ಬೆಂಗಳೂರು: ಅಲ್ಪಸಂಖ್ಯಾತ ಮತ್ತು ಬಹುಸಂಖ್ಯಾತ ಸಮುದಾಯಗಳ ನಡುವಿನ ಸಾಮರಸ್ಯವನ್ನು ಕದಡುವ ವಿಭಜಕ ರಾಜಕಾರಣ ವಿಜೃಂಭಿಸುತ್ತಿರುವ ಇಂದಿನ ದಿನಗಳಲ್ಲಿ ಭಾಷೆಯ ಮೂಲಕವೇ ಸಂವಹನ ಗಟ್ಟಿಯಾಗಬೇಕೆನ್ನುವ ಖಚಿತ ನಿಲುವಿನಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೆ ಕನ್ನಡವನ್ನು ಕಲಿಸುವ ಪ್ರಯತ್ನಕ್ಕೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮುಂದಾಗಿದೆ ಎಂದು ಡಾ. ಪುರುಷೋತ್ತಮ ಬಿಳಿಮಲೆ ಹೇಳಿದ್ದಾರೆ.
ಮದರಸಾಗಳಲ್ಲಿ ಬೋಧಿಸುತ್ತಿರುವ ಸುಮಾರು 180 ಶಿಕ್ಷಕರುಗಳಿಗೆ ಕನ್ನಡ ಕಲಿಕಾ ಅಭಿಯಾನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಭಾಷೆಯ ಮೂಲಕವಾಗಿ ಯಾವುದೇ ಸಮುದಾಯಗಳು ಅವಮಾನಕ್ಕೊಳಗಾಗಬಾರದು. ರಾಜ್ಯ ಭಾಷೆಯನ್ನು ಕಲಿತ ಯಾವುದೇ ಸಮುದಾಯ ತಾನು ವಾಸಿಸುವ ನಾಡಿನಲ್ಲಿ ಸಾಮರಸ್ಯದಿಂದ ಜೀವಿಸುವ ತನ್ನದೇ ಆದ ಚೈತನ್ಯವನ್ನು ಪಡೆಯುತ್ತದೆ. ಹಾಗಾಗಿ ಅಲ್ಪಸಂಖ್ಯಾತರು ಕನ್ನಡವನ್ನು ಕಲಿಯುವುದು ಬಹಳ ಮುಖ್ಯವಾಗುತ್ತದೆ ಎಂದರು.
ಭಾಷೆ ಮೂಲತಃ ಧಾರ್ಮಿಕವಲ್ಲ. ಅದು ಯಾವತ್ತಿಗೂ ಜಾತ್ಯಾತೀತವೇ ಎಂದ ಬಿಳಿಮಲೆ, ಅಕ್ಬರನ ತಾಯಿ ಹಮೀದ ರಾಮಾಯಣವನ್ನು ಪರ್ಷಿಯನ್ ಭಾಷೆಗೆ ಅನುವಾದಿಸಿದ ಇತಿಹಾಸವನ್ನು ನೆನೆದರು.
ಭಾಷಾ ಸಾಮರಸ್ಯದ ಜೊತೆಗೆ ಸಾಂಸ್ಕೃತಿಕ ಸಾಮರಸ್ಯ ಏರ್ಪಡುವುದು ಬೇರೆಲ್ಲಾ ವಿಷಯಗಳಿಗಿಂತ ದೊಡ್ಡದು ಎಂದ ಅವರು, ಕನ್ನಡ ಅಭಿವೃದ್ಧಿ ಪ್ರಾಧಿಕಾರ ವಿದ್ಯಾರ್ಥಿ ಸಮೂಹದ ಉಪಯೋಗಕ್ಕಾಗಿ ಕನ್ನಡ ಭಾಷಾ ಸಾಮರಸ್ಯದ ನೆಲೆಗಳು ಎನ್ನುವ ಶೀರ್ಷಿಕೆಯಡಿಯಲ್ಲಿ ನೂರು ಪುಸ್ತಕಗಳನ್ನು ಹೊರ ತರುವ ಕೆಲಸ ಮಾಡುತ್ತಿದೆ. ಅತಿ ಶೀಘ್ರದಲ್ಲಿ ಇವು ಲೋಕಾರ್ಪಣೆಗೊಳ್ಳಲಿವೆ ಎಂಬ ಮಾಹಿತಿಯನ್ನು ನೀಡಿದರು.
ಉರ್ದು ಅಕಾಡೆಮಿಯನ್ನು ಕನ್ನಡ ಸಂಸ್ಕೃತಿ ಇಲಾಖೆಯಡಿಯಲ್ಲಿ ತನ್ನಿ: ಉರ್ದು ಅಕಾಡೆಮಿಗೆ ಲಭ್ಯವಿರುವ ಸ್ವಾಯತ್ತತೆಯನ್ನು ಗೌಣವಾಗಿಸದೆ ಅದನ್ನು ಮುಖ್ಯವಾಹಿನಿಯಲ್ಲಿ ನಿರಂತರವಾಗಿ ಉಳಿಸುವ ಉದ್ದೇಶದಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಡಿಯಲ್ಲಿ ತರಬೇಕೆಂದು ಬಿಳಿಮಲೆ ಅಲ್ಪಸಂಖ್ಯಾತ ಕಲ್ಯಾಣ ಸಚಿವರಾದ ಜಮೀರ್ ಅಹಮದ್ ಅವರನ್ನು ಆಗ್ರಹಿಸಿದರು.
ಬೇರೆಲ್ಲಾ ಭಾಷೆಗಳ ಅಕಾಡೆಮಿಗಳು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯೊಂದಿಗೆ ಗುರುತಿಸಿಕೊಂಡು ತಮ್ಮ ಕಾರ್ಯಕ್ರಮಗಳ ಮೂಲಕ ನಾಗರಿಕರ ಗಮನ ನಿರಂತರವಾಗಿ ಸೆಳೆಯುತ್ತಿದ್ದು, ಉರ್ದು ಅಕಾಡೆಮಿಯ ಅನುಪಸ್ಥಿತಿ ತಮ್ಮನ್ನು ಪದೇ ಪದೇ ಕಾಡುತ್ತದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರಂತರವಾಗಿ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವ ಸಂದರ್ಭದಲ್ಲಿ ಈ ಇಲಾಖೆಯ ಕಾರ್ಯಕ್ರಮಗಳಲ್ಲಿ ಉರ್ದು ಅಕಾಡೆಮಿಯೂ ಭಾಗವಹಿಸಿದಲ್ಲಿ ಹೆಚ್ಚಿನ ಜನಪ್ರಿಯತೆ ದೊರೆಯುವ ಸಾಧ್ಯತೆ ಇರುತ್ತದೆ. ಈ ನಿಟ್ಟಿನಲ್ಲಿ ತಮ್ಮ ಮನವಿಯನ್ನು ಪರಿಗಣಿಸಬೇಕೆಂದರು.
ಇದಕ್ಕೆ ವೇದಿಕೆಯಲ್ಲಿ ಸ್ಪಂದಿಸಿದ ಸಚಿವ ಜಮೀರ್ ಅಹಮದ್ ಅವರು, ಈ ಕುರಿತಂತೆ ಖಂಡಿತವಾಗಿಯೂ ಕ್ರಮ ವಹಿಸುತ್ತೇನೆ ಎನ್ನುವ ಭರವಸೆಯನ್ನು ನೀಡಿದರು.
ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಮುಸಲ್ಮಾನರ ಕೊಡುಗೆ ದೊಡ್ಡದು: ಸ್ವಾತಂತ್ರ್ಯ ಪೂರ್ವದಲ್ಲಿ ಮುಸಲ್ಮಾನರು ಕೇವಲ ಆಂಗ್ಲರನ್ನು ವಿರೋಧಿಸಲಿಲ್ಲ. ಬದಲಿಗೆ ಆಂಗ್ಲ ಭಾಷೆಯನ್ನೂ ವಿರೋಧಿಸಿ ದೇಶೀಯತೆಗೆ ಬೆನ್ನುಲುಬಾಗಿ ನಿಂತರು ಎಂದ ಬಿಳಿಮಲೆ, 1947ರಲ್ಲಿ ಬ್ರಿಟಿಷರು ಭಾರತವನ್ನು ಬಿಟ್ಟು ಹೋದಾಗ ಆಂಗ್ಲ ಭಾಷೆಯನ್ನು ಕಲಿಯಲಿಲ್ಲವೆನ್ನುವ ಹತಾಶೆಗೆ ಯಾವುದೇ ಮುಸ್ಲಿಮರು ಒಳಗಾಗಲಿಲ್ಲ. ಬದಲಿಗೆ ಅಲಿಘಡ್ ಮುಸ್ಲಿಂ ವಿಶ್ವವಿದ್ಯಾಲಯದಂತಹ ಸಮರ್ಥ ಸಂಸ್ಥೆಯನ್ನು ನಿರ್ಮಿಸಿ ದೇಶೀಯತೆಯನ್ನು ಪೋಷಿಸಿದರು. ಆದರೆ ಹಿಂದಿಯ ಪ್ರಾಬಲ್ಯದಿಂದಾಗಿ ಉರ್ದು ಕೂಡಾ ಕಳೆಗುಂದಿತು ಎಂದರು.
ಅಲ್ಪಸಂಖ್ಯಾತ ಸಮುದಾಯ ಕನ್ನಡವನ್ನು ನಿರೀಕ್ಷಿತಮಟ್ಟದಲ್ಲಿ ಕಲಿಯದೆ ಇರುವುದಕ್ಕೂ ವಿಭಜಕ ರಾಜಕಾರಣವೇ ಕಾರಣವಾಗಿದ್ದು, ಸಾಮರಸ್ಯದ ದೃಷ್ಠಿಯಿಂದ ಎಲ್ಲವನ್ನು ಮರೆತು ರಾಜ್ಯಭಾಷೆಯನ್ನು ಕಲಿಯಲು ಮುಂದಾಗಬೇಕಿದೆ ಎಂದ ಬಿಳಿಮಲೆ, ಮುಂದಿನ ದಿನಗಳಲ್ಲಿ ಕ್ರೈಸ್ತ ಸಮುದಾಯವು ಸೇರಿದಂತೆ ಎಲ್ಲ ಅಲ್ಪಸಂಖ್ಯಾತ ಸಮುದಾಯಗಳಿಗೆ ಕನ್ನಡ ಕಲಿಸುವ ಪ್ರಯತ್ನವನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಜಾರಿಯಲ್ಲಿಡಲಿದೆ ಎಂದರು.
ಎರಡು ಸಾವಿರ ಮದರಸಾಗಳಲ್ಲಿ ಕನ್ನಡ ಕಲಿಕೆ: ಮುಂದಿನ ದಿನಗಳಲ್ಲಿ ರಾಜ್ಯದಲ್ಲಿರುವ ಎಲ್ಲ ಎರಡು ಸಾವಿರ ಮದರಸಾಗಳಲ್ಲಿ ಕನ್ನಡ ಕಲಿಕೆಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮುಂದಾಗುವುದಿದ್ದು, ಇದಕ್ಕೆ ಸಂಪೂರ್ಣ ಸಹಕಾರವನ್ನು ಅಲ್ಪಸಂಖ್ಯಾತರ ಆಯೋಗವು ನೀಡಲಿದೆ ಎಂದು ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ಯು. ನಿಸಾರ್ ಅಹಮದ್ ಹೇಳಿದರು. ಅಲ್ಲದೇ, ಈ ಕುರಿತಾದ ಪಠ್ಯಕ್ರಮವನ್ನು ಅಲ್ಪಸಂಖ್ಯಾತರ ಆಯೋಗವು ಪ್ರಾಧಿಕಾರದ ಸಲಹೆಯಂತೆ ಮುದ್ರಿಸಲು ಕ್ರಮವಹಿಸಲಿದೆ ಎಂದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಸಚಿವ ಜಮೀರ್ ಅಹಮದ್ ಅವರು, ಮಸೀದಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮೌಲ್ವಿಗಳಿಗೂ ಕನ್ನಡ ಬೋಧನೆಯನ್ನು ಮಾಡಲಾಗುವುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಯು. ನಿಸಾರ್ ಅಹಮದ್, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ. ಸಂತೋಷ ಹಾನಗಲ್ಲ ಹಾಗೂ ಅಲ್ಪಸಂಖ್ಯಾತ ಆಯೋಗದ ಕಾರ್ಯದರ್ಶಿ ಡಾ. ಮಾಜುದ್ದೀನ್ ಖಾನ್ ಸೇರಿದಂತೆ ಮತ್ತಿತರರು ಹಾಜರಿದ್ದರು.