ಬೆಂಗಳೂರು: ಮೈಸೂರಿನ ಕೆ ಆರ್ ನಗರದ ಮಹಿಳೆಯ ಅಪಹರಣ ಮತ್ತು ಅತ್ಯಾಚಾರ ಪ್ರಕರಣದಲ್ಲಿ ಜೆಡಿಎಸ್ ಮುಖಂಡ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ದೋಷಿ ಎಂದು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ.
ಆದರೆ ಶಿಕ್ಷೆಯ ಪ್ರಮಾಣವನ್ನು ನಾಳೆ ಪ್ರಕಟಿಸುವುದಾಗಿ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಹೇಳಿದ್ದಾರೆ. ನ್ಯಾಯಾಲಯ ಜುಲೈ 29 ರಂದು ವಿಚಾರಣೆ ಪೂರ್ಣಗೊಳಿಸಿ ತೀರ್ಪನ್ನು ಇಂದಿಗೆ ಕಾಯ್ದಿರಿಸಿತ್ತು.
ಪ್ರಜ್ವಲ್ ರೇವಣ್ಣ ವಿರುದ್ಧ ಕೇಳಿ ಬಂದ ನಾಲ್ಕು ಆರೋಪಗಳ ಪೈಕಿ ಮೈಸೂರಿನ ಕೆಆರ್ ನಗರದ ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಪ್ರಕರಣವೂ ಒಂದಾಗಿತ್ತು. ಅತ್ಯಾಚಾರ ಎಸಗಿರುವುದು ಬೆಳಕಿಗೆ ಬರಬಾರದು ಎಂದು ಮಹಿಳೆಯನ್ನು ಅಪಹರಿಸಿ ಹುಣಸೂರು ಬಳಿಯ ತೋಟದ ಮನೆಯಲ್ಲಿ ಕೂಡಿಹಾಕಲಾಗಿತ್ತು ಎಂಬ ಆರೋಪದ ಅಡಿ ದೂರು ದಾಖಲಾಗಿತ್ತು. ಈ ಪ್ರಕರಣದಲ್ಲಿ ಮಾಜಿ ಸಚಿವ ಹೆಚ್ಡಿ ರೇವಣ್ಣ ಮತ್ತು ಭವಾನಿ ರೇವಣ್ಣ ಸೇರಿದಂತೆ ಒಟ್ಟು 9 ಮಂದಿ ವಿರುದ್ಧ ಆರೋಪ ದಾಖಲಾಗಿತ್ತು.
ತೀರ್ಪು ಪ್ರಕಟವಾಗುತ್ತಿದ್ದಂತೆ ಪ್ರಜ್ವಲ್ ರೇವಣ್ಣ ಕಣ್ನೀರಿಡುತ್ತಾ ನ್ಯಾಯಾಲಯದಿಂದ ಹೊರನಡೆದರು.
ಪ್ರಜಲ್ವ್ ರೇವಣ್ಣ ಕಳೆದ ಕಳೆದ 14 ತಿಂಗಳಿನಿಂದ ಸೆರೆವಾಸ ಅನುಭವಿಸುತ್ತಿದ್ದಾರೆ. ಐಪಿಸಿ ಸೆಕ್ಷನ್ 376 (2)(k) ಅಡಿ ಮಹಿಳೆಯ ಮೇಲೆ ಹಕ್ಕು ಚಲಾಯಿಸುವ ಸ್ಥಿತಿಯಲ್ಲಿದ್ದು ಅತ್ಯಾಚಾರ ಎಸಗಲಾಗಿದೆ. 376 (2) (n) ಅಡಿ ಮಹಿಳೆಯ ಮೇಲೆ ಪದೇ ಪದೇ ಅತ್ಯಾಚಾರ. 354(A) ಲೈಂಗಿಕತೆ ಬೇಡಿಕೆ ಇಡುವುದು. 354 (B) ಮಹಿಳೆಯನ್ನು ವಿವಸ್ತ್ರಗೊಳಿಸುವುದು. 354 (c) ಮಹಿಳೆಯ ಅಶ್ಲೀಲ ದೃಶ್ಯ ಚಿತ್ರೀಕರಿಸುವುದು. 506 ಜೀವ ಬೆದರಿಕೆ, 201 ಸಾಕ್ಷ್ಯನಾಶದ ಅಡಿ ದೋಷಾರೋಪ ಹೊರಿಸಲಾಗಿದೆ ಎಂಬ ಆರೋಪಗಳ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.