ಮಾಜಿ ಸಚಿವ ವರ್ತೂರು ಪ್ರಕಾಶ್‌ ಅಪಹರಣದ ರೂವಾರಿ, ಭೂಗತ ಪಾತಕಿಗಳ ನಿಕಟವರ್ತಿ ಕವಿರಾಜ್‌ ಬಂಧನ

Most read

ಕೋಲಾರ: ದೇಶದಾದ್ಯಂತ ಸುಮಾರು 14 ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಭೂಗತ ಪಾತಕಿ ಕವಿರಾಜ್‌ ನನ್ನು ಕೋಲಾರ ಜಿಲ್ಲಾ  ಸಿಇಎನ್‌ ಪೊಲೀಸರು ಬಂಧಿಸಿದ್ದಾರೆ.

ಭೂಗತ ಪಾತಕಿಗಳಾದ ರವಿ ಪೂಜಾರಿ, ಮುತ್ತಪ್ಪರೈ ನಿಕಟವರ್ತಿಯೂ ಆಗಿದ್ದ ಈತ ದೇಶದ ವಿವಿಧ ರಾಜ್ಯಗಳಲ್ಲಿ ಸುಮಾರು 14ಕ್ಕೂ ಹೆಚ್ಚು ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ 2020ರಲ್ಲಿ ಮಾಜಿ ಸಚಿವ ವರ್ತೂರು ಪ್ರಕಾಶ್ ಅಪಹರಣ ಪ್ರಕರಣವೂ  ಸೇರಿದಂತೆ ಒಟ್ಟು 14 ಪ್ರಕರಣಗಳಲ್ಲಿ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ.

ಬೆಂಗಳೂರಿನ ಕಾಮಾಕ್ಷಿಪಾಳ್ಯ ತಿಲಕ್ ನಗರˌಕೆಂಗೇರಿ, ಆಡುಗೋಡಿˌಸರ್ಜಾಪುರˌ ಹಾಗೂ ಕಾಡುಗೋಡಿ, ಇಂದಿರಾನಗರ ಮತ್ತು ಬೈಯಪ್ಪನ ಹಳ್ಳಿ ಠಾಣೆಗಳಲ್ಲಿ ಈತನ  ವಿರುದ್ಧ ಕೊಲೆ, ದರೋಡೆ, ವಂಚನೆ, ಬೆದರಿಕೆ, ಕಳ್ಳತನ ಪ್ರಕರಣಗಳು ದಾಖಲಾಗಿದ್ದವು.

ಕವಿರಾಜ್ ಪೋಲೀಸರ ಕೈಗೆ ಸಿಗದೆ ಉತ್ತರಾಖಂಡ  (ನೇಪಾಳ ಗಡಿಭಾಗ) ದಲ್ಲಿ ಅಡಗಿದ್ದ ಎಂದು ತಿಳಿದು ಬಂದಿದೆ. ಈತ ಅಲ್ಲಿ ಅಡಗಿಕೊಂಡಿರುವ ಖಚಿತ ಮಾಹಿತಿ ಆಧರಿಸಿ ಜಿಲ್ಲಾ ಸಿಇಎನ್ ಪೋಲೀಸರು ಕಳೆದ ತಿಂಗಳ 31 ರಂದು ಉತ್ತರ ಪ್ರದೇಶದ ನೋಯ್ದಾದಲ್ಲಿ ಬಂಧಿಸಿದ್ದಾರೆ.

ಜಿಲ್ಲಾ ಪೊಲೀಸ್ ಅಧೀಕ್ಷಕರಾದ ನಿಖಿಲ್, ಮತ್ತು  ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕರುಗಳಾದ  ಸಿ.ಆರ್.ರವಿಶಂಕರ್ ಮತ್ತು ಹೆಚ್.ಸಿ, ಜಗದೀಶ್ ಮತ್ತು ಸಿಇಎನ್ ಪೊಲೀಸ್ ಠಾಣೆಯ ಉಪಾಧೀಕ್ಷಕ ರಾಜೇಶ್ ಆರ್. ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ  ನಡೆದಿದೆ. ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಯವರನ್ನು ಜಿಲ್ಲಾ ಪೊಲೀಸ್ ಅಧೀಕ್ಷಕ  ನಿಖಿಲ್ ಶ್ಲಾಘಿಸಿದ್ದಾರೆ.

More articles

Latest article