ನಗರ ಪ್ರದೇಶಗಳ ಅಕ್ರಮ ಬಡಾವಣೆಗಳ ನಿರ್ದಾಕ್ಷಿಣ್ಯ ತೆರವು: ಸಚಿವ ಭೈರತಿ ಸುರೇಶ್ ಎಚ್ಚರಿಕೆ

Most read

ಬೆಂಗಳೂರು: ರಾಜ್ಯದ ನಗರ ಪ್ರದೇಶಗಳಲ್ಲಿ ನಿರ್ಮಾಣವಾಗಿರುವ ಅಕ್ರಮ ಬಡಾವಣೆಗಳನ್ನು ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸಲಾಗುತ್ತದೆ ಎಂದು ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಬಿ.ಎಸ್.ಸುರೇಶ್ ಎಚ್ಚರಿಕೆ ನೀಡಿದ್ದಾರೆ. ಅಲ್ಲದೇ, ಅಕ್ರಮ ಬಡಾವಣೆಗಳನ್ನು ತೆರವುಗೊಳಿಸಲು ವಿಫಲರಾಗುವ ಅಧಿಕಾರಿಗಳು ಮತ್ತು ಸಿಬ್ಬಂದಿ ವಿರುದ್ಧ ಶಿಸ್ತಿನ ಕ್ರಮ ಜರುಗಿಸಲಾಗುತ್ತದೆ ಎಂದೂ ಅವರು ಹೇಳಿದ್ದಾರೆ.

ವಿಧಾನಪರಿಷತ್ತಿನಲ್ಲಿ ಸದಸ್ಯ ಸಿ.ಎನ್.ಮಂಜೇಗೌಡ ಅವರು ನಿಯಮ 330 ರಡಿ ಅಕ್ರಮ ಬಡಾವಣೆಗಳ ವಿಚಾರವನ್ನು ಪ್ರಸ್ತಾಪಿಸಿದಾಗ ಸಚಿವರು ಉತ್ತರಿಸಿದರು.

ರಾಜ್ಯದಲ್ಲಿ ಬಡಾವಣೆ ನಿರ್ಮಾಣ ಮಾಡುವವರು ವಿನ್ಯಾಸ ಅನುಮೋದನೆಯನ್ನು ಪಡೆಯದೇ ಬಡಾವಣೆ ನಿರ್ಮಾಣ ಮಾಡಿದರೆ ಅದು ಅಕ್ರಮವಾಗುತ್ತದೆ. ಇಂತಹ ಬಡಾವಣೆಗಳಲ್ಲಿನ ನಿವೇಶನಗಳಿಗೆ ಖಾತೆ ಮಾಡದಂತೆ ನಿರ್ಬಂಧ ಹೇರಲಾಗಿದೆ. ಅಲ್ಲದೇ, ಅಂತಹ ಬಡಾವಣೆಗಳ ನಿವೇಶನಗಳಿಗೆ ಕಟ್ಟಡ ನಿರ್ಮಾಣಕ್ಕೆ ಅನುಮತಿಯನ್ನೂ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಅನಧಿಕೃತ ಬಡಾವಣೆಗಳ ನಿರ್ಮಾಣವನ್ನು ತಡೆಗಟ್ಟಲು ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1960 ರ ಕಲಂ 17(4) ರ ಅಡಿಯಲ್ಲಿ ಅಧಿಕಾರಿಗಳಿಗೆ ಸಂಪೂರ್ಣ ಅಧಿಕಾರ ನೀಡಲಾಗಿದೆ. ಬಡಾವಣೆ ಮಾಲೀಕರಿಗೆ ನೋಟಿಸ್ ನೀಡಿ ಅಕ್ರಮ ನಿರ್ಮಾಣವನ್ನು ತಡೆಗಟ್ಟಲು ವಿಫಲರಾಗುವ ಅಧಿಕಾರಿಗಳಿಗೆ ದಂಡ ವಿಧಿಸುವ ಅಥವಾ ಅಮಾನತು ಮಾಡುವ ಅಥವಾ ಕೆಲಸದಿಂದಲೇ ವಜಾ ಮಾಡುವ ಅಧಿಕಾರ ಸರ್ಕಾರಕ್ಕಿದೆ ಎಂದರು.

ಬಡವರಿಗೆ ನಿವೇಶನ:

ರಾಜ್ಯದ ಹಲವು ನಗರ ಪ್ರದೇಶಗಳಲ್ಲಿ ಬಡವರಿಗೆ ನಿವೇಶನ ನೀಡುವ ಕುರಿತು ಯೋಜನೆ ರೂಪಿಸಲಾಗುತ್ತಿದೆ. ಭೂಮಾಲೀಕರಿಗೆ ಶೇ.50 ಮತ್ತು ನಿವೇಶನಗಳಿಗೆ ಶೇ.50 ರಷ್ಟು ಪ್ರದೇಶವನ್ನು ಮೀಸಲಿಟ್ಟು ನಿವೇಶನಗಳನ್ನು ಹಂಚಿಕೆ ಮಾಡಲಾಗುತ್ತದೆ ಎಂದು ಸಚಿವರು ತಿಳಿಸಿದರು.

ಬೆಂಗಳೂರು ಮಾದರಿಯಲ್ಲಿ ಆಸ್ತಿಗಳಿಗೆ ಇ-ಖಾತೆಯನ್ನು ನೀಡುವ ಕುರಿತು ಸರ್ಕಾರ ಗಂಭೀರ ಚಿಂತನೆ ನಡೆಸಿದೆ. ಈ ಸಂಬಂಧ ಕಾನೂನು ಇಲಾಖೆಯೊಂದಿಗೆ ಸಮಾಲೋಚನೆ ನಡೆಸಲಾಗುತ್ತಿದ್ದು, ಅಭಿಪ್ರಾಯ ಪಡೆದ ನಂತರ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಅವರು ಹೇಳಿದರು.

More articles

Latest article