ಬೆಳಗಾವಿ: ರಾಜ್ಯಪಾಲರು ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರ ಸಹಿಯನ್ನು ದುರ್ಬಳಕೆ ಮಾಡಿಕೊಂಡು ಉದ್ಯೋಗ ಕೊಡಿಸುವುದಾಗಿ ಆಮಿಷವೊಡ್ಡಿ 14 ಮಂದಿಯಿಂದ ರೂ. 30 ಲಕ್ಷಕ್ಕೂ ಅಧಿಕ ಹಣ ವಂಚಿಸಿರುವ ಪ್ರಕರಣ ದಾಖಲಾಗಿದೆ. ಮಂಜುನಾಥ ಮಲ್ಲಸರ್ಜ ಮುಖ್ಯ ಆರೋಪಿಯಾಗಿದ್ದಾನೆ. ಈತ ಉದ್ಯೋಗ ಕೊಡಿಸುವ ಆಮಿಷವೊಡ್ಡಿ ಲಕ್ಷಾಂತರ ಹಣ ವಂಚಿಸಿದ್ದಾನೆ.
ಈ ಸಂಬಂಧ ತನಿಖೆ ನಡೆಸುವಂತೆಯೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರೂ ಪತ್ರ ಬರೆದಿದ್ದರು.
ಆರೋಪಿಯು ರಾಜ್ಯಪಾಲ ಥಾವರ್ ಚಂದ್ ಗೆಹಲೋಟ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ, ಹಾಗೂ ಅವರ ಆಪ್ತಸಹಾಯಕರ ಸಹಿಯನ್ನು ನಕಲು ಮಾಡಿದ್ದಾನೆ.
ವಂಚನೆ ಮಾಡಿರುವ ಬಗ್ಗೆ ಕಾವ್ಯಾ ಎಂಬಾಕೆ ತಿಳಿಸಿದ್ದಾದರೂ ಲಿಖಿತ ರೂಪದಲ್ಲಿ ದೂರು ನೀಡಿರಲಿಲ್ಲ. ನಾಲ್ಕು ತಿಂಗಳ ನಂತರ ಮತ್ತೊಬ್ಬ ಮಹಿಳೆ ಲಿಖಿತ ದೂರು ನೀಡಿದ್ದರಿಂದ ಈಗ ದೂರು ದಾಖಲಿಸಿಕೊಳ್ಳಲಾಗಿದೆ. ಆದರೆ ಆರೋಪಿ ಸರ್ಜಾ ಈಗಾಗಲೇ ನ್ಯಾಯಾಲಯದಿಂದ ಜಾಮೀನು ಪಡೆದುಕೊಂಡಿರುವುದರಿಂದ ಆತನನ್ನು ಬಂಧಿಸಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೀಮಾಶಂಕರ ಗುಳೇದ ತಿಳಿಸಿದ್ದಾರೆ.
ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರ ಆಪ್ತ ಸಹಾಯಕ ಸೋಮನಗೌಡ ಅವರೂ ಈ ವಂಚನೆಯಲ್ಲಿ ಭಾಗಿಯಾಗಿದ್ದಾರೆ ಎಂದು ಕೆಲವರು ಆರೋಪಿಸಿದ್ದಾರೆ. ಈ ಆರೋಪಕ್ಕೆ ಪುರಾವೆಗಳು ಇಲ್ಲ. ತನಿಖೆ ನಂತರ ಸತ್ಯಾಂಶ ಹೊರಬರಲಿದೆ ಎಂದು ಅವರು ಹೇಳಿದರು.
ಸಾಮಾಜಿಕ ಕಾರ್ಯಕರ್ತ ಜಯಂತ ತಿಣೈಕರ್ ಪ್ರತಿಕ್ರಿಯೆ ನೀಡಿ ಈ ಹಗರಣದಲ್ಲಿ ಪ್ರಭಾವಿಗಳು ಭಾಗಿಯಾಗಿರುವ ಶಂಕೆ ಇದೆ. ಫೋನ್ ಪೇ, ಬ್ಯಾಂಕ್ ಖಾತೆ ಮೂಲಕ ರೂ.30 ಲಕ್ಷಕ್ಕಿಂತ ಹೆಚ್ಚಿನ ಹಣ ಪಡೆದು ವಂಚಿಸಿದ್ದಾರೆ. ರಾಜಕೀಯ ಒತ್ತಡ ಇರುವ ಕಾರಣಕ್ಕೆ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ ಎಂದು ದೂಷಿಸಿದರು.