ಕನ್ನಡದ ಸೃಜನಶೀಲ ಬರಹಗಾರ್ತಿ ಡಾ. ನಾಗರೇಖಾ ಗಾಂವಕರ ಅವರ ಇಪ್ಪತ್ತು ʼವರ್ಷಗಳ ನಂತರʼ ಮತ್ತು ʼಪಾದಕ್ಕೊಂದು ಕಣ್ಣುʼ ಕೃತಿಗಳು ಇಂದು ಬೆಂಗಳೂರಿನಲ್ಲಿ ಬಿಡುಗಡೆಗೊಳ್ಳಲಿವೆ. ಪಾದಕ್ಕೊಂದು ಕಣ್ಣು ಕವನ ಸಂಕಲದಿಂದ ಆಯ್ದ ಎರಡು ಕವಿತೆಗಳು ಇಲ್ಲಿವೆ
ಹೂ ಕೊಯ್ಯುವುದು
ಎಲೆಗಳ ತಲೆಯ ಮೇಲೆ ತೊನೆದಾಡುವ
ಈ ಹೂ ಕೊಯ್ಯುವುದು
ಸುಲಭದ ಮಾತಲ್ಲ
ಬೇಕು ಒಂದಿಷ್ಟು ಕಸರತ್ತು
ಅಖಂಡ ಮೌನದಿ ಎಲ್ಲರೆದೆಗೆ
ತಂಪೆರೆಯಲೆಂದೆ
ಬುದ್ಧ ಧರಿಸಿದ ನಿರ್ಲಿಪ್ತ ಹೂ
ಕೊಯ್ಯುವುದು
ಸುಲಭವಲ್ಲ..
ಗುಡಿಯೊಳಗೆ ಕೂತ
ಶಿವನಿಗೋ, ಅವನ ಸಿರಿಮುಡಿಗೋ
ಭಕ್ತಗಣಗಳು ಹೂವಿನ
ಭಂಡಾರವನ್ನೆ ತೊಡಿಸಿದರೂ
ಮನಃದಂಗಳದಿ ಮೂಡಿದ
ಶಿವನ ದಿವ್ಯ ಜ್ಞಾನದ ಹೂ
ಕೊಯ್ಯುವುದು
ಸುಲಭವಲ್ಲ..
ಅಜ್ಞಾತ ಕಡಲಲ್ಲಿ ಈಜುತ್ತಾ
ಆತ್ಮದ ಕುರುಡು ಕಳೆದು
ತಿಳಿವಿನ ವಿವೇಕದ ಹೂ
ಕೊಯ್ಯುವುದು
ಸುಲಭವಲ್ಲ..
ನುಣುಪು ಮೈ ದೊಗಲ
ಹಾಗೇ ಮೆತ್ತಗೆ ಹಿಡಿದು ನಾಜೂಕಿನಲಿ
ಕೈ ಬೆರಳ ವಿಷಮತೆಗೆ ನಲುಗದಂತೆ
ದಳವೆನಿತೂ ನೋಯದಂತೆ
ಅರ್ಧ ತೊಟ್ಟು ಮುರಿಯದಂತೆ
ಕಿತ್ತು ತರುವುದು…
ಎದೆಗರ್ಭದೊಳಗೆ ಮಾಲೆ ಕಟ್ಟುವುದು
ಸುಲಭವಲ್ಲ..
ಅಜಾಗ್ರತೆಯ ಅಂಗಡಿಯಲ್ಲಿ
ಬಿಕರಿಗಿಟ್ಟ ಮನಸ್ಸು ಹೂವ ಹಿಡಿಯಿತೆಂದರೆ
ಪಕಳೆ ಕಿತ್ತು, ಇಲ್ಲ ದಳ ಮುರಿದು
ಹೂ, ತಾಸೊತ್ತಿಗೆ ಕಮರಿ ಬಣ್ಣಗೇಡಿಯಾಗಿ
ತ್ಯಾಜ್ಯವಾಗುವುದು ಇಲ್ಲವೇ
ಒಣಗಾಳಿಗೆ
ನೆಲತಪ್ಪಿ ಅಲೆದಾಡುವುದು
ಪರದೇಶಿ ಬೆನ್ನು
ಬೆನ್ನು ಪರದೇಶಿ ಎನ್ನುತ್ತಿದ್ದಳು
ಅಮ್ಮ, ತುರಿಕೆ ಬಂದಾಗಲೆಲ್ಲಾ
“ಒಂದಿಷ್ಟು ತುರಿಸು,
ಪರದೇಶಿ ಬೆನ್ನಿಗೆ ಕಣ್ಣಿಲ್ಲ
ಕಿವಿಯಿಲ್ಲ, ಎನ್ನುತ್ತಾ ‘ಹಾಯ್’ ಎಂದು
ಅನ್ನಿಸುವವರೆಗೂ
ತುರಿಸುವುದ ಬಿಡಬೇಡ” ಎನ್ನುತ್ತಿದ್ದಳು.
ಚಂದದ ಕಸೂತಿಯನ್ನೋ,
ಹೊಸ ಡಿಸೈನುಗಳನ್ನೋ ಹಾಕಿದ
ರವಿಕೆ ತೊಟ್ಟ ಸುಂದರ ಬೆನ್ನು
ಕಣ್ಣಿಗೆ ಸುಖವಾದರೂ
ಕನ್ನಡಿಯ ಹೊರತು ನಮಗೇ ಅಪರಿಚಿತ..
ದಿನ ಕಳೆದಂತೆ ಬೆನ್ನಿಗೆ ಬಿದ್ದವರೂ
ಕಂಡೂ ಕೇಳದೇ ಹೋದರು
ವಯಸ್ಸಿನ ಭಾರಕ್ಕೋ ಬೆನ್ನು ನೋವಿಗೆ
ದಿನವೂ ಮುಲಾಮು, ಸ್ಪ್ರೇಗಳು ಬೇಕೆ ಬೇಕು
ಅನ್ನಿಸುವ ಹೊತ್ತಿಗೆ
ಅಕಾರಣವಾಗಿ, ಗೊತ್ತೇ ಆಗದಂತೆ
ಒರಗಿಕೊಂಡ ಬೆನ್ನುಗಳು
ಅರಿವಿಗೆ ಬರುವಾಗ ಆಗಿದ್ದವು
ದಿನಗಳು
ಈ ಬೆನ್ನುಗಳು ಪರಸ್ಪರ ಆತು ಕೊಂಡಿದ್ದೆ
ಹೆಚ್ಚಾಗಿ, ಬೆನ್ನು ಬೆನ್ನು ಮಾತಾಡಿ,
ಬೆವರಿನ ವಾಸನೆಯನ್ನು
ಪರಸ್ಪರ ಗುರುತಿಸುವಷ್ಟು ಹತ್ತಿರಕ್ಕೆ
ಬಂದದ್ದು ಗೊತ್ತಾಗಲೇ ಇಲ್ಲ
ಮಾತುಕತೆ, ಹಸಿಬಿಸಿ,ಹುಸಿಕೋಪ
ಯಾವುದಕ್ಕೂ ಬೆನ್ನು ತಿರುಗಿಸಲಿಲ್ಲ
ನನ್ನ ಎಲ್ಲ ಕಿರಿಕಿರಿ, ಕರಕರೆಗಳಿಗೆ
ಅದರದು ದಪ್ಪ ಕಿವಿ
ಆ ಬೆನ್ನಿನ ಪುಂಗಿ ಪೊಗರಿನ ಮಾತುಗಳಿಗೆಲ್ಲ
ನನ್ನದು ಕೆಪ್ಪ ಕಿವಿ
ಬೆನ್ನಿಗೆ ಹಾದುಹೋದ ಅವರಿವರ ಮಾತುಗಳು
ಪರಸ್ಪರರ ಬೆನ್ನಿಗೆ ಬಿದ್ದವು.
ಒಂದಿಷ್ಟು ಹೇಳಿಕೊಂಡರು
ಕಾರಿಕೊಂಡರು, ಉಗಿದುಕೊಂಡರು.
ನಾವೀನ ಒಬ್ಬರಿಗೊಬ್ಬರು ಬೆನ್ನು ತಿರುಗಿದ್ದೇವೆ
ಕಲಿತಿದ್ದೇವೆ ಬೆನ್ನ ಹಿಂದೆ ಆಡಿಕೊಳ್ಳುವುದನ್ನು..
ಭಿನ್ನವಾದವು ಬೆನ್ನು ಎನ್ನಬಹುದು ನೀವು.
ಆದರೀ ಬೆನ್ನು ನೋವಿಗೆ
ಬೇರೆ ಮುಲಾಮು ಹೊಂದುತ್ತಿಲ್ಲ.
ಆ ಮುಲಾಮಿನ ಹೆಸರೂ ನೆನಪಿಲ್ಲ.
ನಾಗರೇಖಾ ಗಾಂವಕರ, ಉಪನ್ಯಾಸಕರು
ಇದನ್ನೂ ಓದಿ- ಡಾ. ನಾಗರೇಖಾ ಗಾಂವಕರ ಅವರ ಪುಸ್ತಕಗಳ ಲೋಕಾರ್ಪಣೆ