ಬೆಂಗಳೂರು: ನ್ಯಾಯಮೂರ್ತಿ ನಾಗಮೋಹನ್‌ದಾಸ್ ಅವರು ನೀಡಿರುವ ಒಳಮೀಸಲಾತಿ ವರದಿಯನ್ನು ಪರಿಶೀಲಿಸಲು ಯಾವುದೇ ಸಮಿತಿಯನ್ನು ರಚಿಸದೆ ವರದಿಯನ್ನು ಯಥಾವತ್ತಾಗಿ ಜಾರಿಮಾಡಬೇಕು. ಆಗಸ್ಟ್ 16 ರಂದು ನಡೆಯಲಿರುವ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಸ್ಪಷ್ಟ ನಿರ್ಧಾರ ಕೈಗೊಳ್ಳಬೇಕು. ಇಲ್ಲಸಲ್ಲದ ನೆಪಗಳನ್ನು ಮುಂದೊಡ್ಡಿ ಮುಂದೂಡಿದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಕ್ಕೂಟ ಎಚ್ಚರಿಕೆ ನೀಡಿದೆ. ಈ ನಿಟ್ಟಿನಲ್ಲಿ ಸರ್ಕಾರವನ್ನು ಎಚ್ಚರಿಸಲು ಆಗಸ್ಟ್ 15ರಂದು ಎಲ್ಲಾ ಜಿಲ್ಲೆಗಳಲ್ಲಿ ಉಸ್ತುವಾರಿ ಸಚಿವರಿಗೆ ಕಪ್ಪು ಬಾವುಟ ಪ್ರದರ್ಶನ ಮತ್ತು ಘೇರಾವ್ ಹಾಕುವುದಾಗಿಯೂ ಸಮಿತಿ ತಿಳಿಸಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಬಸವರಾಜ್ ಕೌತಾಳ್, ಅಂಬಣ್ಣ ಅರೋಲಿಕರ್, ಎಸ್ ಮಾರೆಪ್ಪ, ಜೆ ಬಿ ರಾಜು, ಪ್ರೊ. ದೊರೆರಾಜು ಆಗ್ರಹಪಡಿಸಿದ್ದಾರೆ.
ನ್ಯಾಯಮೂರ್ತಿ ನಾಗಮೋಹನ್‌ದಾಸ್ ಅವರು ನೀಡಿದ ವರದಿಯಲ್ಲಿ ಅಲೆಮಾರಿ ಹಾಗೂ ಮಾದಿಗ, ತ್ರಿಮತಸ್ಥ ಚರ್ಮಕಾರರು ಹಾಗೂ ಸಂಬಂಧಿತ ಸಮುದಾಯಗಳು ಎಲ್ಲಾ ರೀತಿಯಲ್ಲೂ ಹಿಂದುಳಿದಿದ್ದಾರೆ ಎಂದು ತಮ್ಮ ವರದಿಯಲ್ಲಿ ಉಲ್ಲೇಖಿಸಿದ್ದಾರೆ. ಆದರೂ ಕೆಲವು ದೋಷಗಳು ಉಳಿದುಕೊಂಡಿವೆ. ಪರಾಯ್, ಮೊಗೇರಾ ಜಾತಿಗಳು ಹೊಲೆಯ ಜಾತಿಗೆ ಸಂಬಂಧಿಸಿದ ಜಾತಿಗಳು, ಮಾದಿಗ ಜಾತಿಗಳ ಪಟ್ಟಿಯಲ್ಲಿ ಅವರ ಹಿಂದುಳಿದಿರುವಿಕೆ ಆಧಾರದಲ್ಲಿ ಸೇರಿಸಲಾಗಿದೆ ಎಂಬುದನ್ನು ಅವರ ಅಭಿವೃದ್ದಿ ಅಂಕಿಅಂಶಗಳನ್ನು ನೋಡಿದರೆ ತಿಳಿದುಬರುತ್ತದೆ. ಸರ್ಕಾರ ಹಾಗೂ ಆ ಸಮುದಾಯಗಳು ತಾವು ಯಾವ ಪಟ್ಟಿಯಲ್ಲಿರಬೇಕೆಂದು ಬಯಸುತ್ತಾರೋ ಅವರನ್ನು ಅಲ್ಲಿಗೆ ಸೇರಿಸಲು ಯಾರದ್ದೂ ಅಭ್ಯಂತರವಿಲ್ಲ. ಇಂತಹ ಸಣ್ಣ ಪುಟ್ಟ ಲೋಪಗಳನ್ನು ಸರಿಪಡಿಸಿಕೊಂಡು ಒಳಮೀಸಲಾತಿಯನ್ನು ಜಾರಿಗೊಳಿಸಬೇಕು ಎಂದು ಆಗ್ರಹಪಡಿಸಿದ್ದಾರೆ.
ಕಳೆದ 30 ವರ್ಷಗಳ ಪರಿಶಿಷ್ಟ ಜಾತಿಗಳ ಸಾಂವಿಧಾನಿಕ ಹಕ್ಕುಗಳಿಗಾಗಿ ಆಗ್ರಹಿಸಿ ಅಂದು ಪ್ರೊ ಬಿ. ಕೃಷ್ಣಪ್ಪನವರು ಹೋರಾಟ ಆರಂಭಿಸಿದ್ದರು. ಅಂದಿನಿಂದ ಇಂದಿನವರೆಗೆ ಒಳಮೀಸಲಾತಿಗಾಗಿ ಆಗ್ರಹಿಸಿ ಹೋರಾಟ ನಡೆಸುತ್ತಾ ಬರಲಾಗಿದೆ. ಸರ್ಕಾರವನ್ನು ಎಚ್ಚರಿಸಲು ಆಗಸ್ಟ್ 11 ಆಗಸ್ಟ್ ರಂದು ಫ್ರೀಡಂ ಪಾರ್ಕ್‌ನಲ್ಲಿ ಅನಿರ್ಧಿಷ್ಟಾವದಿ ಆಹೋರಾತ್ರಿ ಸತ್ಯಾಗ್ರಹವನ್ನೂ ಆರಂಭಿಸಲಾಗಿದೆ.
ಸುದ್ದಿಗೋಷ್ಟೀಯಲ್ಲಿ ಬಸವರಾಜ್ ಕೌತಾಳ್, ಅಂಬಣ್ಣ ಅರೋಲಿಕರ್, ಎಸ್ ಮಾರೆಪ್ಪ, ಜೆ ಬಿ ರಾಜು, ಪ್ರೊ. ದೊರೆರಾಜು, ಶಿವರಾಯ ಅಕ್ಕರಕಿ, ಕರಿಯಪ್ಪ ಗುಡಿಮನಿ, ಕೇಶವಮೂರ್ತಿ, ಹೆಣ್ಣೂರು ಶ್ರೀನಿವಾಸ್, ಸಣ್ಣ ಮಾರೆಪ್ಪ, ಡಿ.ಟಿ ವೆಂಕಟೇಶ್, ಚಾವಡಿ ಲೋಕೇಶ್, ಉಮಾದೇವಿ, ಪಿಚ್ಚಳ್ಳಿ ಶ್ರೀನಿವಾಸ್, ಸಿದ್ದಲಿಂಗಯ್ಯ ಕಮಲಾನಗರ, ಶಿವಲಿಂಗಮ್, ಭೀಮನಕೆರೆ ಶಿವಮೂರ್ತಿ, ಶಿವಲಿಂಗಣ್ಣ, ಪಾರ್ತಿಭನ್, ಮಂಜು ಡಾ ಹುಲಿಕುಂಟೆ ಮೂರ್ತಿ, ಮುತ್ತುರಾಜ್, ನರಸಿಂಹಮೂರ್ತಿ, ಓಬಳೇಶ್, ಚಂದ್ರು ತರಹುಣಿಸೆ ಉಪಸ್ಥಿತರಿದ್ದರು.