ಸಕಲೇಶಪುರ: ಮೂರ್ಕಣ್ಣ್ ಗುಡ್ಡ ವ್ಯಾಪ್ತಿಯ ರೈತರನ್ನು ಒಕ್ಕಲೆಬ್ಬಿಸುವ ಅರಣ್ಯ ಇಲಾಖೆಯ ಕ್ರಮ ಖಂಡಿಸಿ ಹೋರಾಟ

Most read

ಸಕಲೇಶಪುರ: ಸ್ಥಳೀಯ ಅರಣ್ಯ ಇಲಾಖೆ ಮೂರ್ಕಣ್ಣ್ ಗುಡ್ಡ ವ್ಯಾಪ್ತಿಯ ನಿವಾಸಿಗಳ ಮೇಲೆ ದೌರ್ಜನ್ಯ ನಡೆಸುತ್ತಿದೆ ಎಂದು ಮಾಜಿ ಶಾಸಕ ಎಚ್.ಎಂ ವಿಶ್ವನಾಥ್ ಆರೋಪಿಸಿದ್ದಾರೆ.

ಇಂದು ಅವರು ತಾಲೂಕಿನ ಅಗನಿ ಗ್ರಾಮದಲ್ಲಿ ಸೆ. 4 ರ ಸಮಸ್ಯೆ ಎದುರಿಸುತ್ತಿರುವ ಮೂರ್ಕಣ್ಣ್ ಗುಡ್ಡ ವ್ಯಾಪ್ತಿಯ 8 ಗ್ರಾಮಗಳ ಸಂತೃಸ್ತರು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.

1920 ರಲ್ಲಿ ಅಂದಿನ ಮೈಸೂರು ಸರ್ಕಾರ 8 ಗ್ರಾಮಗಳ 7938 ಎಕರೆಯನ್ನು ಅಭಯಾರಣ್ಯ ಮಾಡುವ ನಿಟ್ಟಿನಲ್ಲಿ ಸೇಕ್ಷನ್ 4 ನ್ನು ಜಾರಿಗೊಳಿಸಿತ್ತು. ಸರ್ಕಾರದ ಈ ನಡೆಯನ್ನು ವಿರೋಧಿಸಿ ಸ್ಥಳೀಯರು ಸರ್ಕಾರಕ್ಕೆ ಮನವಿ ಸಲ್ಲಿಸಿದ ಹಿನ್ನಲೆಯಲ್ಲಿ 1924 ರಲ್ಲಿ ಈ ವ್ಯಾಪ್ತಿಯನ್ನು ಸೇಕ್ಷನ್ 4 ರಿಂದ ಕೈಬಿಟ್ಟಿದೆ. ಆದರೆ ಶತಮಾನ ಕಳೆದ ನಂತರ ಈ ಯೋಜನೆಗೆ ಮರುಜೀವ ನೀಡಿರುವ ಅರಣ್ಯ ಇಲಾಖೆ ಈ ಭಾಗವನ್ನು ಅಭಯಾರಣ್ಯ ಎಂದು ಘೋಷಿಸುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದೆ. ಅರಣ್ಯ ಇಲಾಖೆಯ ಈ ನಡೆ ತಪ್ಪು ಎಂದರು.

 ಈ ಭಾಗದ ರೈತರಿಗೆ ಅರಣ್ಯ ಇಲಾಖೆ ಮಾನಸಿಕ ಹಿಂಸೆ ನೀಡುತ್ತಿದ್ದು ತೋಟ ಮಾಡುವಂತಿಲ್ಲ, ರಸ್ತೆ ನಿರ್ಮಿಸುವಂತಿಲ್ಲ, ಮನೆ ಕಟ್ಟುವಂತಿಲ್ಲ ಎಂಬ ಕಟ್ಟುಪಾಡುಗಳನ್ನು ವಿಧಿಸಲಾಗಿದೆ. ಈ ಭಾಗದ 8 ಗ್ರಾಮಗಳ ವ್ಯಾಪ್ತಿಯಲ್ಲಿ 1920 ರಿಂದಲೂ ಆಯಾ ಕಾಲದ ಸರ್ಕಾರಗಳು ಹಂತಹಂತವಾಗಿ ರೈತರಿಗೆ ಭೂಮಿ ಮಂಜೂರು ಮಾಡಿವೆ. ಅತಿಮುಖ್ಯವಾಗಿ ಮೂರ್ಕಣ್ಣ್ ಗುಡ್ಡ ವ್ಯಾಪ್ತಿಯಲ್ಲೇ ಅತಿಮುಖ್ಯ ಯೋಜನೆಯಾದ ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆ ಜಾರಿಗೊಂಡಿದೆ. ಇಂತಹ ಹತ್ತು ಹಲವು ಯೋಜನೆಗಳು ಕಳೆದ ಶತಮಾನದಲ್ಲಿ ಈ ಭಾಗದಲ್ಲಿ ಜಾರಿಗೊಂಡಿವೆ ಎಂದು ವಿವರಿಸಿದರು.

ಈ ಭಾಗದಲ್ಲಿ ಹಲವು ಬೃಹತ್ ಕಂಪನಿಗಳು ನೂರಾರು ಎಕರೆ ಒತ್ತುವರಿ ಮಾಡಿಕೊಂಡಿದ್ದಾರೆ. ಆದರೆ ಇವರ ತಂಟೆಗೆ ಹೋಗದ ಅರಣ್ಯ ಇಲಾಖೆ ಅಧಿಕಾರಿಗಳು ಸಣ್ಣ, ಮದ್ಯಮ ಗಾತ್ರದ ರೈತರ ಜಮೀನು ವಶಪಡಿಸಿಕೊಳ್ಳು ಮುಂದಾಗಿದೆ. ಕೂಡಲೇ ಅರಣ್ಯ ಇಲಾಖೆ ಸಂಬಂದಿತ ಇಲಾಖೆಗಳೊಂದಿಗೆ ಚರ್ಚೆ ನಡೆಸಬೇಕು  ಎಂದು ಆಗ್ರಹಪಡಿಸಿದರು.

ಅಭಯಾರಣ್ಯ ಎಂದು ಘೋಷಿಸುವ ಮುನ್ನ ಸೆ.1 ರಿಂದ ಸೆ. 17 ರವರಗೆ ಹಲವು ನಿಯಮಗಳನ್ನು ಜಾರಿಗೊಳಿಸ ಬೇಕು ಆದರೆ, ಈ ನಿಯಮಗಳು ಪಾಲನೆ ಮಾಡಿಲ್ಲ. ಹತ್ತಾರು ತಲೆಮಾರುಗಳು ಕಳೆದಿರುವ ಸ್ಥಳೀಯರನ್ನು ಇಲ್ಲಿಂದ ಒಕ್ಕಲೆಬ್ಬಿಸಲು ವ್ಯವಸ್ಥಿತ ಪ್ರಯತ್ನಗಳು ನಡೆದಿವೆ. ಯಾವುದೆ ಕಾರಣಕ್ಕೂ ಇಲ್ಲಿನ ಭೂಮಿಯನ್ನು ಅರಣ್ಯ ಇಲಾಖೆಗೆ ಬಿಟ್ಟುಕೊಡುವ ಪ್ರಶ್ನೆಯೆ ಇಲ್ಲ ರೈತರಿಗೆ ಕಿರುಕುಳ ನೀಡುವುದನ್ನು ಮುಂದುವರಿಸಿದರೆ , ಸಂತೃಸ್ತರ ಪರವಾಗಿ ಉಗ್ರ ಹೋರಾಟ ನಡೆಸಲಿದ್ದೇವೆ ಎಂದು ಎಚ್ಚರಿಕೆ ನೀಡಿದರು.

ಅಗನಿ ಗ್ರಾಮದಿಂದ ಜಾಥ ಮೂಲಕ ಸಕಲೇಶಪುರಕ್ಕೆ ಆಗಮಿಸಿದ ಪ್ರತಿಭಟನಕಾರರು ಶಾಸಕ ಸೀಮೆಂಟ್ ಮಂಜು ಹಾಗೂ ತಹಸೀಲ್ದಾರ್ ಸುಪ್ರೀತಾ ಅವರಿಗೆ ಮನವಿ ಸಲ್ಲಿಸಿದರು. ಈ ವೇಳೆ ಮಾತನಾಡಿದ ಶಾಸಕ ಸೀಮೆಂಟ್ ಮಂಜು, ಮೂರ್ಕಣ್ಣ್ ಗುಡ್ಡವ್ಯಾಪ್ತಿಯನ್ನು ಅಭಯಾರಣ್ಯ ಮಾಡುವ ನಿಟ್ಟಿನಲ್ಲಿ ನಿಯಮಬಾಹಿರವಾಗಿ ಸ್ಥಳೀಯರ ಮೇಲೆ ಅರಣ್ಯ ಇಲಾಖೆ ದೌರ್ಜನ್ಯ ಎಸೆಗುತ್ತಿರುವುದು ಅತ್ಯಂತ ಬೇಸರದ ವಿಚಾರ. ಕಳೆದ ಕೆಲವು ದಿನಗಳ ಹಿಂದೆ ಸಂತೃಸ್ತರ ಸಭೆ ನಡೆಸಿ ಆಹವಾಲುಗಳನ್ನು ಕೇಳಲಾಗಿದೆ. ಸಂತೃಸ್ತರ ಪರವಾಗಿ ಯಾವುದೇ ಹೋರಾಟಕ್ಕೆ ನಾನು ಸಿದ್ದನಿದ್ದೇನೆ. ಈ ಬಗ್ಗೆ ಅಧಿವೇಶನದಲ್ಲೂ ಪ್ರಸ್ತಾಪಿಸಲಿದ್ದೇನೆ. ಯಾವುದೇ ಕಾರಣಕ್ಕೂ ಈ ಭಾಗದ ರೈತರು ಎದೆಗುಂದುವ ಅಗತ್ಯವಿಲ್ಲ ಎಂದರು.

ಹೋರಾಟಗಾರರಾದ ಪೂರ್ಣೇಶ್ ಹಟ್ಟಿಬೆಟ್ಟ, ಸ್ಟೋನ್‌ ವ್ಯಾಲಿ ಸುಬಾಷ್, ಓಂಕುಮಾರ್, ಮಹೇಶ್, ಅರವೀಂದ್, ಪೂರ್ಣ, ಜಯಶ್ರೀ ಪ್ರತಿಭಟನೆಯ ನೇತೃತ್ವವವನ್ನು ವಹಿಸಿದ್ದರು.

6 ಎಸ್‌ಕೆಪಿಪಿ 1 ಅಗನಿ ಗ್ರಾಮದಲ್ಲಿ ಮೂರ್ಕಣ್ಣ್ ಗುಡ್ಡ ವ್ಯಾಪ್ತಿಯನ್ನು ಅಭಯಾರಣ್ಯ ಎಂದು ಘೋಷಿಸಲು ಹೋರಟಿರುವ ಅರಣ್ಯ ಇಲಾಖೆಯ ನಡೆಯನ್ನು ಖಂಡಿಸಿ ಪ್ರತಿಭಟನೆ ನಡೆಸಲಾಯಿತು.

More articles

Latest article