸಿಂಗ್ ಮತ್ತು ಮೇಯರ್ ಧರಣ್ ಹರ್ಕ ಸಂಪಂಗ್ ಅವರ ಹೆಸರುಗಳೂ ಪ್ರಸ್ತಾಪವಾಗಿವೆ. ಮಧ್ಯಂತರ ಸರ್ಕಾರವನ್ನು ಯಾರು ನಡೆಸಬೇಕು ಎಂದು ಜೆನ್ ಝಿ ಗುಂಪು ಚರ್ಚಿಸಲಿದೆ.

ಸಾಮಾಜಿಕ ಜಾಲತಾಣಗಳ ದುರುಪಯೋಗ ಮತ್ತು ಭ್ರಷ್ಟಾಚಾರ ಕುರಿತು ದೇಶಾದ್ಯಂತ ಪ್ರತಿಭಟನೆ ನಡೆದಿತ್ತು. ಇದರ ಪರಿಣಾಮ ಪ್ರಧಾನಿ ಕೆ.ಪಿ.ಶರ್ಮಾ ಓಲಿ ಅವರ ರಾಜೀನಾಮೆ ನೀಡಿದ್ದರು.ಇದೀಗ ನೂತನ ಪ್ರಧಾನಿ ಆಯ್ಕೆ ಕುರಿತು ಮಾತುಕತೆಗಳು ಆರಂಭವಾಗಿವೆ.

ವಿವಿಧ ಸಂಘ ಸಂಸ್ಥೆಗಳ ಮುಖ್ಯಸ್ಥರೊಂದಿಗೆ ಮಾತುಕತೆ ನಡೆಯಲಿದ್ದು, ದೇಶದ ಸದ್ಯದ ಪರಿಸ್ಥಿತಿ ಮತ್ತು ಕಾನೂನು ಹಾಗೂ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಚರ್ಚೆ ಮುಂದುವರೆಯಲಿದೆ.

ಮತ್ತೊಂದು ಕಡೆ ಪರಿಸ್ಥಿತಿಯ ಲಾಭ ಪಡೆದುಕೊಂಡು ಇಂದು ಬೆಳಿಗ್ಗೆ, ಮಾಧೇಶ್ ಪ್ರಾಂತ್ಯದ ರಾಮೆಚಾಪ್ ಜಿಲ್ಲಾ ಕಾರಾಗೃಹದಲ್ಲಿ ಕೈದಿಗಳು ಮತ್ತು ಭದ್ರತಾ ಸಿಬ್ಬಂದಿ ನಡುವೆ ತಿಕ್ಕಾಟ ನಡೆದಿದೆ. ತಮ್ಮ ಮೇಲೆ ಹಲ್ಲೆ ನಡೆಸಲು ಕೈದಿಗಳು ಮುಂದಾದಾಗ ಭದ್ರತಾ ಪಡೆ ಸಿಬ್ಬಂದಿ ಹಾರಿಸಿದ ಗುಂಡಿಗೆ ಮೂವರು ಕೈದಿಗಳು ಮೃತಪಟ್ಟು, 13 ಮಂದಿ ಗಾಯಗೊಂಡಿದ್ದಾರೆ.

ಬಂಧೀಖಾನೆ ಇಲಾಖೆ ಮೂಲಗಳ ಪ್ರಕಾರದೇಶದ  25ಕ್ಕೂ ಹೆಚ್ಚು ಜೈಲುಗಳಿಂದ 15,000ಕ್ಕೂ ಹೆಚ್ಚು ಕೈದಿಗಳು ಪಲಾಯನಮಾಡಿದ್ದಾರೆ ಎಂದು ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ.

More articles

Latest article