ಪಹಲ್ಗಾಮ್ ದಾಳಿ: ಚರ್ಚೆಯಲ್ಲಿ ಭಾಗವಹಿಸಲು ಹಿಂದೇಟು ಏಕೆ? ಪ್ರಧಾನಿ ಮೋದಿಗೆ ಚಿದಂಬರಂ ಪ್ರಶ್ನೆ

Most read

ನವದೆಹಲಿ: ಜಮ್ಮು ಕಾಶ್ಮೀರದ ಪಹಲ್ಗಾಮ್‌ ನಲ್ಲಿ 26 ಪ್ರವಾಸಿಗರನ್ನು ಗುಂಡಿಟ್ಟು ಹತ್ಯೆ ಮಾಡಿದ ಪ್ರಕರಣದಲ್ಲಿ ಭಯೋತ್ಪಾದಕರು ಪಾಕಿಸ್ತಾನದಿಂದಲೇ ಬಂದವರು ಎಂದು ಹೇಗೆ ಭಾವಿಸುತ್ತೀರಿ. ಅವರು ಈ ನೆಲದ ಭಯೋತ್ಪಾದಕರೇ ಆಗಿರಬಹುದಲ್ಲವೇ?. ಏಕೆಂದರೆ ಇಂದಿನವರೆಗೂ ಕೃತ್ಯ ನಡೆಸಿದವರ ಕನಿಷ್ಠ  ಸುಳಿವೂ ಪತ್ತೆಯಾಗಿಲ್ಲ ಎಂದು ಕಾಂಗ್ರೆಸ್‌ ಹಿರಿಯ ಮುಖಂಡ ಪಿ.ಚಿದಂಬರಂ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವರ ಈ ಹೇಳಿಕೆ ಹೊಸ ಚರ್ಚೆಗೆ ನಾಂದಿ ಹಾಡಿದೆ.

ಭಯೋತ್ಪಾದಕರನ್ನು ಗುರುತಿಸಿದ್ದಾರಾ? ಅವರು ಎಲ್ಲಿಂದ ಬಂದರು? ಅವರು ಈ ನೆಲದ ಭಯೋತ್ಪಾದಕರೇ ಆಗಿರುವ ಸಾಧ್ಯತೆಗಳಿರಬಹುದಲ್ಲವೇ?. ಅವರು ಪಾಕಿಸ್ತಾನದಿಂದಲೇ ಬಂದರು ಎಂದು ಹೇಗೆ ಭಾವಿಸುತ್ತೀರಿ? ಅದಕ್ಕೆ ಸಾಕ್ಷಿಗಳು ಎಲ್ಲಿವೆ ಎಂದು ಸರಣಿ ಪ್ರಶ್ನೆಗಳನ್ನು ಕೇಳಿದ್ದಾರೆ.

 ಈ ಗಂಭೀರ ವಿಷಯದಲ್ಲಿ ಕೇಂದ್ರ ಸರ್ಕಾರ ಮತ್ತು ಪ್ರಧಾನಿ ಮೋದಿ ಅವರ ಮೌನವೂ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ‘ಆಪರೇಷನ್ ಸಿಂಧೂರ’ ಕುರಿತು ಪ್ರಧಾನಿ ತುಟಿ ಬಿಚ್ಚುತ್ತಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡುತ್ತಾರೆ. ಹಲವಾರು ರ‍್ಯಾಲಿಗಳಲ್ಲಿ ಮಾತನಾಡುತ್ತಾರೆ. ಆದರೆ ಪ್ರಜಾಪ್ರಭುತ್ವದ ದೇಗುಲವಾದ  ಸಂಸತ್ತಿನಲ್ಲಿ ಈ ಕುರಿತು ಚರ್ಚೆಯಲ್ಲಿ ಭಾಗವಹಿಸಲು ಹಿಂಜರಿಯುತ್ತಾರೆ ಎಂದು ಚಿದಂಬರಂ ವಾಗ್ದಾಳಿ ನಡೆಸಿದ್ದಾರೆ.

More articles

Latest article