ಬೆಂಗಳೂರು: ಒಳಮೀಸಲಾತಿ ಸಂಬಂಧ ರಾಜ್ಯಸರ್ಕಾರ ಸ್ಪಷ್ಟವಾದ ತೀರ್ಮಾನ ತೆಗೆದುಕೊಂಡ ನಂತರವಷ್ಟೇ ವೈದ್ಯಕೀಯ ಕಾಲೇಜುಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುವುದು ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ವಿಧಾನ ಪರಿಷತ್ ನಲ್ಲಿ ತಿಳಿಸಿದ್ದಾರೆ.
ಸೋಮವಾರ ಪ್ರಶ್ನೋತ್ತರ ಅವಧಿಯಲ್ಲಿ ಸದಸ್ಯ ಮಂಜೇಗೌಡ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ್ ಅವರು ಒಳಮೀಸಲಾತಿ ಕಲ್ಪಿಸುವ ಸಂಬಂಧ ಸರ್ಕಾರಕ್ಕೆ ವರದಿಯನ್ನು ನೀಡಿದ್ದಾರೆ. ಈ ವರದಿಯ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಲಾಗಿದ್ದು, ಮುಂದಿನ ವಿಶೇಷ ಸಂಪುಟ ಸಭೆಯಲ್ಲಿ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ ಎಂದರು.
ಒಳಮೀಸಲಾತಿ ಕುರಿತು ಸರ್ಕಾರ ಅಂತಿಮ ನಿರ್ಧಾರ ತೆಗೆದುಕೊಳ್ಳುವವರೆಗೂ ಯಾವುದೇ ಇಲಾಖೆಯಲ್ಲಿ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳದಂತೆ ಮುಖ್ಯಮಂತ್ರಿಯವರು ಸೂಚನೆ ಕೊಟ್ಟಿದ್ದಾರೆ. ಅಲ್ಲಿಯವರೆಗೂ ನಾವು ಏನು ಮಾಡಲೂ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ವೈದ್ಯಕೀಯ ಕಾಲೇಜುಗಳಲ್ಲಿ ಒಟ್ಟು 21,860 ಹುದ್ದೆಗಳಿವೆ. ಇದರಲ್ಲಿ 9,413 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗಿದೆ. 12,447 ಹುದ್ದೆಗಳು ಖಾಲಿ ಇವೆ ಎಂದು ಅಂಕಿ ಅಂಶಗಳ ವಿವರ ನೀಡಿದರು. ಹುದ್ದೆಗಳು ಖಾಲಿ ಇದ್ದರೂ ವೈದ್ಯಕೀಯ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಬೋಧನೆ ಇಲ್ಲವೇ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಲು ಯಾವುದೇ ರೀತಿಯ ಸಮಸ್ಯೆಯಾಗಿಲ್ಲ. ಸರ್ಕಾರ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಸಚಿವ ಶರಣಪ್ರಕಾಶ ಪಾಟೀಲರು ಹೇಳಿದರು.
ಅಗತ್ಯವಿರುವ ಕಡೆ ಸಿಬ್ಬಂದಿಗಳನ್ನು ಹೊರಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲು ವೈದ್ಯಕೀಯ ಕಾಲೇಜುಗಳ ನಿರ್ದೇಶಕರಿಗೆ ಮತ್ತು ಸಂಬಂಧಪಟ್ಟ ಆಸ್ಪತ್ರೆಯ ಮುಖ್ಯಸ್ಥರಿಗೂ ನಿರ್ದೇಶನ ನೀಡಲಾಗಿದೆ. ಯಾದಗಿರಿ, ರಾಯಚೂರು, ಕಲಬುರಗಿ ಸೇರಿದಂತೆ ಮತ್ತಿತರ ಕೆಲವು ವೈದ್ಯಕೀಯ ಕಾಲೇಜುಗಳಲ್ಲಿ ಸಿಬ್ಬಂದಿಗಳ ಕೊರತೆ ಇತ್ತು. ಈಗಾಗಲೇ ಅದನ್ನು ಭರ್ತಿ ಮಾಡಿದ್ದೇವೆ. ಯಾವುದೇ ಕಾಲೇಜು ಇಲ್ಲವೇ ಆಸ್ಪತ್ರೆಗಳಲ್ಲಿ ಸಮಸ್ಯೆ ಎದುರಾಗಿಲ್ಲ. ಹಾಗೊಂದು ವೇಳೆ ಸಮಸ್ಯೆ ಇರುವುದನ್ನು ನಮ ಗಮನಕ್ಕೆ ತಂದರೆ ತಕ್ಷಣವೇ ಪರಿಹರಿಸುವುದಾಗಿ ಸಚಿವರು ಆಶ್ವಾಸನೆ ನೀಡಿದರು.