ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಾಹೀರಾತು ಪ್ರಚಾರಕ್ಕಾಗಿ 2020–21ರಿಂದ 24–25ರ ಆಗಸ್ಟ್‌ವರೆಗೆ ಒಟ್ಟು ರೂ. 2,230.14 ಕೋಟಿ ವೆಚ್ಚ ಮಾಡಿದೆ. ಈ ಸಂಬಂಧ ತೃಣಮೂಲ ಕಾಂಗ್ರೆಸ್ ಸಂಸದ ಡೆರೆಕ್ ಓ’ಬ್ರಯಾನ್ ರಾಜ್ಯಸಭೆಯಲ್ಲಿ ಆಗಸ್ಟ್ 8ರಂದು ಪ್ರಶ್ನೆ ಕೇಳಿದ್ದರು. ಆದರೆ ಕೇಂದ್ರ ಸರ್ಕಾರ ಸಮರ್ಪಕ ಉತ್ತರ ನೀಡದೆ ಜಾಹೀರಾತು ಮತ್ತು ದೃಶ್ಯ ಪ್ರಸಾರ ನಿರ್ದೇಶನಾಲಯದ ವೆಬ್‌ಸೈಟ್ ನಲ್ಲಿ ಅಂಕಿಅಂಶಗಳು ಲಭ್ಯ ಎಂದು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಎಲ್. ಮುರುಗನ್ ಉತ್ತರಿಸಿದ್ದರು.
ಆದರೂ ಪಟ್ಟು ಬಿಡದ ಡೆರೆಕ್ ಓ’ಬ್ರಯಾನ್ ವೆಬ್‌ಸೈಟ್‌ನಿಂದ ಮಾಹಿತಿ ಸಂಗ್ರಹಿಸಿ ಈ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದ್ದಾರೆ.
ಡಿಎವಿಪಿ ಇಲಾಖೆಯ ವೆಬ್‌ಸೈಟ್ ನಲ್ಲಿ ಅಂಕಿಅಂಶಗಳನ್ನು ವಿಶ್ಲೇಷಣೆ ಮಾಡಿದಾಗ 2020-21ರಲ್ಲಿ ಜಾಹೀರಾತುಗಳಿಗಾಗಿ ರೂ. 349.24, 2021-22ರಲ್ಲಿ ರೂ.274.87 ಕೋಟಿ ವೆಚ್ಚ ಮಾಡಿದೆ. 2022-23ರಲ್ಲಿ ರೂ. 347.38 ಕೋಟಿ, 2023-24ರಲ್ಲಿ ರೂ. 656.08 ಕೋಟಿ ಮತ್ತು 2024-25ರಲ್ಲಿ ರೂ. 643.63 ಕೋಟಿಗೆ ಏರಿಕೆಯಾಗಿದೆ. ಹೀಗೆ ಒಟ್ಟಾರೆ 66 ಸಚಿವಾಲಯಗಳಿಗೆ ಪ್ರತಿವರ್ಷ ಸರಾಸರಿ ರೂ. 454 ಕೋಟಿ ಖರ್ಚು ಮಾಡಲಾಗಿದೆ ಎಂದು ವಿವರಿಸಿದ್ದಾರೆ.
ಐದು ವರ್ಷಗಳಲ್ಲಿ 2,230.14 ಕೋಟಿ ಖರ್ಚು ಮಾಡುವ ಮೂಲಕ ಪ್ರಧಾನಿ ಮೋದಿ ಪಿಆರ್‌ಒ ಆಗಿ ಬದಲಾಗಿದ್ದಾರೆ ಎಂದೂ ಅವರು ವ್ಯಂಗ್ಯವಾಡಿದ್ದಾರೆ.
ಈ ಅಂಕಿಅಂಶಗಳನ್ನು ಸಂಸತ್ತಿನಲ್ಲಿ ಬಹಿರಂಗಪಡಿಸಲು ಹಿಂಜರಿದ ಸರ್ಕಾರ ಜಾಹೀರಾತು ಮತ್ತು ದೃಶ್ಯ ಪ್ರಸಾರ ನಿರ್ದೇಶನಾಲಯದ ವೆಬ್‌ಸೈಟ್ ನಲ್ಲಿ ಅಂಕಿಅಂಶಗಳು ಸಿಗುತ್ತವೆ ಎಂದು ಉತ್ತರಿಸಿದ್ದಕ್ಕೆ ಒಬ್ರಯಾನ್ ಅವರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಪ್ರಧಾನಿ ಮೋದಿ ಸರ್ಕಾರ ವರ್ಷದಿಂದ ವರ್ಷಕ್ಕೆ ದುರ್ಬಲವಾಗುತ್ತಿದೆ. ಪ್ರಶ್ನೋತ್ತರ ಅವಧಿಯಲ್ಲಿ ನೇರವಾಗಿ ಉತ್ತರಗಳನ್ನು ನೀಡದೆ, ಸಚಿವಾಲಯಗಳ ವೆಬ್‌ಸೈಟ್‌ಗಳಲ್ಲಿ ಹುಡುಕಿಕೊಳ್ಳಿ ಎಂದು ಉತ್ತರಿಸುತ್ತಿದೆ ಎಂದು ಟೀಕಿಸಿದ್ದಾರೆ.