ಬೆಂಗಳೂರು: ಧರ್ಮಸ್ಥಳದಲ್ಲಿ ಸಂಭವಿಸಿರುವ ಅತ್ಯಾಚಾರ, ಕೊಲೆ, ಭೂ ಕಬಳಿಕೆ, ಮೈಕ್ರೋಫೈನಾನ್ಸ್ ನಂತಹ ಅಪರಾಧ ಕೃತ್ಯಗಳ ತನಿಖೆ ನಡೆಸಲು ಈಗ ರಚಿಸಲಾಗಿರುವ ವಿಶೇಷ ತನಿಖಾ ದಳ (ಎಸ್ ಐಟಿ) ಕ್ಕೆ ಅಧಿಕಾರ ನೀಡಬೇಕು ಇಲ್ಲವೇ ಪ್ರತ್ಯೇಕ ಎಸ್ ಐಟಿ ರಚಿಸಬೇಕು ಎಂದು ಎಂದು ಸಮಾನ ಮನಸ್ಕ ಸಂಘಟನೆಗಳು ಆಗ್ರಹಪಡಿಸಿವೆ.
ಬೆಂಗಳೂರಿನಲ್ಲಿ ಸಭೆ ಸೇರಿ ವಿಸ್ತೃತ ಚರ್ಚೆ ನಡೆಸಿದ ಸಮಾನ ಸಂಘಟನೆಗಳ ಮುಖಂಡರು ಈ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಸಭೆಯಲ್ಲಿ ಚಿಂತಕರಾದ ಶಿವಶಂಕರ್, ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಸಿ. ಎಸ್. ದ್ವಾರಕನಾಥ್, ನಟ ಚೇತನ್ ಅಹಿಂಸಾ ಮತ್ತಿತರರು ಭಾಗಿಯಾಗಿದ್ದರು.
ಸಭೆಯಲ್ಲಿ ಮಾತನಾಡಿದ ಚಿಂತಕರು ಪದ್ಮಲತಾ, ವೇದದಲ್ಲಿ, ಮಾವುತ ನಾರಾಯಣ, ಯಮುನ, ಸೌಜನ್ಯ ಕೊಲೆ ಪ್ರಕರಣಗಳು, ಭೂಕಬಳಿಕೆ, ಮೈಕ್ರೊ ಫೈನಾನ್ಸ್ ದೌರ್ಜನ್ಯಗಳು, ದಲಿತರ ಮೀಸಲು ಭೂಮಿ ಕಬಳಿಕೆ, ಆರ್ಥಿಕ ಅಪರಾಧದ ಆರೋಪದ ಪ್ರಕರಣಗಳನ್ನು ತನಿಖೆ ನಡೆಸಲು ಈಗ ರಚಿಸಲಾಗಿರುವ ವಿಶೇಷ ತನಿಖಾ ದಳ (ಎಸ್ ಐಟಿ) ಕ್ಕೆ ಅಧಿಕಾರ ನೀಡಬೇಕು. ಇಲ್ಲವೇ ಪ್ರತ್ಯೇಕ ಎಸ್ ಐಟಿ ರಚಿಸಬೇಕು ಎಂದು ಎಂದು ಸಮಾನ ಮನಸ್ಕ ಸಂಘಟನೆಗಳು ಸರಕಾರವನ್ನು ಒತ್ತಾಯಿಸಿದರು.
ಸಭೆಯಲ್ಲಿ ಈ ಕೆಳಕಂಡ ನಿರ್ಣಯಗಳನ್ನು ಅಂಗೀಕರಿಸಿ ಸರ್ಕಾರದ ಗಮನಕ್ಕೆ ತರಲು ನಿರ್ಧರಿಸಲಾಗಿದೆ.
ಧರ್ಮಸ್ಥಳ ಮತ್ತು ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ 20 ವರ್ಷಗಳಿಂದ (2005 ರಿಂದ 2025) ದಾಖಲಾದ ಅಸಹಜ ಸಾವು, ಅತ್ಯಾಚಾರ, ಹಲ್ಲೆ, ಕೊಲೆ, ಶವ ಹೂತಿಟ್ಟ ಪ್ರಕರಣ, ನೂರಾರು ಹೆಣ್ಣುಮಕ್ಕಳ ನಾಪತ್ತೆ ಪ್ರಕರಣವನ್ನು ಭೇದಿಸಲು ರಾಜ್ಯ ಸರ್ಕಾರವು ಎಸ್ಐಟಿ ರಚಿಸಿರುವುದನ್ನು ಒಕ್ಕೂಟ ಸ್ವಾಗತಿಸಿದೆ. ಆದರೂ ಬಿಜೆಪಿ ಹಾಗು ಪಟ್ಟಭದ್ರ ಶಕ್ತಿಗಳು SIT ತನಿಖೆಯನ್ನು ಸ್ಥಗಿತಗೊಳಿಸಲು ಇನ್ನಿಲ್ಲದ ಪ್ರಯತ್ನ ನಡೆಸುತ್ತಿದ್ದಾರೆ. ಸರಕಾರ ಇಂತಹ ಪಿತೂರಿ, ಒತ್ತಡಗಳಿಗೆ ಮಣಿಯದೆ SIT ತನ್ನ ವ್ಯಾಪ್ತಿಯಲ್ಲಿ ಪೂರ್ಣ ಪ್ರಮಾಣದಲ್ಲಿ ತನಿಖೆ ಸಡೆಸಲು ಅನುವು ಮಾಡಿಕೊಡಬೇಕು ಎಂದು ಮನವಿ ಮಾಡಿಕೊಂಡಿದೆ.
ಪದ್ಮಲತಾ ಪ್ರಕರಣ: ಧರ್ಮಸ್ಥಳ ಗ್ರಾಮದ ಸಿಪಿಐಎಂ ಶಾಖಾ ಕಾರ್ಯದರ್ಶಿ ಎಂ ಕೆ ದೇವಾನಂದರ ಹದಿಹರೆಯದ ಪುತ್ರಿಯನ್ನು1986 ಡಿಸೆಂಬರ್ ತಿಂಗಳಲ್ಲಿ ಅಪಹರಿಸಿ ತಿಂಗಳ ತರುವಾಯ ನೆರಿಯಾ ಹೊಳೆಗೆ ಎಸೆದ ಪ್ರಕರಣದಲ್ಲಿ ಇದುವರೆಗೂ ನ್ಯಾಯ ಒದಗಿಸಿಲ್ಲ. ಆ ಸಂದರ್ಭದಲ್ಲಿ ನಡೆದ ಹೋರಾಟಗಳಿಗೆ ಮಣಿದು ಸಿಐಡಿ ತನಿಖೆಗೆ ಪ್ರಕರಣವನ್ನು ಒಪ್ಪಿಸಲಾಯಿತಾದರೂ, ಪ್ರಭಾವಗಳಿಗೆ ಮಣಿದು ಪತ್ತೆ ಹಚ್ಚಲಾಗದ ಪ್ರಕರಣ ಎಂದು ವರದಿ ನೀಡಿ ಪ್ರಕರಣವನ್ನು ಮುಕ್ತಾಯಗೊಳಿಸಿತ್ತು. ಎಂ ಕೆ ದೇವಾನಂದರು ಹಲವರ ಹೆಸರು ಉಲ್ಲೇಖಿಸಿ ದೂರು ನೀಡಿದ್ದರೂ ಆ ನಿಟ್ಟಿನಲ್ಲಿ ತನಿಖೆ, ವಿಚಾರಣೆ ನಡೆದಿಲ್ಲ ಎಂಬುದು ಪದ್ಮಲತಾ ಕುಟುಂಬದ ಆರೋಪ. ಪದ್ಮಲತಾ ತಂದೆ ಎಂ ಕೆ ದೇವಾನಂದರು ಸ್ಥಳೀಯ ಫ್ಯೂಡಲ್ ಶಕ್ತಿಗಳ ಅಲಿಖಿತ ನಿಯವನ್ನು ಮುರಿದು ಮಂಡಲ್ ಪಂಚಾಯತ್ ಚುನಾವಣೆಗೆ ಸ್ಪರ್ಧಿಸಿದ್ದು, ಮಲೆಕುಡಿಯರ ಒಕ್ಕಲೆಬ್ಬಿಸುವಿಕೆಯ ವಿರುದ್ಧ ಚಳವಳಿ ನಡೆಸುತ್ತಿದ್ದರು. ಕಾರಣಗಳಿಗಾಗಿಯೇ ತಮ್ಮ ಪುತ್ರಿಯನ್ನು ಹತ್ಯೆ ಮಾಡಲಾಗಿದೆ ಎಂದು ದಿವಂಗತ ದೇವಾನಂದರು ಕೊನೆಯವರೆಗೂ ಹೇಳುತ್ತಾ ಬಂದಿರುತ್ತಾರೆ.
ವೇದವಲ್ಲಿ ಪ್ರಕರಣ: 1979 ರಲ್ಲಿ ಧರ್ಮಸ್ಥಳ ಎಸ್ ಡಿ ಎಂ ಅನುದಾನಿತ ಹೈಸ್ಕೂಲಿನಲ್ಲಿ ಅಧ್ಯಾಪಕಿಯಾಗಿದ್ದ ವೇದವಲ್ಲಿ ಅವರ ಅನುಮಾನಾಸ್ಪದ ಸಾವು ಸಂಭವಿಸುತ್ತದೆತ್ತ . ನ್ಯಾಯಯುತವಾಗಿ ದೊರಕಬೇಕಾದ ಮುಖ್ಯೋಪಾದ್ಯಾಯಿನಿ ಹುದ್ದೆಗೆ ಹಕ್ಕು ಮಂಡಿಸಿದ್ದಕ್ಕಾಗಿ ಗ್ರಾಮದ ಫ್ಯೂಡಲ್ ಶಕ್ತಿಗಳು ವೇದವಲ್ಲಿಯವರನ್ನು ಬೆಂಕಿ ಹಚ್ಚಿ ಕೊಲೆ ಮಾಡಿದ್ದಾರೆ ಎಂದು ಆಕೆಯ ಕುಟುಂಬಸ್ಥರು ಆರೋಪಿಸುತ್ತಾ ಬಂದಿದ್ದಾರೆ. ಆದರೆ ಬಲಾಢ್ಯ ಶಕ್ತಿಗಳ ಪ್ರಭಾವದಿಂದಾಗಿ ಪತ್ನಿಯ ಕೊಲೆಗೆ ನ್ಯಾಯ ದೊರಕಿಸಿಒಡಬೇಕು ಎಂದು ಆಗ್ರಹಿಸಿದ್ದ ವೇದವಲ್ಲಿ ಅವರ ಪತಿ ಡಾ. ಹರಳೆಯರ ಮೇಲೆ ಸುಳ್ಳು ಆರೋಪ ಹೊರಿಸಿ ಜೈಲಿಗೆ ಹಾಕುವ ವಿಫಲ ಸಂಚು ನಡೆಸಲಾಗಿತ್ತು. ಆ ಮೂಲಕ ವೇದವಲ್ಲಿ ಕೊಲೆ ಪ್ರಕರಣವನ್ನು ಮುಚ್ಚಿಹಾಕಲಾಯಿತು.
ಮಾವುತ ನಾರಾಯಣ ಮತ್ತು ಅವರ ಸಹೋದರಿ ಯಮುನಾ ಪ್ರಕರಣ:
ಆನೆ ಮಾವುತ ನಾರಾಯಣ ಮತ್ತು ಅವರ ಸಹೋದರಿ ಯಮುನಾ ಅವರನ್ನು 2012ರ ಸೆಪ್ಟಂಬರ್ ನಲ್ಲಿ ಧರ್ಮಸ್ಥಳದಲ್ಲಿ ಕಲ್ಲಿನಿಂದ ಜಜ್ಜಿಕೊಲೆ ನಡೆಸಲಾಗುತ್ತದೆ. ಆ ಕೊಲೆ ಪ್ರಕರಣವನ್ನು ಪೊಲೀಸ್ ಇಲಾಖೆ ಪತ್ತೆಯಾಗದ ಪ್ರಕರಣ ಎಂದು ವರದಿ ನೀಡಿ ಮುಚ್ಚಿಹಾಕಿರುತ್ತದೆ. ನಾರಾಯಣ ಅವರು ವಾಸಿಸುತ್ತಿದ್ದ ಜಮೀನಿನ ಮೇಲೆ ಊರಿನ ಪ್ರಭಾವಿಗಳಿಗೆ ಆಸಕ್ತಿ ಇತ್ತು. ಪ್ರಭಾವಿಗಳ ಒತ್ತಡಕ್ಕೆ ಮಣಿಯದ ಕಾರಣ ಈ ಜೋಡಿ ಕೊಲೆ ನಡೆದಿದೆ ಎಂದು ನಾರಾಯಣ ಕುಟುಂಬ ಅಂದಿನಿಂದಲೂ ಆರೋಪಿಸುತ್ತಾ ಬಂದಿದೆ. ನಾರಾಯಣ ವಾಸ ಇದ್ದ ಜಮೀನಿನಲ್ಲಿ ಈಗ ಪ್ರಭಾವಿಗಳ ಭವ್ಯ ಕಟ್ಟಡ ತಲೆ ಎತ್ತಿರುವುದು ಆ ಆರೋಪವನ್ನು ಪುಷ್ಟೀಕರಿಸುತ್ತದೆ.
ಸೌಜನ್ಯ ಕೊಲೆ: 2012 ರಲ್ಲಿ ಅತ್ಯಾಚಾರಕ್ಕೆಒಳಗಾಗಿ ಕೊಲೆಯಾದ ಧರ್ಮಸ್ಥಳದ ವಿದ್ಯಾರ್ಥಿನಿ ಸೌಜನ್ಯ ಪ್ರಕರಣದಲ್ಲಿ ಸಿಬಿಐ ಸಲ್ಲಿಸಿದ ಆರೋಪಪಟ್ಟಿಯಲ್ಲಿ ಆರೋಪಿಯಾಗಿದ್ದ ಸಂತೋಷ್ ರಾವ್ ಅವರನ್ನು ನ್ಯಾಯಾಲಯ ನಿರಪರಾಧಿ ಎಂದು ಬಿಡುಗಡೆಗೊಳಿಸಿದೆ. ಆ ಮೂಲಕ ಸೌಜನ್ಯ ಕುಟುಂಬ ಹಾಗು ಜನಾಭಿಪ್ರಾಯಕ್ಕೆ ನ್ಯಾಯಾಲಯದಲ್ಲಿ ಮನ್ನಣೆ ದೊರಕಿದೆ. ಅಂದಿನಿಂದ ಸೌಜನ್ಯ ಕುಟುಂಬ ಹಾಗು ಜನ ಚಳವಳಿಗಳು, ನಾಗರಿಕ ಸಮಾಜ ಸೌಜನ್ಯ ಪ್ರಕರಣದ ಮರು ತನಿಖೆಗೆ ಬಲವಾದ ಆಗ್ರಹ ಮಾಡುತ್ತಾ ಬಂದಿವೆ.
ದಲಿತ ಕಾರ್ಮಿಕರ ಮನೆ ಹಕ್ಕು ಮತ್ತು ಸಂಬಳ: ಧರ್ಮಸ್ಥಳದಲ್ಲಿ ನೂರಾರು ದಲಿತರು ಸ್ವಚ್ಚತಾ ಕಾರ್ಮಿಕರಾಗಿ ತಲೆತಲಾಂತರಗಳಿಂದ ದುಡಿಯುತ್ತಿದ್ದಾರೆ. ಈ ರೀತಿ ದುಡಿಯುವ ಸ್ವಚ್ಚತಾ ಕಾರ್ಮಿಕರಿಗೆಂದೇ ಧರ್ಮಸ್ಥಳದಲ್ಲಿ ಅಶೋಕ ನಗರ ದಲಿತ ಕಾಲನಿಯನ್ನು ನಿರ್ಮಿಸಲಾಗಿದೆ. ರಾಜ್ಯಸಭಾ ಸಂಸದರೂ ಆಗಿರುವ ವಿರೇಂದ್ರ ಹೆಗ್ಗಡೆಯವರ ಬೀಡು ಮನೆಯ ಸನಿಹವೇ ಇರುವ ಈ ದಲಿತ ಕಾಲನಿಯ ನಿವಾಸಿಗಳ ಸಂಕಷ್ಟ ಹೇಳತೀರದು. ತಲೆತಲಾಂತರಗಳಿಂದ ಅಶೋಕನಗರದಲ್ಲೇ ವಾಸಿಸುತ್ತಾ ಬಂದಿದ್ದಾರೆ. ಆದರೂ ಮನೆಗಳ ಸ್ಥಳವನ್ನು ದಲಿತರ ಹೆಸರಿಗೆ ಹಕ್ಕು ಪತ್ರ ನೀಡಲಾಗಿಲ್ಲ. ಸ್ವಚ್ಚತಾ ಕಾರ್ಮಿಕರು ಕುಸಿದಿರುವ, ಸೋರುತ್ತಿರುವ ಮನೆಗಳಲ್ಲಿ ಹೀನಾಯ ಸ್ಥಿತಿಯಲ್ಲಿ ವಾಸಿಸುತ್ತಿದ್ದಾರೆ. ನಮ್ಮ ಸಂಸ್ಥೆಯಲ್ಲಿ 75 ಸಾವಿರ ನೌಕರರು ಇದ್ದಾರೆ ಎಂದು ನ್ಯಾಯಾಲಯಗಳಲ್ಲಿ ಘೋಷಿಸಿಕೊಂಡಿರುವ ಟ್ರಸ್ಟ್, ಸ್ವಚ್ಚತಾ ಕಾರ್ಯ ಮಾಡುವ ದಲಿತರಿಗೆ ಮಾತ್ರ ಕಾರ್ಮಿಕ ಕಾಯ್ದೆಯ ಪ್ರಕಾರ ಕನಿಷ್ಠ ಸಂಬಳವನ್ನೂ ನೀಡುತ್ತಿಲ್ಲ. ಟ್ರಸ್ಟ್ ನ್ಯಾಯಾಲಯದಲ್ಲಿ ಘೋಷಿಸಿರುವ 75 ಸಾವಿರ ಕಾರ್ಮಿಕರು ಮತ್ತು ಸ್ವಚ್ಚತಾ ಕಾರ್ಮಿಕರಿಗೆ ಕಾರ್ಮಿಕ ಕಾಯ್ದೆಯಂತೆ ಸಂಬಳ ನೀಡಲಾಗುತ್ತಿದೆಯೇ ಎಂಬುದನ್ನು ಖಾತರಿಪಡಿಸಬೇಕು. ಹಾಗಾಗಿ, ಧರ್ಮಸ್ಥಳ ಅಶೋಕನಗರದ 128 ದಲಿತ ಕುಟುಂಬಗಳು, ಮುಂಡ್ರುಪಾಡಿಯ 42 ದಲಿತ ಕುಟುಂಬಗಳು ಮತ್ತು ಗ್ರಾಮದ ಇತರ ದಲಿತ ಕುಟುಂಬಗಳಿಗೆ ತಲಾ ಒಂದು ಎಕರೆ ಸರಕಾರಿ ಭೂಮಿಯನ್ನು ಸರ್ಕಾರ ಕೊಡಿಸಬೇಕು. ದಲಿತರ ಮೀಸಲು ಭೂಮಿಯೂ ಸೇರಿದಂತೆ ನೂರಾರು ಎಕರೆ ಸರಕಾರಿ ಭೂಮಿಯನ್ನು ಟ್ರಸ್ಟ್ ಅತಿಕ್ರಮಿಸಿದ್ದು, ಇದನ್ನು ತೆರವುಗೊಳಿಸಿ ಭೂ ಮಂಜೂರಾತಿ ಕಾಯ್ದೆ ಪ್ರಕಾರವೇ ದಲಿತರಿಗೆ ಕೊಡಬೇಕು. ಈ ಬಗ್ಗೆ ನಿರಂತರ ಹೋರಾಟ ನಡೆಸುತ್ತಿರುವ ದಲಿತರ ಭೂ ಹಕ್ಕೊತ್ತಾಯ ಸಮಿತಿಗೆ ನಾವು ಬೆಂಬಲ ನೀಡುತ್ತೇವೆ.
ಭೂಕಬಳಿಕೆ: ಧರ್ಮಸ್ಥಳ ಹಾಗು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭೂಕಬಳಿಕೆ ಪ್ರಕರಣಗಳು ವ್ಯಾಪಕವಾಗಿ ನಡೆದಿರುವ ಆರೋಪ ನಾಲ್ಕೈದು ದಶಕಗಳಿಂದ ಕೇಳಿ ಬರುತ್ತಿದೆ. ಅಲ್ಲಿ ನಡೆದಿರುವ ಕೊಲೆ ಸಹಿತ ಅಪರಾಧ ಪ್ರಕರಣಗಳನ್ನು ಭೂ ಹಗರಣಗಳಿಂದ ಪ್ರತ್ಯೇಕಿಸಿ ನೋಡಲು ಅಸಾಧ್ಯ. ಸರಕಾರಿ ಜಮೀನುಗಳ ಕಬಳಿಕೆ, ದಲಿತರು, ಆದಿವಾಸಿಗಳು, ಹಿಂದುಳಿದವರು ಸಹಿತ ದುರ್ಬಲ ವಿಭಾಗದ ಜನರನ್ನು ಬಲವಂತವಾಗಿ ಒಕ್ಕಲೆಬ್ಬಿಸಿದ, ಅವರ ಜಮೀನು ಸ್ವಾಧೀನಪಡಿಸಿದ ಆರೋಪಗಳು ಹಲವು. ಹಾಗೆಯೇ, ಜಮೀನು ಹೊಂದಿರುವ ಹಲವರು ಭಯಭೀತಿಯಿಂದ ಕೃಷಿ ಚಟುವಟಿಕೆಗಳನ್ನು ಕೈ ಬಿಟ್ಟು ಧರ್ಮಸ್ಥಳ ಗ್ರಾಮದಿಂದ ದೂರ ಹೋಗಿ ವಾಸಿಸುತ್ತಿರುವ ಮಾತುಗಳು ಕೇಳಿ ಬರುತ್ತಿವೆ. ಧರ್ಮಸ್ಥಳ ಹಾಗು ಆಸುಪಾಸಿನ ಗ್ರಾಮದಲ್ಲಿ ನಾಲ್ಕೈದು ದಶಕಗಳಲ್ಲಿ ನಡೆದಿರುವ ಜಮೀನು ಪರಭಾರೆಯನ್ನೂ ಸೇರಿಸಿ, ಭೂಕಬಳಿಕೆ ಆ ರೋಪಗಳನ್ನು ಸಮಗ್ರವಾದ ತನಿಖೆಗೆ ಒಳಪಡಿಸಬೇಕಿದೆ.
ದಲಿತರ ಮೀಸಲು ಭೂಮಿ ಕಬಳಿಕೆ: ಧರ್ಮಸ್ಥಳದ ಪ್ರಭಾವಿಗಳ ಟ್ರಸ್ಟ್ ನಡೆಸುತ್ತಿರುವ ಲಾಭದಾಯಕ ಶಿಕ್ಷಣ ಸಂಸ್ಥೆಗಳಿಗೆ ದಲಿತರಿಗೆ ಮೀಸಲಾಗಿರುವ ಡಿ.ಸಿ ಮನ್ನಾ (DEPRESSED CLASS RESERVE) ಜಮೀನನ್ನು ಸರ್ಕಾರ ನೀಡಿದೆ. ಉಜಿರೆ ಗ್ರಾಮದಲ್ಲಿ ವಿವಿಧ ಸರ್ವೆ ನಂಬರ್‌ಗಳಲ್ಲಿ 43.90 ಎಕ್ರೆ ಡಿ.ಸಿ ಮನ್ನಾ (ತುಳಿತಕ್ಕೊಳಗಾದ ವರ್ಗಕ್ಕೆ ಮೀಸಲು) ಭೂಮಿಯನ್ನು ಧರ್ಮಸ್ಥಳ ಎಜುಕೇಶನಲ್ ಟ್ರಸ್ಟ್ಮಸ್ಟ್ ಮತ್ತು ಸಿದ್ಧವನ ಗುರುಕುಲಕ್ಕೆನೀಡಲಾಗಿದೆ. ಈ ಬಗ್ಗೆ ಪದೇ ಪದೇ ವಿವಿಧ ದಲಿತ ಸಂಘಟನೆಗಳು ಮತ್ತು ಎಡಪಕ್ಷೀಯ ಸಂಘಟನೆಗಳು ಒತ್ತಾಯಿಸುತ್ತಾ ಬಂದಿವೆ. ಆ ಭೂಮಿಯನ್ನು ತಕ್ಷಣ ದಲಿತ ಸಮುದಾಯಕ್ಕೆ ನೀಡಬೇಕು. ಒಂದು ವೇಳೆ ಅದೇ ಭೂಮಿಯನ್ನು ನೀಡಲು ಅಸಾದ್ಯವಾದರೆ ಬದಲಿ ಯೋಗ್ಯ ಭೂಮಿಯನ್ನು ಸರ್ಕಾರ ಧರಮಸ್ಥಳ ಸಂಸ್ಥೆಯಿಂದ ವಶಕ್ಕೆ ಪಡೆದು ದಲಿತ ಸಮುದಾಯಕ್ಕೆ ಹಂಚುವ ವ್ಯವಸ್ಥೆ ಮಾಡಬೇಕು. ಉಜಿರೆಯ ಮುಖ್ಯರಸ್ತೆಯಲ್ಲಿರುವ ವಿವಿಧ ಸರ್ವೆ ನಂಬರ್ ಗಳಲ್ಲಿ 42.05 ಎಕರೆ ಸರ್ಕಾರಿ ಭೂಮಿಯನ್ನು ಶ್ರೀ ಧರ್ಮಸ್ಥಳ ಎಜುಕೇಶನ್ ಟ್ರಸ್ಟ್ ಗೆ 2000 ನೇ ವರ್ಷದಿಂದ 2020 ರವರೆಗೆ ಅಂದರೆ 30 ವರ್ಷದ ಗುತ್ತಿಗೆಗೆ ಎಕರೆಯೊಂಕ್ಕೆ ವಾರ್ಷಿಕ ರೂ.420/-ರಂತೆ ನೀಡಲಾಗಿದೆ. ಎಕರೆಗೆ 25 ಲಕ್ಷ ರೂ ನೀಡಿದರೂ ಜಮೀನು ಸಿಗದ ಮುಖ್ಯರಸ್ತೆಯ ಬದಿಯ ಭೂಮಿಯನ್ನು ಪುಕ್ಕಟೆ ದರಕ್ಕೆ ನೀಡಲಾಗಿದ್ದು, ಅವಧಿ ಪೂರ್ವ ಈ ಒಪ್ಪಂದವನ್ನು ರದ್ದುಗೊಳಿಸಿ, ಅರ್ಹ ಭೂರಹಿತರಿಗೆ ಭೂಮಿಯನ್ನು ಹಂಚಬೇಕು.
ಮೈಕ್ರೊ ಫೈನಾನ್ಸ್ ಹಗರಣಗಳ ತನಿಖೆ: ಗ್ರಾಮೀಣಾಭಿವೃದ್ದಿ ಯೋಜನೆಯ ಹೆಸರಿನಲ್ಲಿ ದೊಡ್ಡ ಪ್ರಮಾಣದಲ್ಲಿ ಆರ್ಥಿಕ ಅಪರಾಧ ನಡೆದಿರುವುದು ಮತ್ತು ಮೈಕ್ರೊ ಫೈನಾನ್ಸ್ ನಡೆಸಿರುವ ಆರೋಪಗಳು ವ್ಯಾಪಕವಾಗಿದೆ. ಸಾಲ ನೀಡಿಕೆ, ವಸೂಲಾತಿ ವಿಧಾನದಲ್ಲಿ ಕಾನೂನು, ನಿಯಮಗಳನ್ನು ಉಲ್ಲಂಘಿಸುವುದು, ತೀರಾ ಅವಮಾನಕಾರಿಯಾಗಿ, ಅಮಾನವೀಯವಾಗಿ ವಸೂಲಾತಿ ನಡೆಸುವ ದೂರುಗಳು ರಾಜ್ಯದ ಹಲವು ಭಾಗಗಳಲ್ಲಿ ಕೇಳಿ ಬಂದಿವೆ. ವಸೂಲಾತಿಯ ಸಂದರ್ಭದ ಅಪಮಾನ, ಹಿಂಸೆ ಭರಿಸಲಾಗದೆ ಆತ್ಮಹತ್ಯೆಗಳು ಘಟಿಸಿರುವುದು, ಮರ ಮಟ್ಟು ಸಹಿತ ಅವರ ಸ್ವತ್ತುಗಳನ್ನು ಬಲವಂತವಾಗಿ ಸ್ವಾಧೀನ ಪಡಿಸಿರುವ ಪ್ರಕರಣಗಳು ಹತ್ತಾರು ಸಂಖ್ಯೆಯಲ್ಲಿ ನಡೆದಿದೆ. ರಾಜ್ಯದ ವಿವಿಧ ಪೊ ಲೀಸ್ ಠಾಣೆಗಳಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ವಿರುದ್ಧ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಇವು ಗಂಭೀರವಾದ ಆರ್ಥಿಕ ಅಪರಾಧಗಳಾಗಿವೆ. ಗ್ರಾಮೀಣ ಭಾಗದಲ್ಲಿ ಶ್ರಮಿಕ, ಕೂಲಿಕಾರ, ಸಣ್ಣ ರೈತರು ಸೇರಿದಂತೆ ಜನ ಸಾಮಾನ್ಯರ ನೆಮ್ಮದಿಗೆ ಭಂಗ ತಂದಿದೆ. ಈ ಕುರಿತು ಸರಿಯಾದ ತನಿಖೆ ಅಗತ್ಯ ಇದೆ.
ಅಸಹಜ ಸಾವು , ಶವಗಳ ಅಕ್ರಮ ದಫನ್: ಧರ್ಮಸ್ಥಳ ವ್ಯಾಪ್ತಿಯಲ್ಲಿ ಕಳೆದ 20 ವರ್ಷಗಳಲ್ಲಿ ನೂರಾರು ಅಸಹಜ ಸಾವುಗಳು, ಆತ್ಮಹತ್ಯೆಗಳು, ಕೊಲೆಗಳು ನಡೆದಿವೆ ಎಂದು ಚರ್ಚೆಗಳು ನಡೆಯುತ್ತಿದ್ದಂತೆ ಧರ್ಮಸ್ಥಳ ಗ್ರಾಮ ಪಂಚಾಯತ್ ನೀಡಿರುವ ಮಾಹಿತಿ ಹಕ್ಕು ದಾಖಲೆಗಳು ನಮ್ಮ ಆತಂಕವನ್ನು ಇಮ್ಮಡಿಗೊಳಿಸಿದೆ. 15 ವರ್ಷದ ಹೆಣ್ಣು ಮಗುವಿನ ಶವ ದೇವಸ್ಥಾನದ ಸ್ನಾನಘಟ್ಟದಲ್ಲಿ ಪತ್ತೆಯಾದ ದಿನವೇ ಪೋಸ್ಟ್ ಮಾರ್ಟಂ ನಡೆಸಿ ಧಫನ್ ಮಾಡಲು ಗ್ರಾಮ ಪಂಚಾಯತ್ ಗೆ ಪೊಲೀಸರು ಸೂಚಿಸಿದ್ದಾರೆ. ಮೃತ ಹೆಣ್ಣು ಮಗುವಿನ ಪೊಷಕರ ಪತ್ತೆಗೆ ಪೊಲೀಸರು ಕಾನೂನಿನ ಯಾವ ಕ್ರಮವನ್ನೂ ಕೈಗೊಳ್ಳದೇ , ಕನಿಷ್ಠ ಒಂದೆರಡು ದಿನ ಕಾಯುವ ವ್ಯವದಾನವೂ ಇಲ್ಲದೇ ಶವ ಪತ್ತೆಯಾದ ದಿನವೇ ತರಾತುರಿಯಲ್ಲಿ ಕಾನೂನು ಮೀರಿ ದಫನ್ ಮಾಡಿರುವ ದಾಖಲೆ ಹಲವು ಅನುಮಾನಗಳನ್ನೂ, ಅಮಾನವೀಯತೆಯ ಬಗೆಗಿನ ಆಕ್ರೋಶವನ್ನೂ ತರಿಸುತ್ತದೆ . ಇನ್ನೊಂದು ದಾಖಲೆ ಹೇಳುವ ಪ್ರಕಾರ, ಸುಮಾರು 45 ವರ್ಷದ ಮಹಿಳೆಯನ್ನು ಧರ್ಮಸ್ಥಳ ದೇವಸ್ಥಾನದ ಶರಾವತಿ ಲಾಡ್ಜ್ ನಲ್ಲಿ ಕೊಲೆ ಮಾಡಲಾಗಿದ್ದು, ಪೊಲೀಸರು ಆ ಮಹಿಳೆಯನ್ನು ಅಪರಿಚಿತೆ ಎಂದು ಘೋಷಿಸಿದ್ದಾರೆ. ವಸತಿಗೃಹದಲ್ಲಿ ಪತ್ತೆಯಾದ ಮಹಿಳೆಯ ಅಪರಿಚಿತೆ ಆಗಲು ಹೇಗೆ ಸಾದ್ಯ ? ಅದಲ್ಲದೇ, ಪತ್ತೆಯಾದ ಬಹುತೇಕ ಎಲ್ಲಾ ಶವಗಳನ್ನು ಹೂಳಲು ಸೂಚಿಸಿರುವ ಪೊಲೀಸರು, ಹೂಳಲೇಬೇಕಾದ ಕೊಲೆಯಾದ ಮಹಿಳೆಯ ಶವವನ್ನು ದಹನ ಮಾಡಲು ಸೂಚಿಸುತ್ತಾರೆ. ಗ್ರಾಮ ಪಂಚಾಯತ್ ನವರು ಸಹಜವೆಂಬಂತೆ ಹೂತು ಹಾಕಬಹುದು ಎಂಬ ಕಾರಣಕ್ಕಾಗಿ ಪೊಲೀಸರು ದಫನ್ ಎಂದು ಬರೆದು ಆವರಣದಲ್ಲಿ ಸ್ಪಷ್ಟವಾಗಿ ದಹನ ಎಂದು ಬರೆಯುವ ಮೂಲಕ ಶವದ ಸಾಕ್ಷ್ಯ ನಾಶಮಾಡಿದ್ದಾರೆ. ಇದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಇಂತಹ ಹಲವು ದಾಖಲೆಗಳು ಆರ್ ಟಿಐ ಮೂಲಕ ಅಧಿಕೃತವಾಗಿ ಲಭ್ಯವಾಗಿದ್ದು, ಎಸ್ಐಟಿ ರಚನೆಯ ಸಂಬಂಧ ಹೊರಡಿಸಲಾದ ಆದೇಶದಲ್ಲಿರುವ ನಿಯಮಗಳಂತೆ ಈ ಪ್ರಕರಣಗಳ ತನಿಖೆಯಾಗಬೇಕಿದೆ.
ವಿರೋಧ ಪಕ್ಷ ಬಿಜೆಪಿಯು ಬಹಿರಂಗವಾಗಿ ಎಸ್ಐಟಿ ತನಿಖೆ ಮತ್ತು ಸಾಕ್ಷಿ/ದೂರುದಾರರಿಗೆ ಬೆದರಿಕೆ ಒಡ್ಡುತ್ತಿದ್ದು ಅದನ್ನು ನಿಲ್ಲಿಸಲು ಸೂಕ್ತ ಕಾನೂನು ಕ್ರಮಕ್ರ ತೆಗೆದುಕೊಳ್ಳಬೇಕು. ಸಂತ್ರಸ್ತರ ಪರವಾಗಿ ಕೆಲಸ ಮಾಡುವುದು ಸರ್ಕಾರದ ಸಾಂವಿಧಾನಿಕ ಕರ್ತವ್ಯವಾಗಿದೆ. ಸರ್ಕಾರದ ಕೆಲ ಪ್ರಭಾವಿಗಳು ಮತ್ತು ಪೊಲೀಸರು ಹೋರಾಟಗಾರರ ವಿರುದ್ಧ ಪ್ರಕರಣ ದಾಖಲಿಸುವ ಬೆದರಿಕೆ ಒಡ್ಡುವ ಮೂಲಕ ದೂರುದಾರರ, ಸಂತ್ರಸ್ತರ ಧ್ವನಿ ಅಡಗಿಸಲು ಪ್ರಯತ್ನಿಸುತ್ತಿದ್ದಾರೆ. ದೂರುದಾರನ ಹೇಳಿಕೆಯಷ್ಟು ಅಸ್ತಿಪಂಜರ ಸಿಕ್ಕಿಲ್ಲ ಎನ್ನುವ ಕಾರಣಕ್ಕಾಗಿ ಎಸ್ಐಟಿ ತನಿಖೆಯನ್ನು ನಿಧಾನಿಸಕೂಡದು. 20 ವರ್ಷಗಳ ಅಸಹಜ ಸಾವು ಪ್ರಕರಣಗಳನ್ನು ಠಾಣೆ, ಗ್ರಾಮ ಪಂಚಾಯತ್ ದಾಖಲೆಗಳ ಆಧಾರದಲ್ಲಿ ತನಿಖೆಯನ್ನು ತೀವ್ರಗೊಳಿಸಬೇಕು. ಹೀಗಾಗಿ ಕಳೆದ 20 ವರ್ಷಗಳ ಅತ್ಯಾಚಾರ, ಅಸಹಜ ಸಾವು, ಕೊಲೆ ಪ್ರಕರಣಗಳನ್ನು ಎಸ್ಐಟಿ ರಚನೆಯ ಸಂಬಂಧ ಹೊರಡಿಸಲಾದ ಆದೇಶದಲ್ಲಿ ಇರುವಂತೆಯೇ ಪರಿಪೂರ್ಣವಾದ ತನಿಖೆಗೆ ಒಳಪಡಿಸಬೇಕು ಎಂದೂ ನಿರ್ಣಯ ಕೈಗೊಳ್ಳಲಾಗಿದೆ.