ಧರ್ಮಸ್ಥಳ: ತೀವ್ರ ಕುತೂಹಲ ಕೆರಳಿಸಿದ್ದ 13 ನೇ ಸ್ಥಳದಲ್ಲಿ ಪತ್ತೆಯಾಗದ ಅವಶೇಷಗಳು; ಇಂದು ಅಲ್ಲಿ ನಡೆಯುವುದೇನು?

Most read

ಧರ್ಮಸ್ಥಳ: ಧರ್ಮಸ್ಥಳದಲ್ಲಿ ಅಪರಾಧ ಕೃತ್ಯ ಎಸಗಿ ಶವಗಳನ್ನು ಹೂತು ಹಾಕಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ತೀವ್ರ ಕುತೂಹಲ ಕೆರಳಿಸಿದ್ದ 13 ನೇ ಸ್ಥಳದಲ್ಲಿ ಯಾವುದೇ ಕುರುಹು ಪತ್ತೆಯಾಗಿಲ್ಲ. ಅನಾಮಿಕ ಸಾಕ್ಷಿ ದೂರುದಾರ ಈ ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಶವಗಳನ್ನು ಹೂತು ಹಾಕಿರುವುದಾಗಿ ವಿಶೇಷ ತನಿಖಾ ತಂಡ (ಎಸ್‌ ಐಟಿ) ತಂಡಕ್ಕೆ ತಿಳಿಸಿದ್ದ.

ಈ ಭಾಗದಲ್ಲಿ ರಸ್ತೆ ಮತ್ತು ಅಣೆಕಟ್ಟೆ ನಿರ್ಮಿಸುವಾಗ 10 ಅಡಿಗಳಷ್ಟು ಮಣ್ಣು ಹಾಕಿ ನೆಲವನ್ನು ಎತ್ತರಿಸಲಾಗಿತ್ತು. ಆದ್ದರಿಂದ ಭೂಮಿ ಅಗೆಯಲು ಜಿಪಿಆರ್‌ ತಂತ್ರಜ್ಞಾನದ ನೆರವಿನಿಂದ ಯಂತ್ರಗಳನ್ನು ಬಳಕೆ ಮಾಡಿ 15ರಿಂದ 20 ಅಡಿ ಆಳದವರೆಗೆ ಅಗೆಯಲಾಯಿತಾದರೂ ಯಾವುದೇ ಅವಶೇಷಗಳು ಕಂಡು ಬರಲಿಲ್ಲ. ಕಳೆದ ರಾತ್ರಿ 9 ಗಂಟೆಯವರೆಗೆ ಶೋಧ ನಡೆಸಿ ನಂತರ ಆ ಸ್ಥಳವನ್ನು ಮುಚ್ಚಲಾಯಿತು.

ಈ ಸಂದರ್ಭದಲ್ಲಿ ಸಾಕ್ಷಿ ದೂರುದಾರ ಹಾಜರಿದ್ದು ಎಲ್ಲೆಲ್ಲಿ ಅಗೆಯಬೇಕೆಂದು ಮಾರ್ಗದರ್ಶನ ಮಾಡಿದ್ದ. ಸಾಕ್ಷಿ ದೂರುದಾರ ಮೃತದೇಹಗಳನ್ನು ಹೂತಿರುವುದಾಗಿ 17 ಸ್ಥಳಗಳನ್ನು ತೋರಿಸಿದ್ದು ಎರಡು ಜಾಗಗಳಲ್ಲಿ ಮಾತ್ರ  ಮೃತದೇಹಗಳ ಅವಶೇಷಗಳು ಪತ್ತೆಯಾಗಿವೆ.

ಎಸ್‌ಐಟಿ ಮುಖ್ಯಸ್ಥ ಪ್ರಣವ್ ಮೊಹಾಂತಿ ಅವರೂ ಹಾಜರಿದ್ದು ಕೆಲವು ಸಲಹೆ ಸೂಚನೆಗಳನ್ನು ನೀಡಿದ್ದರು. ಪುತ್ತೂರು ಉಪವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್, ಎಸ್‌ಐಟಿ ಎಸ್.ಪಿಗಳಾದ ಜಿತೇಂದ್ರ ಕುಮಾರ್ ದಯಾಮ, ಸಿ.ಎ.ಸೈಮನ್ ಅವರು ಸ್ಥಳದಲ್ಲಿದ್ದರು.

ಆದರೆ ಸಾಕ್ಷಿ ದೂರುದಾರ ತಾನು ತೋರಿಸುವ ಎಲ್ಲಾ 30 ಸ್ಥಳಗಳಲ್ಲಿ ಶೋಧ ನಡೆಸಬೇಕೆಂದು ಕೋರಿರುವುದಾಗಿ ತಿಳಿದು ಬಂದಿದೆ. ಬೆಳ್ತಂಗಡಿಯಲ್ಲಿರುವ ಎಸ್‌ ಐಟಿ ಕಚೇರಿಗೆ ಈಗಾಗಲೇ ಸಾಕ್ಷಿ ದೂರುದಾರ ಆಗಮಿಸಿದ್ದು ಕೆಲವೇ ಕ್ಷಣಗಳಲ್ಲಿ ಉತ್ಖನನ ಸ್ಥಳಕ್ಕೆ ಎಸ್‌ ಐಟಿ ತಂಡ, ದೂರುದಾರ ಮತ್ತಿತರರು ಆಗಮಿಸಲಿದ್ದಾರೆ.

More articles

Latest article