ಮಾಧ್ಯಮಗಳ ಮೇಲಿನ ನಿರ್ಬಂಧ ಮುಂದುವರೆಸಲು ಕೋರಿದ್ದ ಅರ್ಜಿ ಸುಪ್ರೀಂಕೋರ್ಟ್‌ನಲ್ಲಿ ವಜಾ; ಧರ್ಮಸ್ಥಳದ ಹರ್ಷೇಂದ್ರ ಕುಮಾರ್‌ ಅವರಿಗೆ ಹಿನ್ನಡೆ

Most read

ನವದೆಹಲಿ:  ಧರ್ಮಸ್ಥಳ ಗ್ರಾಮದಲ್ಲಿ ಹತ್ಯೆ ಮಾಡಿ ನೂರಾರು ಶವಗಳನ್ನು ಹೂತುಹಾಕಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ, ಮಾನಹಾನಿಕರ ವರದಿಗಳನ್ನು ನಿರ್ಬಂಧಿಸಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಮಾಧ್ಯಮಗಳ ಮೇಲೆ ಯಾವುದೇ ನಿರ್ಬಂಧ ಹೇರಲು ನಿರಾಕರಿಸಿದೆ. ಇದರಿಂದ ತಡೆಯಾಜ್ಞೆ ಕೋರಿ ಸುಪ್ರೀಂಕೋರ್ಟ್‌  ಮೆಟ್ಟಿಲೇರಿದ್ದ ಧರ್ಮಸ್ಥಳ ಸಂಸ್ಥೆಗಳ ಕಾರ್ಯದರ್ಶಿ ಹರ್ಷೇಂದ್ರ ಕುಮಾರ್‌ ಡಿ. ಅವರಿಗೆ ಹಿನ್ನಡೆಯಾಗಿದೆ.

ಜತೆಗೆ ಸುಪ್ರೀಂಕೋರ್ಟ್‌, ಹರ್ಷೇಂದ್ರ ಕುಮಾರ್‌ ಮತ್ತು ಕುಡ್ಲ ರ್‍ಯಾಂಪೇಜ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯಂತರ ತಡೆಯಾಜ್ಞೆ ಕೋರಿರುವ ಅರ್ಜಿಯನ್ನು ಹೊಸದಾಗಿ ಪರಿಗಣಿಸಿ, ಸೂಕ್ತ ತೀರ್ಮಾನ ಕೈಗೊಳ್ಳುವಂತೆ ಕರ್ನಾಟಕದ ವಿಚಾರಣಾ ನ್ಯಾಯಾಲಯಕ್ಕೆ ನಿರ್ದೇಶನ ನೀಡಿದೆ.

ನ್ಯಾಯಮೂರ್ತಿಗಳಾದ ರಾಜೇಶ್ ಬಿಂದಾಲ್ ಮತ್ತು ಮನಮೋಹನ್ ಅವರಿದ್ದ ಪೀಠದ ಮುಂದೆ ಇಂದು ಈ ಪ್ರಕರಣದ ವಿಚಾರಣೆ ನಡೆಯಿತು. ವಿಚಾರಣೆ ಸಂದರ್ಭದಲ್ಲಿ ಮಾಧ್ಯಮಗಳ ಮೇಲೆ ನಿರ್ಬಂಧ ಹೇರುವ ಅಗತ್ಯದ ಬಗ್ಗೆ ಅನುಮಾನ ವ್ಯಕ್ತಪಡಿಸಿದ ನ್ಯಾಯಾಲಯ ಅತ್ಯಂತ ಅಪರೂಪದ ಪ್ರಕರಣಗಳಲ್ಲಿ ಮಾತ್ರ ಇಂತಹ ನಿರ್ಬಂಧದ ಆದೇಶ ಅಂದರೆ ಗ್ಯಾಗ್‌ ಆರ್ಡರ್‌ ಗಳನ್ನು ನೀಡಬಹುದು. ಆದರೆ ಬೆಂಗಳೂರಿನ ಸೆಷನ್ಸ್‌ ನ್ಯಾಯಾಲಯ ನೀಡಿರುವ ತೀರ್ಪು ವಾಕ್ ಸ್ವಾತಂತ್ರ್ಯವನ್ನು ಹತ್ತಿಕ್ಕುತ್ತದೆ ಎಂದು ನ್ಯಾಯಮೂರ್ತಿ ಮನಮೋಹನ್ ಅವರು ಅಭಿಪ್ರಾಯಪಟ್ಟರು.

ಹರ್ಷೇಂದ್ರ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಮುಕುಲ್ ರೋಹಟಗಿ, ಸಾಮಾಜಿಕ ಜಾಲತಾಣ ಮತ್ತು ಸುದ್ದಿ ವಾಹಿನಿಗಳಲ್ಲಿ ಧರ್ಮಸ್ಥಳ ಕುರಿತು ಪ್ರತಿದಿನ ಮಾನಹಾನಿಕರ ವರದಿಗಳು ಪ್ರಸಾರವಾಗುತ್ತಿವೆ ಎಂದು ಕಳವಳ ವ್ಯಕ್ತಪಡಿಸಿ  ಕನಿಷ್ಠ ಮಧ್ಯಂತರ ರಕ್ಷಣೆ ನೀಡುವಂತೆ ಮನವಿ ಮಾಡಿದರು.

ಇವರ ಮನವಿಯನ್ನು ತಿರಸ್ಕರಿಸಿದ ನ್ಯಾಯಪೀಠ, ಮಾನಹಾನಿಕರ ವರದಿಗಳಿಂದ ನಷ್ಟವಾದರೆ, ಅದಕ್ಕೆ ಪರಿಹಾರವನ್ನು ಕೇಳಲು ಕಾನೂನಿನಲ್ಲಿ ಅವಕಾಶವಿದೆ. ಹಾಗೆಂದು ಮಾಧ್ಯಮಗಳ ಮೇಲೆ ನಿರ್ಬಂಧ ಹೇರುವುದು ಸರಿಯಲ್ಲ ಎಂದು ತಿಳಿಸಿತು.

ಪ್ರಕರಣದ ಹಿನ್ನೆಲೆ:

ಧರ್ಮಸ್ಥಳದಲ್ಲಿ ನೂರಾರು ಹತ್ಯೆಗಳನ್ನು ನಡೆಸಿ ಹೆಣಗಳನ್ನು ತನ್ನ ಮೂಲಕ ಹೂತು ಹಾಕಿಸಲಾಗಿದೆ ಎಂದು ಅನಾಮಿಕ ಸಾಕ್ಷಿ ದೂರುದಾರನೊಬ್ಬ ದೂರು ಸಲ್ಲಿಸಿದ್ದ. ಈ ದೂರಿನ ಆಧಾರದ ಅನ್ವಯ ತಮ್ಮ ಹಾಗೂ ತಮ್ಮ ಕುಟುಂಬ ಮತ್ತು ಧರ್ಮಸ್ಥಳ ದೇವಸ್ಥಾನದ ವಿರುದ್ಧ ಮಾನಹಾನಿಕರ ವರದಿಗಳು ಪ್ರಕಟವಾಗುತ್ತಿವೆ ಎಂದು ಆರೋಪಿಸಿ ಕಾರ್ಯದರ್ಶಿ ಹರ್ಷೇಂದ್ರ ಕುಮಾರ್ ಅವರು ಬೆಂಗಳೂರಿನ ಸಿಟಿ ಸಿವಿಲ್ ಮತ್ತು ಸೆಷನ್ಸ್‌ ನ್ಯಾಯಾಲಯದಲ್ಲಿ ದಾವೆ ಹೂಡಿ 8,842 ಆಕ್ಷೇಪಾರ್ಹ ಲಿಂಕ್‌ ಉಲ್ಲೇಖಿಸಿದ್ದರು. ಈ ಅರ್ಜಿಯನ್ನು ಪರಿಗಣಿಸಿದ್ದ ಬೆಂಗಳೂರಿನ ಸೆಷನ್ಸ್‌ ನ್ಯಾಯಾಲಯ, ಜುಲೈ 18 ರಂದು ಕುಡ್ಲ ರ್‍ಯಾಂಪೇಜ್‌ ಯೂಟ್ಯೂಬ್ ಚಾನೆಲ್ ಸೇರಿದಂತೆ ಬಹುತೇಕ ಮಾಧ್ಯಮಗಳಲ್ಲಿ ಧರ್ಮಸ್ಥಳ ಕುರಿತು ವರದಿ ಪ್ರಸಾರ ಮಾಡದಂತೆ  ತಾತ್ಕಾಲಿಕ ತಡೆಯಾಜ್ಞೆ ನೀಡಿತ್ತು.

ಈ ಆದೇಶವನ್ನು ‘ಕುಡ್ಲ ರ್‍ಯಾಂಪೇಜ್‌’ ಯೂಟ್ಯೂಬ್‌ ಚಾನೆಲ್ ರಾಜ್ಯ ಹೈಕೋರ್ಟ್‌ನಲ್ಲಿ ಪ್ರಶ್ನಿಸಿತ್ತು. ಆಗಸ್ಟ್ 1 ರಂದು, ಹೈಕೋರ್ಟ್ ಯೂಟ್ಯೂಬ್ ಚಾನೆಲ್ ಮೇಲಿನ ನಿರ್ಬಂಧವನ್ನು ತೆಗೆದುಹಾಕಿತ್ತು.

ಮಾಧ್ಯಮಗಳ ಮೇಲಿನ ನಿರ್ಬಂಧವನ್ನು ಮುಂದುವರಿಸಲು ಹರ್ಷೇಂದ್ರ ಕುಮಾರ್‌  ಸೆಷನ್ಸ್‌ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ ನ್ಯಾಯಾಧೀಶೆ ಅನಿತಾ ಎಂ. ಈ ಅರ್ಜಿಯನ್ನು ವಜಾಗೊಳಿಸಿದ್ದರು. ನಂತರ ಹರ್ಷೇಂದ್ರ ಕುಮಾರ್‌ ಡಿ. ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದರು. ಆದರೆ ಅಲ್ಲಿಯೂ ಅವರಿಗೆ ಹಿನ್ನಡೆಯಾಗಿದೆ.

More articles

Latest article