ಸಾರಿಗೆ ನಿಗಮಗಳ ನೌಕರರ ಮುಷ್ಕರ ಆರಂಭ; ಬಸ್‌ ನಿಲ್ದಾಣಗಳಲ್ಲಿ ಪರದಾಡುತ್ತಿರುವ ಪ್ರಯಾಣಿಕರು

Most read

ಬೆಂಗಳೂರು: ವೇತನ ಪರಿಷ್ಕರಣೆ, ಹೆಚ್ಚುವರಿ ವೇತನ ಬಾಕಿ ಬಿಡುಗಡೆ ಸೇರಿದಂತೆ ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕೆಎಸ್‌ಆರ್‌ಟಿಸಿ ನೌಕರರು ಇಂದಿನಿಂದ ಮುಷ್ಕರಾರಂಭಿಸಿದ್ದಾರೆ. ರಾಜ್ಯಾದ್ಯಂತ ನಾಲ್ಕು ನಿಗಮಗಳ ಸಾರಿಗೆ ಸಿಬ್ಬಂದಿ ಮುಷ್ಕರ ಆರಂಭವಾಗಿದೆ. ಮೆಜೆಸ್ಟಿಕ್, ಕೆ ಎಸ್‌ ಆರ್‌ ಟಿಸಿ ಬಸ್‌ ನಿಲ್ದಾಣಗಳಲ್ಲಿ ಪ್ರಯಾಣಿಕರು ಪರದಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ನಿಲ್ದಾಣದಲ್ಲಿ ಪೊಲೀಸ್ ಭದ್ರತೆ ಒದಗಿಸಲಾಗಿದೆ.

ಬೆಂಗಳೂರು ಸೇರಿದಂತೆ ರಾಜ್ಯದ ಶಾಲಾ ಕಾಲೇಜುಗಳಿಗೆ ರಜೆ ಇಲ್ಲ. ಮುಷ್ಕರಕ್ಕೆ ಸರ್ಕಾರಿ, ಖಾಸಗಿ, ಅನುದಾನಿತ ಶಾಲೆಗಳ ಬೆಂಬಲ ಇಲ್ಲ. ಕೆಲವು ಖಾಸಗಿ ಶಾಲೆಗಳಿಂದ ಮುಷ್ಕರಕ್ಕೆ ನೈತಿಕ ಬೆಂಬಲ ಮಾತ್ರ ನೀಡಿವೆ. ಮಕ್ಕಳನ್ನು ಶಾಲೆಗಳಿಗೆ ಕಳಿಸುವಂತೆ ಪೋಷಕರಿಗೆ ಶಾಲಾ ಮಂಡಳಿಗಳ ಮನವಿ ಮಾಡಿಕೊಂಡಿವೆ. ಅನೇಕ ವಿಶ್ವವಿದ್ಯಾಲಯಗಳಲ್ಲಿ ಪರೀಕ್ಷೆಗಳನ್ನು ಮುಂದೂಡಲಾಗಿದೆ.

ಸಾರಿಗೆ ಮುಷ್ಕರದಲ್ಲಿ ಭಾಗಿಯಾಗಲು ಕೆಲವು ನೌಕರರಿಗೆ ಭಯ ಹುಟ್ಟಿದೆ. 2021ರಲ್ಲಿ ನಡೆದ  ಪ್ರತಿಭಟನೆ ಸಂದರ್ಭದಲ್ಲಿ ಎಸ್ಮಾ ಜಾರಿಮಾಡಿ ಅಮಾನತು ಮಾಡಲಗಿತ್ತು. ಒಂದು ವೇಳೆ ಅಮಾನತು ಮಾಡಿದರೆ ವರ್ಷಗಳ ಕಾಲ ಕೆಲಸ ಇಲ್ಲದೆ ಇರುವ ಭಯ ಮೂಡಿದೆ.  ಹೀಗಾಗಿ ಮುಷ್ಕರದಲ್ಲಿ ಭಾಗಿಯಾಗಲು ಹಲವರ ಹಿಂದೇಟು ಹಾಕುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಸಾರಿಗೆ ನೌಕರರಿಗೆ ರಜೆ ರದ್ದು ಮಾಡಲಾಗಿದ್ದು ರಜೆಯಲ್ಲಿರುವವರು ಕೂಡಲೇ ಕರ್ತವ್ಯಕ್ಕೆ ಹಾಜರಾಗುವಂತೆ ಮನವಿ ಮಾಡಲಾಗಿದೆ. ಮುಷ್ಕರದಲ್ಲಿ ಭಾಗಿಯಾದರೆ ಶಿಸ್ತು ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಲಾಗಿದೆ.

ಸಿಎಂ ಜತೆಗಿನ ಮಾತುಕತೆ ವಿಫಲ:

ವೇತನ ಪರಿಷ್ಕರಣೆ, ಹೆಚ್ಚುವರಿ ವೇತನ ಬಾಕಿ ಬಿಡುಗಡೆ ಸೇರಿದಂತೆ ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕೆಎಸ್‌ಆರ್‌ಟಿಸಿ ನೌಕರರ ಸಂಘಟನೆಗಳ ಜತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಡೆಸಿದ ಮಾತುಕತೆ ವಿಫಲವಾಗಿದೆ.

ವೇತನ ಪರಿಷ್ಕರಣೆಯನ್ನು 2024ರ ಜನವರಿ ಒಂದಕ್ಕೆ ಅನ್ವಯವಾಗುವಂತೆ ನಡೆಸಬೇಕು. ಹಿಂದಿನ ಪರಿಷ್ಕರಣೆಯ ನಂತರದ 38 ತಿಂಗಳ ಹೆಚ್ಚುವರಿ ವೇತನ ಬಾಕಿ ನೀಡಬೇಕು ಎಂಬ ಎರಡು ಪ್ರಮುಖ ಬೇಡಿಕೆಗಳಲ್ಲಿ ರಾಜಿಯಾಗುವ ಪ್ರಶ್ನೆಯೇ ಇಲ್ಲ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಸಂಘಟನೆಗಳ ಒಕ್ಕೂಟದ ಮುಖಂಡರು ಪಟ್ಟು ಹಿಡಿದರು.

ಸಭೆಯ ನಂತರ ಈ ಕುರಿತು ಸುದ್ದಿಗಾರರಿಗೆ ಮಾಹಿತಿ ನೀಡಿದ ಕೆಎಸ್‌ಆರ್‌ಟಿಸಿ ಸ್ಟಾಫ್‌ ವರ್ಕರ್ಸ್‌ ಫೆಡರೇಷನ್ ಅಧ್ಯಕ್ಷ ಎಚ್‌.ವಿ. ಅನಂತಸುಬ್ಬರಾವ್, ವೇತನ ಪರಿಷ್ಕರಣೆಯ ಬಗ್ಗೆ ಮುಖ್ಯಮಂತ್ರಿ ಒಲವು ತೋರಿಸಲಿಲ್ಲ. ಹಿಂದಿನ ಪರಿಷ್ಕರಣೆಯ ಬಾಕಿಯಲ್ಲಿ 14 ತಿಂಗಳ ಮೊತ್ತವಷ್ಟೇ ನೀಡುವುದಾಗಿ ತಿಳಿಸಿದರು. ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ಒಪ್ಪದ ಕಾರಣ ಮುಷ್ಕರ ನಡೆಸುವ ನಿರ್ಧಾರದಿಂದ ಹಿಂದೆ ಸಿರಿಯುವುದಿಲ್ಲ ಎಂದರು.

ಸಾರಿಗೆ ನಿಗಮಗಳಲ್ಲಿ ಹಿಂದಿನಿಂದಲೂ 4 ವರ್ಷಕ್ಕೊಮ್ಮೆ ವೇತನ ಪರಿಷ್ಕರಣೆ ನಡೆಸಲಾಗುತ್ತಿತ್ತು. ಒಂದು ವೇಳೆ ತಡವಾಗಿ ಪರಿಷ್ಕರಣೆ ನಡೆದರೂ ಹಿಂದಿನ ದಿನಾಂಕದಿಂದಲೇ ಅನ್ವಯವಾಗುತ್ತಿತ್ತು. ಈ ಬಾರಿ ಏಕಾಏಕಿ ಸರ್ಕಾರ ಆ ಪದ್ಧತಿಯನ್ನು ಬದಲಾಯಿಸಲು ಹೊರಟಿರುವುದನ್ನು ಒಪ್ಪಿಕೊಳ್ಳುವುದಿಲ್ಲ. ಹಿಂದಿನ ಪರಿಷ್ಕರಣೆಯ ಹಿಂಬಾಕಿಯನ್ನು ನೀಡಲೇಬೇಕು ಎಂದು ಅವರು ಒತ್ತಾಯಿಸಿದರು.

18 ತಿಂಗಳ ಹಿಂದೆಯೇ ವೇತನ ಹೆಚ್ಚಳಕ್ಕೆ ಬೇಡಿಕೆ ಇಟ್ಟಿದ್ದೆವು. ವೇತನ ಪರಿಷ್ಕರಣೆಗೆ ಸರ್ಕಾರ ಈಗಲೂ ಸಿದ್ಧವಿಲ್ಲ. ಇನ್ನು ಮುಂದೆ ಮಾತುಕತೆಗೆ ಆಹ್ವಾನಿಸಿದರೂ, ಹೋಗದಿರಲು ತೀರ್ಮಾನಿಸಿದ್ದೇವೆ. ನಮ್ಮ ಹಕ್ಕುಗಳ ರಕ್ಷಣೆ ನಮಗೆ ಮುಖ್ಯ ಎಂದು ಮಂಜುನಾಥ್‌ ಹೇಳಿದರು.

ಅಖಿಲ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಮಹಾ ಮಂಡಳಿ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಫೆಡರೇಷನ್‌ (ಸಿಐಟಿಯು), ಕೆಎಸ್‌ಆರ್‌ಟಿಸಿ ಎಸ್‌ಸಿ, ಎಸ್‌ಟಿ ಎಂಪ್ಲಾಯಿಸ್ ಯೂನಿಯನ್‌, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಸಂಘಗಳು ಮುಖಂಡರು ಭಾಗವಹಿಸಿದ್ದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ 2016ರಲ್ಲಿ ನಾನು ಮುಖ್ಯಮಂತ್ರಿಯಾಗಿದ್ದಾಗ ವೇತನ ಪರಿಷ್ಕರಣೆ ಮಾಡಿದ್ದೆ. ಆಗ ಶೇ. 12.5 ಹೆಚ್ಚಳ ಮಾಡಲಾಗಿತ್ತು. ಬಳಿಕ 2020 ರಲ್ಲಿ ಕೋವಿಡ್ ಕಾರಣಕ್ಕೆ ಅಂದಿನ ಸರ್ಕಾರ ವೇತನ ಪರಿಷ್ಕರಣೆ ಮಾಡಿಲ್ಲ. ದಿನಾಂಕ 01-03-23 ರಲ್ಲಿ ಹಿಂದಿನ ಸರ್ಕಾರ ಇದ್ದಾಗ ವೇತನ ಪರಿಷ್ಕರಣೆ ಒಪ್ಪಂದವಾಗಿತ್ತು. ಆಗ ಮೂಲವೇತನ 15 ಶೇಕಡಾ ಪರಿಷ್ಕರಣೆ ಮಾಡಲು ತೀರ್ಮಾನವಾಗಿತ್ತು. ಆಗ ನೀವು ಅದನ್ನು ಒಪ್ಪಿಕೊಂಡಿದ್ದೀರಿ. ವೇತನ ಪರಿಷ್ಕರಣೆ ಕುರಿತಾಗಿ ಶ್ರೀನಿವಾಸ ಮೂರ್ತಿ ಅವರ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ಸಮಿತಿ ದಿನಾಂಕ 01-1-22 ರಿಂದ 28-2-23ರವರೆಗೆ ಬಾಕಿ ವೇತನ ಕೊಡಬಹುದು ಎಂದು ಶಿಫಾರಸು ಮಾಡಿತ್ತು. ಸಾರಿಗೆ ಸಂಘಟನೆಗಳ ಪ್ರತಿನಿಧಿಗಳು ಸಹ ಸಮಿತಿ ಮುಂದೆ ಹಾಜರಾಗಿ ಅಹವಾಲು ಸಲ್ಲಿಸಿದ್ದರು. ಶ್ರೀನಿವಾಸ ಸಮಿತಿಯ ಶಿಫಾರಸ್ಸು ಸರ್ಕಾರ ಒಪ್ಪಿಕೊಂಡಿದೆ. ನೀವು ಸಹ ಸದರಿ ಸಮಿತಿಯ ಶಿಫಾರಸುಗಳನ್ನು ಒಪ್ಪಿಕೊಳ್ಳಬೇಕು ಎಂದರು.

ಸಮಿತಿಯ ಶಿಫಾರಸು ಆಧಾರದಲ್ಲಿ ಈ ಕುರಿತು ದಿನಾಂಕ 01-03-23 ರಿಂದ ಜಾರಿಗೆ ಬರುವಂತೆ ಅಂದಿನ ಸರ್ಕಾರ ಅಧಿಸೂಚನೆ ಸಹ ಹೊರಡಿಸಿತ್ತು. ಆದರೆ ಈಗ 38 ತಿಂಗಳ ಬಾಕಿ ವೇತನ ಪಾವತಿಗೆ ಬೇಡಿಕೆ ಇರಿಸಿರುವುದು ಸಮಂಜಸವಲ್ಲ ನಾವು ಅಧಿಕಾರಕ್ಕೆ ಬಂದಾಗ ಎಲ್ಲಾ ನಿಗಮಗಳಿಗೆ ಒಟ್ಟಾರೆ 4ಸಾವಿರ ಕೋಟಿ ಸಾಲ ಇತ್ತು. 2018ರಲ್ಲಿ ಕೇವಲ ರೂ. 14 ಕೋಟಿ ಮಾತ್ರ ಬಾಕಿಯಿತ್ತು. ಪ್ರಸ್ತುತ ಯಾವ ಸಾರಿಗೆ ನಿಗಮ ಸಹ ಲಾಭದಲ್ಲಿಲ್ಲ. ಸರ್ಕಾರ ಯಾರಿಗೂ ಅನ್ಯಾಯ ಮಾಡುವುದಿಲ್ಲ.  ಎಲ್ಲಾ ನಿಗಮದವರು ಸಹಕರಿಸಬೇಕು ಎಂದು ಕೋರಿದರು.

ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ಮುಖ್ಯಮಂತ್ರಿ ಅವರ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಕೆಎಸ್ಆರ್‌ ಟಿಸಿ ಅಧ್ಯಕ್ಷ ಎಸ್.ಆರ್ ಶ್ರೀನಿವಾಸ್, ಎನ್‌ ಡಬ್ಲ್ಯುಕೆಎಸ್ಆರ್‌ ಟಿಸಿ ಅಧ್ಯಕ್ಷ ರಾಜುಕಾಗೆ, ಅಖಿಲ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಮಹಾ ಮಂಡಳಿ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಫೆಡರೇಷನ್‌ (ಸಿಐಟಿಯು), ಕೆಎಸ್‌ಆರ್‌ಟಿಸಿ ಎಸ್‌ಸಿ, ಎಸ್‌ಟಿ ಎಂಪ್ಲಾಯಿಸ್ ಯೂನಿಯನ್‌, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಸಂಘಗಳು ಮುಖಂಡರು ಭಾಗವಹಿಸಿದ್ದರು.

More articles

Latest article