ನವದೆಹಲಿ: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಮತ್ತು ತನ ಸ್ನೇಹಿತೆ ಪವಿತ್ರಾಗೌಡ ಅವರ ಜಾಮೀನು ರದ್ದಾಗಿದ್ದು, ಕಾನೂನು ಎಲ್ಲರಿಗೂ ಒಂದೇ ಎಂಬ ಸಂದೇಶವನ್ನು ಸುಪ್ರೀಂ ಕೋರ್ಟ್ ನೀಡಿದೆ ಎಂದು ಕರ್ನಾಟಕ ಸರ್ಕಾರದ ಪರ ವಕೀಲ ಚಿದಾನಂದ್ ಹೇಳಿದ್ದಾರೆ.
ಈ ಕೊಲೆ ಪ್ರಕರಣದ ವಿಚಾರಣೆ ನಡೆಸಿ ತೀರ್ಪು ಕಾಯ್ದಿರಿಸುವ ಸಂದರ್ಭದಲ್ಲಿ ಹೈಕೋರ್ಟ್ ಮಾಡಿದ ತಪ್ಪನ್ನು ನಾವು ಮಾಡುವುದಿಲ್ಲ ಎಂದು ಸುಪ್ರೀಂಕೋರ್ಟ್ ಸ್ಪಷ್ಟ ಮಾತುಗಳಲ್ಲಿ ಹೇಳಿತ್ತು. ಈಗ ನ್ಯಾಯಾಲಯ ಎಲ್ಲಾ ಆರೋಪಿಗಳ ಜಾಮೀನು ರದ್ದು ಮಾಡಿದೆ. ಘೋರ ಕೃತ್ಯ ಎಸಗುವ ಅಪರಾಧಿಗಳಿಗೆ ಇದು ದೊಡ್ಡ ಪಾಠ. ಈ ಪ್ರಕರಣವನ್ನು ಹೈಕೋರ್ಟ್ ಕ್ಷುಲ್ಲಕ ಎಂದು ಪರಿಗಣಿಸಿತ್ತು ಎಂದಿದ್ದಾರೆ.
ಜೈಲಿನಲ್ಲಿ ವಿಐಪಿ ಸವಲತ್ತು ಅಥವಾ ಸೌಲಭ್ಯಗಳನ್ನು ಒದಗಿಸಿದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂಬ ಸಂದೇಶವನ್ನೂ ಸುಪ್ರೀಂಕೋರ್ಟ್ ನೀಡಿದೆ. ಹಾಗಾಗಿ ಜೈಲು ಅಧಿಕಾರಿಗಳಿಗೆ ಇದು ಪಾಠವಾಗಿದೆ.
ಒಂದು ವೇಳೆ ದರ್ಶನ್ ಮತ್ತಿತರ ಆರೋಪಿಗಳಿಗೆ ಪಂಚತಾರಾ ಸೌಲಭ್ಯಗಳನ್ನು ನೀಡಲಾಗುತ್ತಿದೆ ಎಂದು ತಿಳಿದು ಬಂದ ಮೊದಲ ದಿನವೇ ಜೈಲಿನ ಸೂಪರಿಂಟೆಂಡೆಂಟ್ ಮತ್ತು ಇತರ ಎಲ್ಲ ಅಧಿಕಾರಿಗಳನ್ನು ಅಮಾನತುಗೊಳಿಸಲಾಗುತ್ತದೆ. ರಾಜ್ಯ ಸರ್ಕಾರ ಯಾರಿಗಾದರೂ ವಿಐಪಿ ಟ್ರೀಟ್‌ಮೆಂಟ್ ನೀಡುತ್ತಿರುವ ಫೋಟೋ ಅಥವಾ ಯಾವುದೇ ವೀಡಿಯೊವನ್ನು ನಾವು ನೋಡಿದರೆ ಮೊದಲು ನಿಮ್ಮನ್ನು ಸಸ್ಪೆಂಡ್ ಮಾಡಲಾಗುತ್ತದೆ ಎಂದು ಜೈಲು ಅಧಿಕಾರಿಗಳಿಗೆ ಎಚ್ಚರಿಕೆಯ ಸಂದೇಶ ರವಾನಿಸಿದೆ.
ಕಾನೂನು ಎಲ್ಲರಿಗೂ ಒಂದೇ;ರಮ್ಯಾ
ಈ ಕುರಿತು ಪ್ರತಿಕ್ರಿಯಿಸಿ ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡಿರುವ ನಟಿ ರಮ್ಯಾ, ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಮತ್ತು ಇತರರಿಗೆ ಜಾಮೀನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್ ತೀರ್ಪು ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂಬ ಸಂದೇಶವನ್ನು ಸುಪ್ರೀಂ ಕೋರ್ಟ್ ರವಾನಿಸಿದೆ ಎಂದು ನಟಿ ರಮ್ಯಾ ಅಭಿಪ್ರಾಯಪಟ್ಟಿದ್ದಾರೆ.
ನ್ಯಾಯಾಂಗ ವ್ಯವಸ್ಥೆಯಲ್ಲಿ ನಂಬಿಕೆ ಇರಿಸಿಕೊಳ್ಳಬೇಕು. ನ್ಯಾಯ ಲಭ್ಯವಾಗುವ ಪ್ರಕ್ರಿಯೆ ಸುದೀರ್ಘ ಮತ್ತು ಕಠಿಣ ಹಾದಿಯಾದರೂ, ಕೊನೆಯಲ್ಲಿ ಬೆಳಕು ಇದ್ದೇ ಇರುತ್ತದೆ. ಯಾವುದೇ ಕಾರಣಕ್ಕೂ ಯಾರೊಬ್ಬರೂ ಕಾನೂನನ್ನು ಕೈಗೆ ತೆಗೆದುಕೊಳ್ಳಬಾರದು. ಅದಕ್ಕೂ ಮುಖ್ಯವಾಗಿ ಸತ್ಯವಂತರಾಗಿ ಇರಬೇಕು ಎಂದು ಬರೆದುಕೊಂಡಿದ್ದಾರೆ.
ಆರೋಪಿಗಳ ಜಾಮೀನು ರದ್ದಾಗಿರುವುದಕ್ಕೆ ರೇಣಕಾಸ್ವಾಮಿ ಕುಟುಂಬದವರೂ ಸಂತಸ ವ್ಯಕ್ತಪಡಿಸಿದ್ದಾರೆ.