ನವದೆಹಲಿ: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಗೆ ಶೀಘ್ರ ಚುನಾವಣೆ ನಡೆಸುವ ಸಂಬಂಧ ನಗರಾಭಿವೃದ್ಧಿ ಇಲಾಖೆ ಇಂದು ಮತ್ತೊಮ್ಮೆ ಸುಪ್ರೀಂ ಕೋರ್ಟ್‌ಗೆ ಹೆಚ್ಚುವರಿ ಪ್ರಮಾಣಪತ್ರ ಸಲ್ಲಿಸಿದೆ.
ನವೆಂಬರ್ ಅಂತ್ಯದ ಒಳಗೆ ಬಿಬಿಎಂಪಿ ವಾರ್ಡ್ ಪುನರ್ ವಿಂಗಡಣೆ ಹಾಗೂ ಮೀಸಲಾತಿ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಅದಕ್ಕೂ ಮುನ್ನವೇ ಈ ಪ್ರಕ್ರಿಯೆ ಮುಗಿಯುವ ಸಾಧ್ಯತೆಗಳಿವೆ. ನ್ಯಾಯಾಲಯ ಸೂಚಿಸಿದರೆ ಶೀಘ್ರ ಚುನಾವಣೆ ನಡೆಸಲು ಸರ್ಕಾರ ಸಿದ್ಧ ಎಂದು ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್ ಪ್ರಮಾಣಪತ್ರದಲ್ಲಿ ತಿಳಿಸಿದ್ದಾರೆ.
ಬಿಬಿಬಿಎಂಪಿ ಚುನಾವಣೆಗೆ ಸಂಬಂಧಿಸಿದ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಹಾಗೂ ಜೋಯ್‌ಮಾಲ್ಯ ಬಾಗ್ಚಿ ಅವರಿರುವ ಪೀಠ ಮುಂದಿನ ಸೋಮವಾರ ನಡೆಸಲಿದೆ.
ಬಿಬಿಎಂಪಿ ಸದಸ್ಯರ ಅಧಿಕಾರ ಅವಧಿಯು 2019ರ ಸೆಪ್ಟೆಂಬರ್ 10ರಂದು ಪೂರ್ಣಗೊಂಡಿದೆ. ಆರು ವಾರಗಳಲ್ಲಿ ಬಿಬಿಎಂಪಿಗೆ ಚುನಾವಣೆ ನಡೆಸುವಂತೆ ರಾಜ್ಯ ಚುನಾವಣಾ ಆಯೋಗಕ್ಕೆ ಸೂಚಿಸಿ ಹೈಕೋರ್ಟ್ ಹೊರಡಿಸಿದ್ದ ಆದೇಶವನ್ನು ಸುಪ್ರೀಂ ಕೋರ್ಟ್ 2020ರ ಡಿಸೆಂಬರ್ 18ರಂದು ಅಮಾನತಿನಲ್ಲಿ ಇರಿಸಿತ್ತು. ಕರ್ನಾಟಕ ಮುನ್ಸಿಪಲ್ ಕಾರ್ಪೊರೇಷನ್ (ತಿದ್ದುಪಡಿ) ಕಾಯ್ದೆ– 2020ರ ಅನ್ವಯ ರಚಿಸಲಾಗುವ 243 ವಾರ್ಡ್‌ಗಳ ಬದಲಿಗೆ, ಮೊದಲಿದ್ದ 198 ವಾರ್ಡ್‌ಗಳಿಗೆ ಚುನಾವಣೆ ನಡೆಸುವಂತೆ ಹೈಕೋರ್ಟ್ ನೀಡಿದ್ದ ಆದೇಶದ ಸಿಂಧುತ್ವ ಪ್ರಶ್ನಿಸಿ ಕರ್ನಾಟಕ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು.