ಬೆಂಗಳೂರು: ಪರಿಶಿಷ್ಟ ಜಾತಿಯಲ್ಲಿ (ಎಸ್ ಸಿ) ಒಳಮೀಸಲಾತಿ ಕಲ್ಪಿಸುವ ಸಂಬಂಧ ರಚಿಸಲಾಗಿದ್ದ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ನೇತೃತ್ವದ ಏಕಸದಸ್ಯ ಆಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಂತಿಮ ವರದಿ ಸಲ್ಲಿಸಿದೆ.
ನ್ಯಾ. ನಾಗಮೋಹನ್ ದಾಸ್ ಅವರು ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ವರದಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಹಲವು ಸಚಿವರು ಉಪಸ್ಥಿತರಿದ್ದರು.
ನಂತರ ಮಾತನಾಡಿದ ನ್ಯಾಯಮೂರ್ತಿ ನಾಗಮೋಹನ್, ಆಯೋಗದ ವರದಿಯು ಪರಿಶಿಷ್ಟ ಜಾತಿಗೆ ಒಳ ಮೀಸಲಾತಿ ಒದಗಿಸಬೇಕೆಂದು ಶಿಫಾರಸು ಮಾಡಿದೆ ಎಂದು ತಿಳಿಸಿದರು.
ಸಮೀಕ್ಷೆಯು 1,766 ಪುಟಗಳನ್ನು ಹೊಂದಿದ್ದು, ಸಂಪೂರ್ಣ ಡೇಟಾವನ್ನು ವಿಶ್ಲೇಷಿಸಿದ ನಂತರ, ಆಯೋಗ ವರದಿಯನ್ನು ಸಿದ್ದಪಡಿಸಿದೆ. ಸಮೀಕ್ಷೆಯನ್ನು ಮೊಬೈಲ್ ಅಪ್ಲಿಕೇಶನ್ ಮೂಲಕ ಮಾಡಲಾಗಿದೆ. ಬಹಳ ದಿನಗಳಿಂದ, ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ಬೇಕು ಎನ್ನುವುದೂ ನನ್ನ ಬಯಕೆಯಾಗಿತ್ತು. ಒಳ ಮೀಸಲಾತಿಯನ್ನು ಒದಗಿಸಬೇಕೆಂದು ನಾನು ಸರ್ಕಾರಕ್ಕೆ ಶಿಫಾರಸು ಮಾಡಿದ್ದೇನೆ ಎಂದು ನ್ಯಾಯಮೂರ್ತಿ ದಾಸ್ ತಿಳಿಸಿದರು.
ವರದಿ ಕುರಿತು ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ ನಾಗಮೋಹನ್‌ದಾಸ್ ಆಯೋಗ ಒಳಮೀಸಲಾತಿ ಸಂಬಂಧ ವರದಿ ನೀಡಿದೆ. ಅದರಲ್ಲಿ ಏನಿದೆ ಎಂದು ತಿಳಿದಿಲ್ಲ. ಆಗಸ್ಟ್ 7ರಂದು ಸಚಿವ ಸಂಪುಟ ಸಭೆ ನಡೆಯಲಿದು, ಅಲ್ಲಿ ವರದಿಯನ್ನು ಮಂಡಿಸಿ ಚರ್ಚೆ ಮಾಡುತ್ತೇವೆ ಎಂದು ಹೇಳಿದರು.
ಅಕ್ಟೋಬರ್ 2024 ರಲ್ಲಿ, ಕರ್ನಾಟಕ ಸರ್ಕಾರವು ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲಾತಿ ಜಾರಿಗೊಳಿಸುವ ಬಗ್ಗೆ ಸಲಹೆ ನೀಡಲು ಆಯೋಗವನ್ನು ರಚಿಸಿತ್ತು.
ವರದಿಯ ಮುಖ್ಯಾಂಶಗಳು:
ಆಯೋಗವು ಪರಿಶಿಷ್ಟ ಜಾತಿಗಳನ್ನು ಐದು ಗುಂಪುಗಳಾಗಿ ವರ್ಗೀಕರಿಸಿದೆ. ಗುಂಪು 1ರಲ್ಲಿ ಅತೀ ಹಿಂದುಳಿದ ಜಾತಿಗಳನ್ನು ಗುರುತಿಸಿದೆ. ಈ ಗುಂಪಿನಲ್ಲಿರುವ ಜಾತಿಗಳ ಒಟ್ಟು ಜನಸಂಖ್ಯೆ ಸುಮಾರು 5 ಲಕ್ಷದಷ್ಟಿದ್ದು, ಈ ಗುಂಪಿಗೆ ಶೇ. 1ರಷ್ಟು ಮೀಸಲಾತಿ ಹಂಚಿಕೆ ಮಾಡಿದೆ. ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಔದ್ಯೋಗಿಕವಾಗಿ ತೀರಾ ವಂಚಿತ ಜಾತಿಗಳಿಗೆ ಅವಕಾಶ ಕಲ್ಪಿಸುವ ಉದ್ದೇಶದಿಂದ ಈ ಜಾತಿಗಳನ್ನು ಗುಂಪು 1ರಲ್ಲಿ ಸೇರಿಸಲಾಗಿದೆ.
ಗುಂಪು 2ರಲ್ಲಿ ಎಡಗೈ ಜಾತಿಗಳಿದ್ದು ಅದಕ್ಕೆ ಶೇ 6, ಗುಂಪು 3ರಲ್ಲಿ ಬಲಗೈ ಜಾತಿಗಳಿದ್ದು ಅದಕ್ಕೆ ಶೇ 5, ಗುಂಪು 4 ರಲ್ಲಿ ಬಂಜಾರ, ಬೋವಿ, ಕೊರಚ, ಕೊರಮ ಜಾತಿಗಳಿದ್ದು (ಅಸ್ಪೃಶ್ಯರಲ್ಲದವರು) ಈ ಗುಂಪಿಗೆ ಶೇಕಡಾ 4, ಗುಂಪು 5ರಲ್ಲಿ ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ ಎಂದು ನಮೂದಿಸಿದವರಿದ್ದು ಈ ಗುಂಪಿಗೆ ಶೇ. 1ರಷ್ಟು ಮೀಸಲಾತಿಯನ್ನು ಆಯೋಗವು ಹಂಚಿಕೆ ಮಾಡಿದೆ ಎಂದು ತಿಳಿದು ಬಂದಿದೆ.
ಸಮೀಕ್ಷೆಯಲ್ಲಿ ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ ಎಂದು ಗುರುತಿಸಿಕೊಂಡವರು ಸುಮಾರು 5 ಲಕ್ಷದಷ್ಟು ಇದ್ದಾರೆ. ಅವರು ಮೂಲ ಜಾತಿಯನ್ನು ಗುರುತಿಸದ ಕಾರಣ ‘ಪ್ರತ್ಯೇಕ ಗುಂಪು’ ಎಂದು ವರ್ಗೀಕರಿಸಲಾಗಿದೆ.
ಒಳ ಮೀಸಲಾತಿ ವರ್ಗೀಕರಣಕ್ಕೆ ಜಾತಿಗಳ ಶೈಕ್ಷಣಿಕ ಹಿಂದುಳಿದಿರುವಿಕೆ, ಸರ್ಕಾರಿ ಉದ್ಯೋಗದಲ್ಲಿ ಅಗತ್ಯ ಪ್ರಾತಿನಿಧ್ಯದ ಕೊರತೆ, ಸಾಮಾಜಿಕ ಹಿಂದುಳಿದಿರುವಿಕೆಯ ಮಾನದಂಡಗಳನ್ನು ಪರಿಗಣಿಸಬೇಕು ಎಂದು ಸುಪ್ರೀಂ ಕೋರ್ಟ್ ಸೂಚಿಸಿದೆ. ಆ ಮಾನದಂಡಗಳ ಆಧಾರದಲ್ಲಿಯೇ ಮೀಸಲಾತಿಯನ್ನು ಹಂಚಿಕೆ ಮಾಡಲಾಗಿದೆ ಎಂದು ಆಯೋಗದ ಮೂಲಗಳು ತಿಳಿಸಿವೆ.