ಕುರಿಗಾಹಿಗಳ ಹಿತರಕ್ಷಣೆ ಕಾಯ್ದೆ ಸಿದ್ದ: ಸಚಿವ ಸಂಪುಟ ಸಭೆ ಒಪ್ಪಿಗೆ ನಂತರ ಅಧಿವೇಶನದಲ್ಲಿ ಮಂಡನೆ: ಸಚಿವ ಕೆ. ವೆಂಕಟೇಶ್‌ 

Most read

ಬೆಂಗಳೂರು: ರಾಜ್ಯದ ಕುರಿಗಾಹಿಗಳ ಹಿತರಕ್ಷಣೆಗೆ ಸರ್ಕಾರ ಬದ್ದವಾಗಿದ್ದು, ಗಾಗಲೇ ಕುರಿಗಾರರ ದೌರ್ಜನ್ಯ ತಡೆ ಕಾಯ್ದೆಯ ಕರಡು ಸಿದ್ದಪಡಿಸಲಾಗಿದೆ. ಮುಂದಿನ ಸಚಿವ ಸಂಪುಟದಲ್ಲಿ (ಆಗಸ್ಟ್‌ 19, 2025) ಒಪ್ಪಿಗೆ ಪಡೆದು, ಅಧಿವೇಶನದಲ್ಲಿ ಮಂಡಿಸಲಾಗುವುದು ಎಂದು ಪಶುವೈದ್ಯಕೀಯ ಸಚಿವ ಕೆ.ವೆಂಕಟೇಶ್‌ ತಿಳಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಕಾಯ್ದೆಯ ಜಾರಿಗೆ ಬದ್ದತೆಯನ್ನು ವ್ಯಕ್ತಪಡಿಸಿದ್ದಾರೆ. ಕುರಿಗಾರರ ಸ್ವತ್ತುಗಳ ರಕ್ಷಣೆ, ಪರಿಹಾರ ಯೋಜನೆಗಳು, ವೈದ್ಯರ ನೇಮಕಾತಿ, ಪೊಲೀಸ್‌ ರಕ್ಷಣೆಗಾಗಿ ಕರ್ನಾಟಕ ಸಾಂಪ್ರದಾಯಿಕ ವಲಸೆ ಕುರಿಗಾಹಿಗಳ (ಕಲ್ಯಾಣ ಕ್ರಮಗಳು ಮತ್ತು ದೌರ್ಜನ್ಯ ತಡೆ) ಮಸೂದೆ 2025ರ ಕರಡನ್ನು ಸಿದ್ದಪಡಿಸಲಾಗಿದೆ. ಇದಕ್ಕೆ ಕಾನೂನು ಇಲಾಖೆಯಿಂದ ಅನುಮೋದನೆ ಪಡೆದುಕೊಳ್ಳಲಾಗಿದ್ದು, ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಕರಡು ವಿಧೇಯಕಕ್ಕೆ ಅನುಮತಿ ಪಡೆದುಕೊಳ್ಳಲಾಗುವುದು. ಅನುಮತಿಯ ನಂತರ ಈ ಬಾರಿಯ ಅಧಿವೇಶನದಲ್ಲೇ ಮಂಡಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

ಕರಡು ಮಸೂದೆಯ ಪ್ರಮುಖ ಅಂಶಗಳು:

ಸ್ಥಳದಿಂದ ಸ್ಥಳಕ್ಕೆ ವಲಸೆ ಹೋಗುವ ಕುರಿಗಾಹಿಗಳ ಮೇಲಿನ ದೌರ್ಜನ್ಯ ತಡೆಯುವ ಹಾಗೂ ಶಂಕೆ ವ್ಯಕ್ತಪಡಿಸುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು

ಕುರಿಗಾಹಿಗಳ ನೋಂದಣಿ ಕಡ್ಡಾಯ; ಭಾವಚಿತ್ರ ಇರುವ ಗುರುತಿನಚೀಟಿಯನ್ನು ವಿತರಣೆ

ವಸತಿ ಯೋಜನೆ, ವಿಮೆ ಸೌಲಭ್ಯ, ಆರೋಗ್ಯ ಮತ್ತು ಶಿಕ್ಷಣ ಸವಲತ್ತುಗಳು, ಕೌಶಲ ಅಭಿವೃದ್ಧಿ, ಆಹಾರ ಭದ್ರತೆ, ಚುಚ್ಚುಮದ್ದು ಮತ್ತು ಸೂಕ್ತ ಚಿಕಿತ್ಸೆ

ಕುರಿಗಾಹಿಯನ್ನು ಅವಮಾನಿಸಿದರೆ 6  ತಿಂಗಳಿನಿಂದ5  ವರ್ಷಗಳವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆ ಮತ್ತು ರೂ.1 ಲಕ್ಷದವರೆಗೆ ದಂಡ

ಕುರಿಗಾಹಿಗಳ ಉತ್ಪನ್ನಗಳಿಗೆ ಮಾರುಕಟ್ಟೆ ಬೆಂಬಲ ನೀಡಬೇಕು. ಜಾನುವಾರುಗಳಿಗೆ ಜೀವಹಾನಿಯಾದರೆ ನಷ್ಟ ಪರಿಹಾರ

 ಕುರಿಗಾಹಿಗಳ ಜಾನುವಾರುಗಳಿಗೆ ಹಾನಿ ಉಂಟು ಮಾಡಿದರೆ ಅಥವಾ ಕಳವು ಮಾಡಿದರೆ 2 ವರ್ಷಗಳವರೆಗೆ ಜೈಲು ಶಿಕ್ಷೆ

ಕುರಿಗಾಹಿಗಳಿಗೆ ಸಂಬಂಧಿಸಿದಂತೆ ದೌರ್ಜನ್ಯ ತಡೆ ಕಾಯ್ದೆ ರೂಪಿಸಲಾಗುವುದು ಎಂದು 2024-25ನೇ ಸಾಲಿನ ಬಜೆಟ್‌ನಲ್ಲಿ ಸರ್ಕಾರ ಘೋಷಿಸಿತ್ತು.ಈ ಭರವಸೆಯ ಅನ್ವಯ ಈ ಕಾನೂನು ಜಾರಿಗೊಳಿಸಲಾಗುತ್ತಿದೆ.

More articles

Latest article