ಬೆಂಗಳೂರು: ಪ್ರೊ.ಸುಖದೇವ್ ಥೋರಟ್ ನೇತೃತ್ವದ ರಾಜ್ಯ ಶಿಕ್ಷಣ ನೀತಿ ಆಯೋಗವು ತನ್ನ ಅಂತಿಮ ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿದೆ. ಪ್ರಾಥಮಿಕ, ಪ್ರೌಢ ಮತ್ತು ಉನ್ನತ ಶಿಕ್ಷಣದಲ್ಲಿ ಕೆಲವು ಶಿಫಾರಸ್ಸುಗಳನ್ನು ಮಾಡಿದೆ.
ಶಾಲಾ ಹಂತದಲ್ಲಿ 2+8+4 (2 ವರ್ಷ ಪ್ರಾಥಮಿಕ-ಪೂರ್ವ, 8 ವರ್ಷ ಪ್ರಾಥಮಿಕ, 4 ವರ್ಷ ಮಧ್ಯಮಿಕ ಶಿಕ್ಷಣ) ಸೂತ್ರ ಅಳವಡಿಸಬೇಕು. ರಾಷ್ಟ್ರೀಯ ಶಿಕ್ಷಣ ನೀತಿ- 2020ಕ್ಕೆ ಪರ್ಯಾಯವಾಗಿ ರಾಜ್ಯಕ್ಕೂ ಒಂದು ಶಿಕ್ಷಣ ನೀತಿಯನ್ನು ರೂಪಿಸಲು ಪ್ರೊ. ಸುಖದೇವ್ ಥೋರಟ್ ಅವರ ಅಧ್ಯಕ್ಷತೆಯಲ್ಲಿ ರಾಜ್ಯ ಶಿಕ್ಷಣ ಆಯೋಗವನ್ನು ಸರ್ಕಾರ ರಚನೆ ಮಾಡಿತ್ತು. ಸಮಿತಿಯಲ್ಲಿ 11 ಸದಸ್ಯರು, 6 ವಿಷಯ ತಜ್ಞರು, ಸಲಹೆಗಾರರು ಮತ್ತು ಒಬ್ಬ ಸದಸ್ಯ ಕಾರ್ಯದರ್ಶಿ ಇದ್ದರು.
ವಲಸೆ ಹೋಗುವ ಮಕ್ಕಳಿಗಾಗಿ ವಸತಿ ಶಾಲೆಗಳ ಸ್ಥಾಪನೆ, ರಾಜ್ಯಾದ್ಯಂತ ಮಾಧ್ಯಮಿಕ ಶಿಕ್ಷಣದ ಸಾರ್ವತ್ರೀಕರಣ, ಬಸ್ ಸೌಲಭ್ಯವಿಲ್ಲದ ಮಾರ್ಗಗಳಲ್ಲಿ ಹೊಸ ಶಾಲೆಗಳ ಸ್ಥಾಪನೆ, ಬೋರ್ಡ್ ಶಾಲೆಗಳಲ್ಲಿ 5ನೇ ತರಗತಿವರೆಗೆ ಕನ್ನಡ/ ಮಾತೃಭಾಷೆಯನ್ನು ಬೋಧನಾ ಮಾಧ್ಯಮವಾಗಿ ಕಡ್ಡಾಯಗೊಳಿಸಿ ಶಿಫಾರಸು ಮಾಡಿದೆ.
ವಿದ್ಯಾರ್ಥಿಗಳ ಸಂಖ್ಯೆಯ ಕೊರತೆಯಿಂದ ಮುಚ್ಚಲ್ಪಟ್ಟ ಪ್ರಾಥಮಿಕ ಶಾಲೆಗಳನ್ನು ಪುನಾರಂಭ, ಉಚಿತ ಹಾಗೂ ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ (RTE) ಅಡಿಯಲ್ಲಿ 4-18 ವರ್ಷ ವಯಸ್ಸಿನವರಿಗೆ ವಿಸ್ತರಣೆ, ಸರ್ಕಾರಿ ಶಾಲಾ ಗುಣಮಟ್ಟವನ್ನು ಕೇಂದ್ರೀಯ ವಿದ್ಯಾಲಯಗಳಿಗೆ ಅನುಗುಣವಾಗಿ ಹೆಚ್ಚಳ, ಸರ್ಕಾರಿ ಶಾಲಾ ಅಭಿವೃದ್ಧಿ ಕೇಂದ್ರಗಳನ್ನು ಎಲ್ಲಾ ತಾಲೂಕುಗಳಲ್ಲಿ ಸ್ಥಾಪನೆ ಮತ್ತು ಶಾಲಾ ಶಿಕ್ಷಣದಲ್ಲಿ ಸಮಗ್ರ, ನಿರಂತರ ಮೌಲ್ಯಮಾಪನ(CCSE) ಅಳವಡಿಸಲು ಶಿಫಾರಸು ಮಾಡಿದೆ.
ಖಾಸಗಿ ಶಾಲೆಗಳ ಜತೆಗೆ, ಖಾಸಗಿ ಪೂರ್ವ ಪ್ರಾಥಮಿಕ ಶಾಲೆಗಳ ನಿಯಂತ್ರಣ, ಅದಕ್ಕಾಗಿ ಪ್ರತ್ಯೇಕ ನಿಯಂತ್ರಣ ಚೌಕಟ್ಟು ರಚನೆ, ಖಾಸಗೀಕರಣ ನಿಯಂತ್ರಣ, ಪಠ್ಯಪುಸ್ತಕಗಳಿಗಾಗಿ ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಸಂಸ್ಥೆಯ (ಎನ್‌ಸಿಇಆರ್‌ಟಿ) ಮೇಲಿನ ಅವಲಂಬನೆ ಕಡಿಮೆಗೊಳಿಸುವುದು, ಪಠ್ಯ ವಿಷಯಗಳನ್ನು ಸ್ಥಳೀಯವಾಗಿಸುವುದು ಮತ್ತು ಶಾಲಾ ಶಿಕ್ಷಣಕ್ಕೆ ಪ್ರತ್ಯೇಕವಾದ ಸಮಗ್ರ ಪಠ್ಯಪುಸ್ತಕಗಳನ್ನು ರಚಿಸಬೇಕು ಎಂದು ಹೇಳಿದೆ.
ಬಜೆಟ್ ನಲ್ಲಿ ಉನ್ನತ ಶಿಕ್ಷಣದ ಅನುದಾನ ಶೇ.14ರಿಂದ ಶೇ.25-30ಕ್ಕೆ ಹೆಚ್ಚಳ, ಪರೋಕ್ಷ ತೆರಿಗೆಗಳ ಮೇಲೆ ಶಿಕ್ಷಣ ಸರ್ ಚಾರ್ಜ್, ಪದವಿಪೂರ್ವ ಕಾರ್ಯಕ್ರಮಗಳಲ್ಲಿ ಸಮಗ್ರ ಲೈಂಗಿಕ ಶಿಕ್ಷಣವನ್ನು ಪರಿಚಯ, ಖಾಸಗಿ ಸಂಸ್ಥೆಗಳಲ್ಲಿ ಶುಲ್ಕ ನಿಯಂತ್ರಣಕ್ಕೆ ಶಾಶ್ವತ ನಿಯಂತ್ರಣ ವ್ಯವಸ್ಥೆ ಸ್ಥಾಪಿಸಬೇಕು ಎಂದೂ ಥೋರಟ್ ಆಯೋಗ ಶಿಫಾರಸು ಮಾಡಿದೆ.