ಬೆಂಗಳೂರು: ನಗರದ ಹೊರವಲಯದ ಆನೇಕಲ್ ನ ಅರಕೆರೆಯ ಶಾಂತಿನಿಕೇತನ ಬಡಾವಣೆಯಲ್ಲಿ ಟ್ಯೂಷನ್ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ಬಾಲಕ 13 ವರ್ಷದ ನಿಶ್ಚಿತ್ ನನ್ನು ಅಪಹರಿಸಿ ಪೆಟ್ರೋಲ್ ಸುರಿದು ಸುಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಹುಳಿಮಾವು ಠಾಣೆಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಗುರುಮೂರ್ತಿ ಹಾಗೂ ಗೋಪಾಲಕೃಷ್ಣ ಬಂಧಿತ ಆರೋಪಿಗಳು. ಇವರು ಕಗ್ಗಲಿಪುರ ಕಾಡಿನೊಳಗೆ ಅಡಗಿ ಕುಳಿತ್ತಿದ್ದ ಖಚಿತ ಮಾಹಿತಿ ಆಧರಿಸಿ ಗುರುವಾರ ತಡರಾತ್ರಿ ನಡೆದ ಕಾರ್ಯಾಚರಣೆಯಲ್ಲಿ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಆರೋಪಿಗಳು ಪರಾರಿಯಾಗಲು ಯತ್ನಿಸಿ ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದರು. ಆಗ ಹುಳಿಮಾವು ಠಾಣೆಯ ಪೊಲೀಸರು ಆತ್ಮರಕ್ಷಣೆಗಾಗಿ ಆರೋಪಿಗಳ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ. ಇಬ್ಬರೂ ಅಪಹರಣಕಾರರ ಕಾಲಿಗೆ ಗುಂಡೇಟು ಬಿದ್ದಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಮೃತ ಬಾಲಕ ನಿಶ್ಚಿತ್ ಅವರಪೋಷಕರಿಗೆ ಪರಿಚಯವಿದ್ದ ಆರೋಪಿಗಳೇ ಈ ಕೃತ್ಯ ಎಸಗಿದ್ದಾರೆ ಎಂದು ತಿಳಿದು ಬಂದಿದೆ. ಬುಧವಾರ ರಾತ್ರಿ ಟ್ಯೂಷನ್ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ಬಾಲಕನನ್ನು ಅಪಹರಿಸಿ ಆರೋಪಿಗಳು ರೂ. 5 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಹುಳಿಮಾವು ಠಾಣೆಗೆ ಪೋಷಕರು ದೂರು ನೀಡಿದ್ದರು.
ಒಂದು ಕಡೆ ಪೊಲೀಸರು ಆರೋಪಿಗಳ ಬಂಧನಕ್ಕೆ ಕಾರ್ಯಾಚರಣೆ ನಡೆಸುತ್ತಿದ್ದರೆ ಮತ್ತೊಂದು ಕಡೆ ಪೋಷಕರು, ಆರೋಪಿಗಳಿಗೆ ಹಣ ನೀಡಿ ಮಗನನ್ನು ರಕ್ಷಿಸಿಕೊಳ್ಳಲು ಮುಂದಾಗಿದ್ದರು. ಅಷ್ಟರೊಳಗೆ ಆರೋಪಿಗಳು ಬಾಲಕನನ್ನು ಕಗ್ಗಲಿಪುರದ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಕತ್ತು ಕೊಯ್ದು ಕೊಲೆ ಮಾಡಿ ಪೆಟ್ರೋಲ್ ಸುರಿದು ಸುಟ್ಟು ಹಾಕಿದ್ದರು. ಗುರುವಾರ ಸಂಜೆ ಜಾನುವಾರುಗಳನ್ನು ಮೇಯಿಸುವವರು ಬಂಡೆಯ ಮೇಲೆ ಸುಟ್ಟ ಸ್ಥಿತಿಯಲ್ಲಿ ಬಾಲಕನ ಮೃತದೇಹವನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದರು.