ಸಾರಿಗೆ ನೌಕರರ ಮುಷ್ಕರಕ್ಕೆ ನಾಳೆಯವರೆಗೆ ತಡೆ: ಗುರುವಾರ ಹೈಕೋರ್ಟ್‌ ನಲ್ಲಿ ವಿಚಾರಣೆ

Most read

ಬೆಂಗಳೂರು: ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮಂಗಳವಾರ ಆರಂಭವಾಗಿದ್ದ ಸಾರಿಗೆ ನಿಗಮಗಳ ನೌಕರರ ಮುಷ್ಕರಕ್ಕೆ ನಾಳೆಯವರೆಗೆ ತಡೆ ಬಿದ್ದಿದೆ.

ಮಂಗಳವಾರ ಈ ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್‌ ‘ಮುಷ್ಕರ ನಡೆಸಿದರೆ ಬಂಧಿಸಿ’ ಎಂದು ಸರ್ಕಾರ ಆದೇಶಿಸಿತ್ತು. ಆ.7, ಗುರುವಾರ ಮತ್ತೆ ಈ ಪ್ರಕರಣ ನ್ಯಾಯಾಲಯದ ಮುಂದೆ ಬರಲಿದ್ದು, ಅದುವರೆಗೆ ಮುಷ್ಕರ ನಡೆಸದಿರಲು ನೌಕರರ ಸಂಘಟನೆಗಳು ತೀರ್ಮಾನಿಸಿವೆ.

ವೇತನ ಪರಿಷ್ಕರಣೆ, 38 ತಿಂಗಳ ಹೆಚ್ಚುವರಿ ವೇತನ ಬಾಕಿ ಪಾವತಿ ಸೇರಿದಂತೆ ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕರ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ನಿನ್ನೆಯಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿತ್ತು. ಈ ಸಂಬಂಧ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆ ನಡೆಸಿದ್ದ ಹೈಕೋರ್ಟ್‌ನ ವಿಭಾಗೀಯ ಪೀಠ, ಒಂದು ದಿನ ತಡೆ ನೀಡಿ ಆದೇಶಿಸಿತ್ತು. ಹಾಗಿದ್ದರೂ ಕೆಲವು ನಿಗಮಗಳ ನೌಕರರು ಮುಷ್ಕರ ಮುಂದುವರಿಸಿದ್ದರು. ಇದರರಿಂದ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸಬೇಕಾಗಿ ಬಂತು. ಹೀಗಾಗಿ, ಮಂಗಳವಾರ ಮುಷ್ಕರ ಆರಂಭವಾದ ಮಧ್ಯಾಹ್ನದ ಹೊತ್ತಿಗೆ ಹೈಕೋರ್ಟ್‌ ಮುಷಕ್ರ ನಿರತರನ್ನು ತರಾಟೆಗೆ ತೆಗೆದುಕೊಂಡು ಚಾಟಿ ಬೀಸಿತು. ಕೂಡಲೇ ನೌಕರರು ಕೆಲಸ ಆರಂಭಿಸಿದರು. ನಿನ್ನೆ ರಾತ್ರಿ ವೇಳೆಗೆ ವಿವಿಧ ನಿಗಮಗಳ ಶೇಕಡ 80.ರಷ್ಟು ಬಸ್‌ಗಳು ರಸ್ತೆಗಿಳಿದವು.

ಒಟ್ಟಾರೆ ರಾಜ್ಯಾದ್ಯಂತ ಶೇ 40ರಷ್ಟು ಬಸ್‌ ಸೇವೆ ಸ್ಥಗಿತಗೊಂಡಿದ್ದರೆ ಶೇ 60ರಷ್ಟು ಬಸ್‌ಗಳು ಸಂಚರಿಸಿದವು. ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ, ಮಧ್ಯ ಕರ್ನಾಟಕ, ಮೈಸೂರು ಹಾಗೂ ಬೆಂಗಳೂರು ಭಾಗದಲ್ಲಿ ಅಂತರ ಜಿಲ್ಲಾ ಪ್ರಯಾಣದ ಬಸ್‌ಗಳ ಸಂಚಾರ ಬಹುತೇಕ ಸ್ಥಗಿತಗೊಂಡಿತ್ತು. ಆದರೆ, ಆಯಾ ಜಿಲ್ಲೆಗಳ ಒಳಗೆ ಬಸ್‌ಗಳ ಸಂಚಾರ ಸಹಜವಾಗಿತ್ತು. ಕಲಬುರಗಿ, ದಾವಣಗೆರೆ ಸೇರಿದಂತೆ ಕೆಲ ಜಿಲ್ಲೆಗಳಲ್ಲಿ ಬಸ್‌ ಸಂಚಾರ ಬಹುತೇಕ ಸ್ಥಗಿತಗೊಂಡಿತ್ತು. ಉಳಿದ ಜಿಲ್ಲೆಗಳಲ್ಲಿ ಭಾಗಶಃ, ಬಸ್‌ ಸಂಚಾರ ಕಂಡು ಬಂದಿತು.

ಕೊಪ್ಪಳ ವಿಶ್ವವಿದ್ಯಾಲಯ, ತುಮಕೂರು ವಿಶ್ವವಿದ್ಯಾಲಯಗಳಲ್ಲಿ ಮಂಗಳವಾರ ನಡೆಯಬೇಕಿದ್ದ ಸ್ನಾತಕ ಹಾಗೂ ಸ್ನಾತಕೋತ್ತರ ಪರೀಕ್ಷೆಗಳನ್ನು ಸಂಚಾರ ವ್ಯತ್ಯಯದ ಕಾರಣ ಮುಂದೂಡಲಾಗಿತ್ತು.

More articles

Latest article