ಮಂಗಳೂರು, ಜು.27 : ಮಹಿಳಾ ಸಂಘಟನೆಗಳು ವ್ಯಾಪಕವಾಗಿ ಬೆಳೆಯಬೇಕೆಂದರೆ, ತಮ್ಮ ಮೂಲಬೇರುಗಳನ್ನು ಗಟ್ಟಿಮಾಡಿಕೊಳ್ಳಬೇಕು. ಎಲ್ಲ ಮಹಿಳೆಯರನ್ನು ಮನುಷ್ಯತ್ವದ ಕಡೆಗೆ, ಮಾನವೀಯ ಸೌಹಾರ್ದ ಸಮಾಜದ ಕಡೆಗೆ ಕರೆತರಬೇಕೆಂದರೆ ಪುರುಷರು ಹಾಕಿಕೊಟ್ಟ ಚೌಕಟ್ಟಿನಲ್ಲಿ ಕೆಲಸ ಮಾಡಿದರೆ ಅದು ಸಾಕಾಗುವುದಿಲ್ಲ. ಗಂಡಾಳ್ವಿಕೆಯ ಜಾಲದಿಂದ ಹೊರಬರಲು ಸ್ವ ವಿಮರ್ಶೆ ಅಗತ್ಯ ಎಂದು ಖ್ಯಾತ ಸ್ತ್ರೀವಾದಿ ಚಿಂತಕಿ, ಪ್ರಾಧ್ಯಾಪಕಿ ಸಬಿತಾ ಬನ್ನಾಡಿ ಅಭಿಪ್ರಾಯ ಪಟ್ಟರು.
ನಗರದ ಬಲ್ಮಠದ ಬಿಷಪ್ ಜತ್ತನ್ನ ಸಭಾಂಗಣ (ನಾಡೋಜ ಸಾರಾ ಅಬೂಬಕ್ಕರ್ ವೇದಿಕೆ)ದಲ್ಲಿ ರವಿವಾರ ನಡೆದ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ಒಂಬತ್ತನೆಯ ದ .ಕ ಜಿಲ್ಲಾ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತಾಡುತ್ತಿದ್ದರು.
ಮುಂದುವರಿದು ಕೋಮುವಾದವಿರಲಿ, ಜನಾಂಗ ಶ್ರೇಷ್ಠತೆ ಇರಲಿ ಎಲ್ಲದರ ಮೂಲ ಕುಟುಂಬದೊಳಗೇ ಹುಟ್ಟಿಕೊಂಡಿರುವ ಪಿತೃಪ್ರಧಾನತೆ. ಹೆಂಗಸರ ಮೇಲೆ ನಡೆಯುವ ಎಲ್ಲಾ ದೌರ್ಜನ್ಯಗಳಿಗೆ ಇದು ಸಮ್ಮತಿಯನ್ನು ಹುಟ್ಟುಹಾಕುತ್ತದೆ. ಮಾತ್ರವಲ್ಲ, ಹೆಣ್ಣಿನ ಮೇಲೆ ಆಗುವ ಆಕ್ರಮಣಗಳಲ್ಲೂ ಬಲಿಯಾಗುವವರ, ದೌರ್ಜನ್ಯ ಎಸಗುವವರ ಜಾತಿ, ಧರ್ಮದ ಆಧಾರದಲ್ಲಿ ಅಳೆಯುವ, ಆರೋಪಿಗಳನ್ನು ರಕ್ಷಿಸುವ ದುರಂತಗಳು ನಡೆಯುತ್ತಿವೆ. ಚಳುವಳಿಗಳು ನಿರಂತರವಾಗಿ ಇವುಗಳ ವಿರುದ್ಧ ಹೋರಾಡುತ್ತಿವೆ. ಸಮಾನತೆಯ ಆಶಯವುಳ್ಳ ಮಾನವೀಯ ಸಮಾಜವನ್ನು ಕಟ್ಟುವಾಗ ಆಯಾ ಕಾಲಘಟ್ಟದ ಅವಶ್ಯಕತೆಗೆ ಅನುಗುಣವಾಗಿ ಚಳುವಳಿಗಳು ರೂಪುಗೊಳ್ಳುತ್ತವೆ. ಕೋಮುವಾದ ಎನ್ನುವುದು ಒಂದು ಖಾಯಿಲೆ. ಈ ಖಾಯಿಲೆ ಹೆಂಗಸರನ್ನೂ ಆಕ್ರಮಿಸಿಕೊಳ್ಳಬಹುದು. ಇಂತಹ ಸನ್ನಿವೇಶದಲ್ಲಿ ಮಹಿಳಾ ಚಳುವಳಿ ಕಟ್ಟಲು ಹಲವು ಸವಾಲುಗಳಿವೆ. ಈಗಾಗಲೇ ಪುರುಷರು ಕಟ್ಟಿಕೊಂಡಿರುವ ಚೌಕಟ್ಟುಗಳನ್ನು ಅನುಕರಿಸುವುದು ಉಪಯುಕ್ತವಲ್ಲ. ಬದಲಿಸಲಾಗದ ಚೌಕಟ್ಟುಗಳಿಂದ ಚಳುವಳಿಗಳು ಛಿದ್ರವಾಗಬಹುದು. ನಾವಿಂದು ಹೊಸದಾರಿಗಳನ್ನು ಹುಡುಕಬೇಕು. ಚಳುವಳಿಗಳಲ್ಲಿರುವ ಪಿತೃಪ್ರಧಾನತೆಯನ್ನು ಗುರುತಿಸಿ ಕಿತ್ತುಹಾಕಬೇಕು. ಕುಟುಂಬ ಮತ್ತು ಚಳುವಳಿ ಪರಸ್ಪರ ಪೂರಕವೇ ಹೊರತು ಕುಟುಂಬ ವರ್ಸಸ್ ಚಳುವಳಿ ಆಗಬಾರದು. ಆ ನಿಟ್ಟಿನಲ್ಲಿ ನಮ್ಮ ನಮ್ಮ ಮನೆಗಳಿಂದಲೇ ಪುರುಷರು, ಮಹಿಳೆಯರು ಸಮಾನತೆಯ ನೆಲೆಯಲ್ಲಿ ಕೆಲಸ ಮಾಡುವ ಸಾಧ್ಯತೆಗಳನ್ನು ವಿಸ್ತರಿಸಿಕೊಳ್ಳಲು ಹೆಚ್ಚು ಹೆಚ್ಚು ಅಧ್ಯಯನ ಶಿಬಿರಗಳನ್ನು ಮಾಡಬೇಕು. ಇದೆಲ್ಲವೂ ನಮ್ಮ ಜವಾಬ್ದಾರಿಯಾಗಿದೆ. ತಾಳ್ಮೆ, ಔದಾರ್ಯದ ಮೂಲಕ ಸಹೃದಯತೆಯ, ಸಾಮರಸ್ಯದ ಮಾನವೀಯ ಲೋಕ ಕಟ್ಟುವುದಕ್ಕಾಗಿ ನಾವು ಪ್ರೀತಿಯೇ ತಳಹದಿಯಾದ ರಾಜಕಾರಣ ಮಾಡಬೇಕಾಗಿದೆ ಎಂದರು.
ಮುಖ್ಯ ಅತಿಥಿಗಳಾದ ಚಂದ್ರಕಲಾ ನಂದಾವರ ಅವರು ಸಾಮರಸ್ಯದ ಹಿನ್ನೆಲೆಯೊಳಗೆ ಮಾತಾಡುತ್ತಾ 80 ರ ದಶಕದ ವರೆಗೂ ಕೋಮುವಾದ ಎಂಬ ಶಬ್ದವನ್ನು ತಾನು ಕೇಳಿರಲಿಲ್ಲ. ಕೋಮುವಾದಿಗಳನ್ನು ಸೃಷ್ಟಿಸಿದವರಲ್ಲಿ ಬಹು ದೊಡ್ಡ ಪಾಲು ಅಧ್ಯಾಪಕರದು ಎಂದು ಹೇಳುತ್ತಾ ತಮ್ಮ ವೃತ್ತಿ ಬದುಕಿನಲ್ಲಿ ಎದುರಿಸಿದ ಕೋಮು ಸಂಬಂಧಿತ ಘಟನೆಗಳನ್ನು ಹಂಚಿಕೊಂಡರು.
ಮತ್ತೋರ್ವ ಮುಖ್ಯ ಅತಿಥಿ ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಕಾರ್ಯದರ್ಶಿ ದೇವಿ ಮಾತನಾಡಿದರು. ಸ್ವಾಗತ ಸಮಿತಿಯ ಅಧ್ಯಕ್ಷೆ ಫ್ಲೇವಿ ಕ್ರಾಸ್ತಾ ಅತ್ತಾವರ ಅಧ್ಯಕ್ಷತೆ ವಹಿಸಿದ್ದರು.
ಜನವಾದಿಯ ರಾಜ್ಯ ಉಪಾಧ್ಯಕ್ಷರಾದ ಕೆ ಎಸ್ ಲಕ್ಷ್ಮೀ , ಜಿಲ್ಲಾ ಕಾರ್ಯದರ್ಶಿ ಭಾರತಿ ಬೋಳಾರ, ಮುಖಂಡರಾದ ಪ್ರಮೀಳಾ ಶಕ್ತಿನಗರ, ಶಮೀಮಾ ಭಾನು ತಣ್ಣೀರುಬಾವಿ, ಈಶ್ವರಿ ಪದ್ಮುಂಜ, ಲತಾ ಲಕ್ಷ್ಮಣ್ , ಅಸುಂತಾ ಡಿ ಸೋಜ, ಮಾಧುರಿ ಬೋಳಾರ ಉಪಸ್ಥಿತರಿದ್ದರು.
ಜನವಾದಿಯ ಜಿಲ್ಲಾಧ್ಯಕ್ಷೆ ಜಯಂತಿ ಬಿ ಶೆಟ್ಟಿ ಧ್ವಜಾರೋಹಣಗೈದರು. ಸ್ವಾಗತ ಸಮಿತಿಯ ಗೌರವಾಧ್ಯಕ್ಷೆ, ರಂಗ ಕಲಾವಿದೆ ಗೀತಾ ಸುರತ್ಕಲ್ ಸ್ವಾಗತಿಸಿದರು.
ಸಮ್ಮೇಳನದಲ್ಲಿ ಈ ಕೆಳಗಿನ ನಿರ್ಣಯಗಳನ್ನು ಕೈಗೊಳ್ಳಲಾಯಿತು.
- ಧರ್ಮಸ್ಥಳ ಅಸಹಜ ಸಾವುಗಳ ನ್ಯಾಯಯುತ ತನಿಖೆ ನಡೆಯಬೇಕು, ಪದ್ಮಲತಾ, ಸೌಜನ್ಯ, ವೇದವಲ್ಲಿ, ಯಮುನಾ ಕೊಲೆ ಪ್ರಕರಣಗಳನ್ನು ಎಸ್ಐ ಟಿ ತನಿಖೆಯ ವ್ಯಾಪ್ತಿಗೆ ಒಳಪಡಿಸಬೇಕು.
- ಶಕ್ತಿಯೋಜನೆಯ ಲಾಭ ಜಿಲ್ಲೆಯ ಮಹಿಳೆಯರಿಗೆ ದೊರಕುವಂತಾಗಲು ಜಿಲ್ಲೆಯ ಎಲ್ಲಾ ಮಾರ್ಗಗಳಲ್ಲಿ ಸರಕಾರಿ ಬಸ್ ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಒದಗಿಸಬೇಕು.
- ಮಹಿಳೆಯರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯಗಳಿಗೆ ಕಡಿವಾಣ ಹಾಕಲು ಆಗ್ರಹ.