ಬೆಂಗಳೂರು: ಮತಗಳ್ಳತನ ವಿಚಾರವನ್ನು ನಮ್ಮ ಹೈಕಮಾಂಡ್ ನಾಯಕರು ಗಂಭೀರವಾಗಿ ಪರಿಗಣಿಸಿದ್ದು, ಮತದಾರರ ಹಕ್ಕಿನ ರಕ್ಷಣೆ ಮಾಡಬೇಕಾಗಿರುವುದು ರಾಜಕೀಯ ಪಕ್ಷಗಳ ಕರ್ತವ್ಯ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಕೇಂದ್ರ ಚುನಾವಣೆ ಆಯೋಗ ಪ್ರಾಯೋಜಿತ ಮತ ಅಕ್ರಮದ ವಿರುದ್ಧ ಆಗಸ್ಟ್ 8 ರಂದು ಬೆಂಗಳೂರಲ್ಲಿ ಆಯೋಜಿಸಿರುವ ಪ್ರತಿಭಟನಾ ಸಭೆ ಹಿನ್ನೆಲೆಯಲ್ಲಿ ಕೆಪಿಸಿಸಿಯ ಭಾರತ್ ಜೋಡೋ ಭವನದಲ್ಲಿ ನಡೆದ ಸಭೆಯ ನಂತರ ಅವರು ಮಾತನಾಡಿದರು.
ನಮ್ಮ ಮೈತ್ರಿ ನಾಯಕ ಶಿಬು ಸೊರೇನ್ ಅವರ ನಿಧನವಾದ ಕಾರಣಕ್ಕೆ ಆಗಸ್ಟ್ 5ರಂದು ನಡೆಸಬೇಕಾಗಿದ್ದ ಪ್ರತಿಭಟನೆಯನ್ನು ಆಗಸ್ಟ್ 8ಕ್ಕೆ ಮುಂದೂಡಲಾಗಿತ್ತು. ಸ್ವಾತಂತ್ರ್ಯ ಉದ್ಯಾನದಲ್ಲಿ ಕಾನೂನು ಚೌಕಟ್ಟಿನಲ್ಲಿ ಪ್ರತಿಭಟನೆ ನಡೆಯಲಿದೆ. ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು 8ರ ಬೆಳಗ್ಗೆ 10.30ಕ್ಕೆ ಆಗಮಿಸಲಿದ್ದು, ಚುನಾವಣೆ ಸಮಯದಲ್ಲಿ ಆಗಿರುವ ಅಕ್ರಮಗಳ ಬಗ್ಗೆ ದಾಖಲೆಗಳ ಸಮೇತ ಆಯೋಗಕ್ಕೆ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡುತ್ತೇವೆ ಎಂದು ತಿಳಿಸಿದರು.
ಆಯೋಗಕ್ಕೆ ಯಾವ ದಾಖಲೆಗಳನ್ನು ನೀಡುತ್ತೀರಿ ಎಂದು ಕೇಳಿದಾಗ, ಈ ವಿಚಾರವನ್ನು ನಾನು ಬಹಿರಂಗಪಡಿಸುವುದಿಲ್ಲ. ಇದು ರಾಷ್ಟ್ರೀಯ ವಿಚಾರ ಆಗಿರುವ ಹಿನ್ನೆಲೆಯಲ್ಲಿ ನಮ್ಮ ನಾಯಕರು ಮಾಧ್ಯಮಗೋಷ್ಠಿ ನಡೆಸಿ ಮಾಹಿತಿ ನೀಡಲಿದ್ದಾರೆ ಎಂದರು.
ಸಭೆಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯ್ ಸೊರಕೆ, ಸಚಿವರಾದ ಎಚ್ ಕೆ ಪಾಟೀಲ್, ಕೆ ಜೆ ಜಾರ್ಜ್, ಕೆ ಎಚ್ ಮುನಿಯಪ್ಪ, ದಿನೇಶ್ ಗುಂಡೂರಾವ್, ರಾಮಲಿಂಗರೆಡ್ಡಿ, ಕೃಷ್ಣ ಬೈರೇಗೌಡ, ಡಾ ಶರಣ್ ಪ್ರಕಾಶ್ ಪಾಟೀಲ್, ವೆಂಕಟೇಶ್, ಬೋಸರಾಜ್, ಡಾ ಎಂ ಸಿ ಸುಧಾಕರ್, ಜಮೀರ್ ಅಹಮದ್ ಖಾನ್, ಬೈರತಿ ಸುರೇಶ್, ರಹೀಮ್ ಖಾನ್, ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ ಸಿ ಚಂದ್ರಶೇಖರ್, ದೆಹಲಿಯಲ್ಲಿ ಕರ್ನಾಟಕದ ವಿಶೇಷ ಪ್ರತಿನಿಧಿ ಟಿ ಬಿ ಜಯಚಂದ್ರ ಮತ್ತಿತರರು ಉಪಸ್ಥಿತರಿದ್ದರು.