ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದಲ್ಲಿ ಹಲವು ವರ್ಷಗಳ ಹಿಂದೆ ನಡೆದಿದೆ ಎನ್ನಲಾದ ಅತ್ಯಾಚಾರ ಹತ್ಯೆ ಪ್ರಕರಣಗಳನ್ನು ಕುರಿತು ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ನಿನ್ನೆಯಿಂದಲೇ ತನಿಖೆ ಆರಂಭಿಸಿದ್ದು ಸರಣಿ ಸಭೆಗಳನ್ನು ನಡೆಸಿದೆ.
ತಂಡದ ಸದಸ್ಯರು ಹಿರಿಯ ಐಪಿಎಸ್ ಅಧಿಕಾರಿಗಳಾದ ಅನುಚೇತ್ ಮತ್ತು ದಯಾಮ ಅವರು ಮಾತ್ರ ದಕ್ಷಿಣ ಕನ್ನಡಕ್ಕೆ ಆಗಮಿಸಿದ್ದು ಮಂಗಳೂರಿನ ಸರ್ಕೀಟ್ ಹೌಸ್ ನಲ್ಲಿ ಎರಡು ಸಭೆಗಳನ್ನು ನಡೆಸಿದರು. ಎಸ್ ಐಟಿಗೆ ನಿಯೋಜನೆಗೊಂಡಿರುವ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಭೆಯಲ್ಲಿ ಭಾಗವಹಿಸಿದ್ದರು. ನಂತರ ಅನುಚೇತ್ ಹಾಗೂ ದಯಾಮ ಅವರು ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್ ಜತೆ ಪ್ರತ್ಯೇಕ ಸಭೆ ನಡೆಸಿದರು ಎಂದು ತಿಳಿದು ಬಂದಿದೆ.
ಎಸ್ ಐಟಿ ತಂಡದ 12 ಮಂದಿ ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದು, ಒಂದೆರಡು ದಿನಗಳಲ್ಲಿ ಎಲ್ಲರೂ ತನಿಖಾ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳಲು ಸಿದ್ಧರಾಗಿರುವಂತೆ ಅನುಚೇತ್ ಅವರು ಸೂಚನೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಭೆಯ ನಂತರ ಅನುಚೇತ್ ಅವರು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿ ಸದ್ಯಕ್ಕೆ ಏನೂ ಹೇಳುವುದಿಲ್ಲ ಎಂದಷ್ಟೇ ಉತ್ತರಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣ್ ಕೆ. ಅವರ ಸೂಚನೆಯಂತೆ ಬೆಳ್ತಂಗಡಿ ಪೊಲೀಸ್ ಠಾಣೆಯ ಸಮೀಪದಲ್ಲಿರುವ ಪೊಲೀಸ್ ಇಲಾಖೆಯ ವಸತಿ ಸಮುಚ್ಚಯದ ಹೊಸ ಕಟ್ಟಡದ ನೆಲಮಹಡಿಯ ಎರಡು ಕೊಠಡಿಗಳಲ್ಲಿ ತನಿಖಾ ತಂಡದ ಕಚೇರಿ ತೆರೆಯಲಾಗುತ್ತಿದೆ. ಕಚೇರಿಗೆ ಬೇಕಾದ ಸಿದ್ಧತೆಗಳನ್ನು ಬೆಳ್ತಂಗಡಿ ಪೊಲೀಸರು ಮಾಡಿದ್ದಾರೆ. ತನಿಖಾ ತಂಡದ ಕಚೇರಿಯನ್ನು ಬೆಳ್ತಂಗಡಿಯಲ್ಲಿ ತೆರೆಯಲಾಗುತ್ತದೆ.
ಧರ್ಮಸ್ಥಳ ಹತ್ಯೆ ಪ್ರಕರಣವು ಸೂಕ್ಷ್ಮವಾಗಿರುವುದರಿಂದ ಎಸ್ಐಟಿ ಅಧಿಕಾರಿಗಳು ಕಾರ್ಯಾಚರಣೆಯನ್ನು ತುಂಬಾ ರಹಸ್ಯವಾಗಿ ನಡೆಸಲು ನಿರ್ಧರಿಸಿದ್ದಾರೆ. ಅಧಿಕಾರಿಗಳ ಚಲನ ವಲನ, ಸಭೆಗಳು ಸೇರಿದಂತೆ ಯಾವ ಮಾಹಿತಿಯೂ ಸೋರಿಕೆಯಾಗದಂತೆ ಹೊರಗೆ ತಲುಪದಂತೆಎಚ್ಚರಿಕೆ ವಹಿಸಬೇಕು ಎಂದು ತಂಡದ ಎಲ್ಲ ಸದಸ್ಯರಿಗೆ ಸೂಚಿಸಲಾಗಿದೆ.
ಆಂತರಿಕ ಭದ್ರತಾ ವಿಭಾಗದ ಪೊಲೀಸ್ ಮಹಾನಿರ್ದೇಶಕ ಪ್ರಣವ್ ಮೊಹಾಂತಿ ನೇತೃತ್ವದಲ್ಲಿ ತನಿಖಾ ತಂಡವನ್ನು ರಚಿಸಲಾಗಿದೆ. ಪೊಲೀಸ್ ನೇಮಕಾತಿ ವಿಭಾಗದ ಡಿಐಜಿ ಎಂ.ಎನ್.ಅನುಚೇತ್ ಮತ್ತು ಆಂತರಿಕ ಭದ್ರತಾ ವಿಭಾಗದ ಎಸ್‌ಪಿ ಜಿತೇಂದ್ರ ಕುಮಾರ್ ದಯಾಮ ಸದಸ್ಯರಾಗಿದ್ದಾರೆ. ವಿಶೇಷ ತನಿಖಾ ತಂಡಕ್ಕೆ ಇನ್ಸ್ಪೆಕ್ಟರ್ಗಳು, ಸಬ್ ಇನ್ಸ್ಪೆಕ್ಟರ್ಗಳು, ಹೆಡ್ ಕಾನ್ಸ್ಟೆಬಲ್ ಹಾಗೂ ಕಾನ್ಸ್ಟೆಬಲ್ಗಳನ್ನು ಒಳಗೊಂಡ 20 ಮಂದಿ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ