ಲಂಕೇಶ್ ಅವರ ಅಧ್ಯಯನಶೀಲತೆ ಮಾದರಿಯಾಗಲಿ: ಪತ್ರಕರ್ತರ ಮಕ್ಕಳಿಗೆ ಕೆ.ವಿ.ಪ್ರಭಾಕರ್ ಕರೆ

Most read

ಹಾವೇರಿ: ರಾಗಿಕಾಳಿಗೆ ಭೂಮಿಯನ್ನೇ ಸೀಳಿಕೊಂಡು ಮೇಲೆ ಬರುವ ಶಕ್ತಿ ಇರಬಹುದು. ಆದರೆ, ರಾಗಿ ಮೊಳಕೆಯೊಡೆಯಲು ಹದವಾದ ಭೂಮಿ ಸಿಗಬೇಕು. ನೀರು, ಗೊಬ್ಬರ ಬೇಕು. ಪ್ರತಿಭೆ ಕೂಡ ಹಾಗೆಯೇ. ಹದವಾದ ಅವಕಾಶ ಸಿಕ್ಕಾಗ ಪ್ರತಿಭೆ ಅನಾವರಣಗೊಳ್ಳುತ್ತದೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ತಿಳಿಹೇಳಿದರು..

ಪತ್ರಕರ್ತರ ಸಂಘ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಮಾತನಾಡಿದರು.

ಪ್ರತಿಯೊಬ್ಬರ ಒಳಗೂ ಪ್ರತಿಭೆ ಇರುತ್ತದೆ. ಅದು ಹೊರಗೆ ಬರಲು ಅವಕಾಶ ಬೇಕು. ಸಮಾಜ ಈ ಅವಕಾಶವನ್ನು ಒದಗಿಸಿಕೊಡುತ್ತದೆ. ಸಮಾಜವೇ ಪ್ರತಿಭೆ ಹೊರಗೆ ಬರಲು ಹದವಾದ ಭೂಮಿಯ ಹಾಗೆ ಕೆಲಸ ಮಾಡುತ್ತದೆ. ಆದ್ದರಿಂದ ಸಮಾಜದ ಋಣ ನಮ್ಮ ಮೇಲಿರುತ್ತದೆ. ನಾವು ಸಮಾಜಮುಖಿಗಳಾಗುವ ಮೂಲಕ ಸಮಾಜದ ಈ ಋಣವನ್ನು ತೀರಿಸಬೇಕಿದೆ ಎಂದರು.

ನಿಮ್ಮ ಹಾಗೆಯೇ ಪ್ರತಿಭೆ ಇರುವ ಹಾಗೂ ಅವಕಾಶ ಇಲ್ಲದ ಮಕ್ಕಳು ಸಮಾಜದಲ್ಲಿ ಲಕ್ಷಾಂತರ ಇದ್ದಾರೆ. ಶಾಲೆಗೆ ಹೋಗಲು ಸಾಧ್ಯವಿಲ್ಲದೆ ಬೆಳಗ್ಗೆ ಹಾಲು ಮಾರುತ್ತಾ, ಹೂ-ತರಕಾರಿ-ಹಣ್ಣು ಮಾರುತ್ತಾ, ಗ್ಯಾರೇಜ್ ಗಳಲ್ಲಿ, ಕಾರ್ಖಾನೆಗಳಲ್ಲಿ ದಿನಗೂಲಿಗಳಾಗಿ ದುಡಿಯುತ್ತಿರುವ ಮಕ್ಕಳು ಇದ್ದಾರೆ. ಈ ಮಕ್ಕಳು ದುಡಿಮೆಯಲ್ಲಿ ತೊಡಗಿದ್ದಾರೆ ಎಂದರೆ, ದೇಶದ-ರಾಜ್ಯದ ಆರ್ಥಿಕ ಉತ್ಪತ್ತಿಯಲ್ಲಿ ತೊಡಗಿದ್ದಾರೆ ಅಂತಲೇ ಅರ್ಥ. ಪ್ರತಿದಿನ ಬೆಳಗ್ಗೆ ಎದ್ದು ಕೊಟ್ಟಿಗೆಯಲ್ಲಿ ಸೆಗಣಿ ಬಾಚಿ, ಹಾಲು ಕರೆದು, ಮನೆಗಳಿಗೆ ಹಾಲು ಹಾಕಿ ಶಾಲೆಗೆ ಬರುವ ಮಕ್ಕಳು ಏಕ ಕಾಲಕ್ಕೆ ಮನೆಯ ಮತ್ತು ದೇಶದ ಆರ್ಥಿಕ ಅಗತ್ಯಗಳನ್ನು ಈಡೇರಿಸಿ ಬರುತ್ತಾರೆ. ಬೆಳಗ್ಗೆ ಎದ್ದು ನೇರವಾಗಿ ತಿಂಡಿ ತಿಂದು, ಬಸ್ಸು-ಕಾರುಗಳಲ್ಲಿ ಶಾಲೆಗೆ ಬರುವ ಮಕ್ಕಳಿಗಿಂತ ಸೆಗಣಿ ಬಾಚಿ ಶಾಲೆಗೆ ಬರುವ ಮಕ್ಕಳು ಶೇ50 ರಷ್ಟು ಅಂಕ ಗಳಿಸಿದರೂ ಕೂಡ ಇವರ ಸಾಮಾಜಿಕ ಕೊಡುಗೆ ದೊಡ್ಡದಾಗಿರುತ್ತದೆ. ಆದ್ದರಿಂದ ಪ್ರತಿಭೆ ಅಂದ ಕೂಡಲೇ ಮಾರ್ಕ್ಸ್ ಕಾರ್ಡ್ ಮಾತ್ರ ಅಲ್ಲ ಎನ್ನುವುದನ್ನು ನಾವು ಮರೆಯಬಾರದು.

ಹಾಗೆಯೇ, ಇಂದು ಪುರಸ್ಕಾರಗೊಳ್ಳುತ್ತಿರುವ ಮಕ್ಕಳು ಒಂದು ಮಾತು ನೆನಪಿಡಬೇಕು.  ಕಲಿಕೆಯ ಕುತೂಹಲ ಮತ್ತು ಅಧ್ಯಯನಶೀಲತೆ ಇಲ್ಲದಿದ್ದರೆ ನಿಮ್ಮೊಳಗಿನ ಪ್ರತಿಭೆ ಬಾಡುತ್ತದೆ. ಮೊಬೈಲ್, ಟ್ಯಾಬ್ ಗಳ ಗೀಳು ನಿಮ್ಮೊಳಗಿನ ಸೃಜನಶೀಲತೆಯನ್ನು ಕೊಂದು ಪ್ರತಿಭಾಶೂನ್ಯರನ್ನಾಗಿಸುತ್ತದೆ. ಇಲ್ಲಿರುವವರೆಲ್ಲಾ ಪತ್ರಕರ್ತರ ಮಕ್ಕಳೇ‌ ಆಗಿರುವುದರಿಂದ ಪತ್ರಕರ್ತ ಲಂಕೇಶ್ ಅವರ ಉದಾಹರಣೆಯನ್ನೇ ಕೊಡುತ್ತೇನೆ.

ಲಂಕೇಶ್ ಅವರು ನಿಧನರಾಗಿ ಅವರ  ಮೃತದೇಹವನ್ನು ಹಾಸಿಗೆಯಿಂದ ಮೇಲೆತ್ತಿದಾಗ ಕೆಳಗೆ “ಕನ್ನಡದ ಭಾಷಾ ವಿಜ್ಞಾನಿ ಡಿ.ಎನ್.ಶಂಕರಭಗಟ್ಟರ ” ಕನ್ನಡ ಶಬ್ದ ರಚನೆ” ಪುಸ್ತಕವಿತ್ತು. ಅಷ್ಟೊತ್ತಿಗಾಗಲೇಲಂಕೇಶ್ ಅವರ ಒಂದು ಕಣ್ಣು ಪೂರ್ತಿ ಹೋಗಿತ್ತು. ಮತ್ತೊಂದು ತೊಂದರೆ ಕೊಡುತ್ತಿತ್ತು. ಆದರೂ ಸಾವಿನ ಕೊನೆ ಕ್ಷಣದವರೆಗೂ ನೆಪ ಹೇಳದೆ ಓದುತ್ತಿದ್ದರು. ನಿಧನರಾಗುವ ಕೊನೆ ಕ್ಷಣದವರೆಗೂ ಎರಡು ಲೇಖನಗಳನ್ನು ಬರೆದು ಕಣ್ಣು ಮುಚ್ಚಿದರು.

20 ವರ್ಷಗಳ ನಿರಂತರ ಬರವಣಿಗೆ ಲಂಕೇಶ್ ಅವರನ್ನು ಕನ್ನಡ ಜಗತ್ತಿನ ಅತಿ ಎತ್ತರದ ಸ್ಥಾನದಲ್ಲಿ ಇರಿಸಿತ್ತು. ಹಣ, ಖ್ಯಾತಿ, ಗೌರವ, ಪ್ರಚಾರ, ಪ್ರಸಿದ್ಧಿ,  ಘನತೆ ಎಲ್ಲವೂ ದೊರಕಿತ್ತು. ಬೇಕಾಗಿದ್ದದ್ದು ಇನ್ನೇನೂ ಬಾಕಿ ಇರಲಿಲ್ಲ. ಆದರೂ ಒಂದೇ ಕಣ್ಣಲ್ಲಿ ಕೊನೆ ಉಸಿರಿನವರೆಗೂ ಓದಿದರು.

ಅಷ್ಟು ಮಾತ್ರವಲ್ಲ, “2000 ಜನವರಿ 25 ರಂದು ನಿಧನರಾದ ಲಂಕೇಶ್, ಜನವರಿ 24 ರ ಕೊನೆಯ ಸಂಚಿಕೆಯನ್ನು ರಾತ್ರಿ ಪೂರ್ತಿಯಾಗಿ ಮುಗಿಸಿ ಹೋದರು. ಲಂಕೇಶ್ ಅವರನ್ನು ರೂಪಿಸಿದ್ದು ಅವರ ಬಹುರೂಪಿ ಓದು. ತನ್ನ ಕಾಲಮಾನದ ಎಲ್ಲಾ ವಯೋಮಾನದವರ ಬರವಣಿಗೆಯನ್ನು ಓದುತ್ತಿದ್ದರು.‌ ಕತೆ, ನಾಟಕ, ಲೇಖನ, ಅಂಕಣ,‌ಕಾವ್ಯ, ವಿಮರ್ಷೆ, ಭಾಷಾಂತರ ಸೇರಿ ವೈವಿದ್ಯಮಯ ಬರವಣಿಗೆ ಲಂಕೇಶ್ ಅವರಿಂದ ಸಾಧ್ಯವಾಗಿದ್ದು ಅವರ ವೈವಿದ್ಯಮಯ ಓದು, ಚಳವಳಿ ಮತ್ತು ಚಿಂತನೆಯಿಂದ.

ನಾವೆಲ್ಲಾ ಶಾಲೆಯಲ್ಲಿ ಓದುವಾಗ ಬೆಲೆ ಏರಿಕೆ ವಿರುದ್ಧ, ಬಸ್ ದರ ಏರಿಕೆ ವಿರುದ್ಧ ಪ್ರತಿಭಟನೆಗಳು ನಡೆದಾಗ ಆ ಬಗ್ಗೆ ತಿಳಿದುಕೊಳ್ಳುತ್ತಿದ್ದೆವು. ನಮ್ಮ ಅಪ್ಪ ಅಮ್ಮ ದುಡಿದ ಹಣ ಎಲ್ಲಿ, ಹೇಗೆ ವ್ಯಯವಾಗುತ್ತದೆ ಎನ್ನುವುದನ್ನು ತಿಳಿದುಕೊಳ್ಳುತ್ತಿದ್ದೆವು. ಆ ಮೂಲಕ ನಮ್ಮ ಸಾಮಾಜಿಕ ಪ್ರಜ್ಞೆ ಬೆಳೆಯುತ್ತಿತ್ತು. ಈಗ ಯಾವುದಾದರೂ ಸ್ಟ್ರೈಕ್ ಆಗಿ ಶಾಲೆ-ಕಾಲೇಜಿಗೆ ರಜೆ ಕೊಟ್ಟರೆ ಸೀದಾ ಮೊಬೈಲ್ ಹಿಡ್ಕೊಂಡು ಕೂರುವ, ಮಾಲ್ ಗಳಿಗೆ ಓಡುವವರೇ ಹೆಚ್ಚು. ಈ ಮಕ್ಕಳ ಸಾಮಾಜಿಕ ತಿಳುವಳಿಕೆ ಬೆಳೆಯುವುದೇ ಇಲ್ಲ. ಇವರಿಗೆ ರಾಜ್ಯದ ಮುಖ್ಯಮಂತ್ರಿ ಯಾರು, ದೇಶದ ರಾಷ್ಟ್ರಪತಿ, ಪ್ರಧಾನ ಮಂತ್ರಿ ಯಾರು ಎನ್ನುವುದೇ ಗೊತ್ತಿರುವುದಿಲ್ಲ.

ಇಂಥಾ ಮೊಬೈಲ್ ಮಕ್ಕಳು ಸಮಾಜಮುಖಿಗಳಾಗುವುದಿಲ್ಲ. ಬದಲಿಗೆ ಸಮಾಜಕ್ಕೆ ಮತ್ತು ಕುಟುಂಬಕ್ಕೂ ಹೊರೆ ಆಗುತ್ತಾರೆ. ಇವತ್ತು ಇಲ್ಲಿ ಪುರಸ್ಕೃತರಾದ ಮಕ್ಕಳು ಸಮಾಜಮುಖಿಗಳಾಗುತ್ತೀರಿ ಎನ್ನುವ ಭರವಸೆಯಿದೆ ಎಂದರು.

More articles

Latest article