ಆರ್‌ ಸಿಬಿ ಕಾಲ್ತುಳಿತ: ನಿರ್ಲಕ್ಷ್ಯ ತೋರಿದ ಪೊಲೀಸರ ವಿರುದ್ಧ ತನಿಖೆ ನಡೆಸಲು ಆಯೋಗ ಶಿಫಾರಸು

Most read

ಬೆಂಗಳೂರು: ಐಪಿಎಲ್‌ ಕ್ರಿಕೆಟ್‌ ನಲ್ಲಿ ಗೆಲುವು ಸಾಧಿಸಿದ್ದ ಆರ್‌ ಸಿಬಿ ತಂಡಕ್ಕೆ ಹಮ್ಮಿಕೊಂಡಿದ್ದ ಸಂಭ್ರಮಾಚರಣೆ ವೇಳೆ ನಗರದ  ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ್ದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯ ನಿರ್ಲಕ್ಷ್ಯ ತೋರಿದ ಪೊಲೀಸರ ವಿರುದ್ಧ ಎಫ್‌ ಐ ಆರ್‌ ದಾಖಲಿಸಿ ತನಿಖೆಗೆ ಆದೇಶಿಸಬೇಕೆಂದು ನ್ಯಾಯಮೂರ್ತಿ ಮೈಕಲ್‌ ಕುನ್ಹಾ ನೇತೃತ್ವದ ಆಯೋಗ ಶಿಫಾರಸು ಮಾಡಿದೆ.

ಈ ಪ್ರಕರಣ ಕುರಿತು ವರದಿ ನೀಡಲು ರಾಜ್ಯ ಸರ್ಕಾರ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಮೈಕಲ್‌ ಕುನ್ಹಾ ನೇತೃತ್ವದ ಏಕ ಸದಸ್ಯ ಆಯೋಗ ರಚಿಸಿತ್ತು. ಇವರು ಸಲ್ಲಿಸಿರುವ ವರದಿಯಲ್ಲಿ ಕಾಲ್ತುಳಿತಕ್ಕೆ ಪೊಲೀಸರ ನಿರ್ಲಕ್ಷ್ಯವೇ ಕಾರಣ ಎಂದು ಬೊಟ್ಟು ಮಾಡಿದೆ.

ಕರ್ತವ್ಯ ನಿರ್ವಹಣೆ ಮಾಡುವಲ್ಲಿ ಲೋಪವೆಸಗಿರುವ ಪೊಲೀಸ್‌ ಉನ್ನತಾಧಿಕಾರಿಗಳ ಮೇಲೂ ಎಫ್‌ ಐ ಆರ್‌ ದಾಖಲಿಸಿ ತನಿಖೆಗೆ ಆದೇಶ ನೀಡಬೇಕೆಂದು ಶಿಫಾರಸು ಮಾಡಲಾಗಿದೆ. ಕ್ರೀಡಾಂಗಣದ ಒಳಗೆ 79 ಪೊಲೀಸರು ಮಾತ್ರ ಇದ್ದರು. ಹೊರಗೂ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಿರಲಿಲ್ಲ. ತುರ್ತು ವಾಹನ, ಆಂಬುಲೆನ್ಸ್‌ ವ್ಯವಸ್ಥೆ ಅಪೂರ್ಣವಾಗಿತ್ತು. ಮಧ್ಯಾಹ್ನ 3:25ಕ್ಕೆ ಕಾಲ್ತುಳಿತ ಸಂಭವಿಸಿದ್ದರೂ. ಸಂಜೆ 5:30ರವರೆಗೆ ಬೆಂಗಳೂರು ಪೊಲೀಸ್‌‍ ಆಯುಕ್ತರಿಗೆ ಮಾಹಿತಿ ಇರಲಿಲ್ಲ. 4 ಗಂಟೆಗೆ ಜಂಟಿ ಪೊಲೀಸ್‌‍ ಅಯುಕ್ತರು ಕ್ರೀಡಾಂಗಣಕ್ಕೆ ಬಂದಿದ್ದರು ಎಂದು ವರದಿಯಲ್ಲಿ ಹೇಳಲಾಗಿದೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬೃಹತ್‌ ಮಟ್ಟದ ಕಾರ್ಯಕ್ರಮವನ್ನು ಮಾಡಿದ್ದು ಸರಿಯಲ್ಲ. ಗೇಟ್‌ ಗಳು ಅತ್ಯಂತ ಚಿಕ್ಕದಾಗಿದ್ದು, ಬೆಂಕಿ ಅವಘಡ ಸಂಭವಿಸಿದರೆ ಮುನ್ನೆಚ್ಚರಿಕೆ ವ್ಯವಸ್ಥೆ ಇರಲಿಲ್ಲ. ಕ್ರೀಡಾಂಗಣದ ಭದ್ರತೆಗೆ 1,650 ಪೊಲೀಸರನ್ನು ನಿಯೋಜಿಸಲಾಗಿತ್ತು ಎನ್ನುವುದು ಸುಳ್ಳು. 800ಕ್ಕಿಂತ ಕಡಿಮೆ ಪೊಲೀಸರನ್ನು ನಿಯೋಜನೆ ಮಾಢಲಾಗಿತ್ತು. ಆರ್‌ ಸಿಬಿ, ಡಿಎನ್‌ ಎ, ಕೆಎಸ್‌ ಸಿಎ ಮತ್ತು ಪೊಲೀಸರ ವಿರುದ್ಧ ದಂಡನೀಯ ಪ್ರಕರಣ ದಾಖಲು ಮಾಡಬಹುದು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಈ ದುರಂತಕ್ಕೆ ಕೆಎಸ್‌‍ ಸಿಎ, ಡಿಎನ್‌ ಎ, ಆರ್‌ ಸಿಬಿ ಹಾಗೂ ಪೊಲೀಸರು ನೇರ ಹೊಣೆಯಾಗಿದ್ದು, ಕಾರ್ಯಕ್ರಮ ನಡೆಸುವುದು ಅಸಾಧ್ಯವೆಂದು ತಿಳಿದಿದ್ದರೂ ಎಲ್ಲರೂ ಶಾಮೀಲಾಗಿ ಕಾರ್ಯಕ್ರಮ ನಡೆಸಿದ್ದಾರೆ. ಈ ಎಲ್ಲ ಸಂಸ್ಥೆಗಳ ಕರ್ತವ್ಯ ಲೋಪ, ನಿರ್ಲಕ್ಷ್ಯತನದ ಪರಮಾವಧಿ ಎದ್ದು ಕಾಣುತ್ತಿದೆ ಎಂದೂ ಹೇಳಿದೆ.

ಯೋಜನೆ, ಸಮನ್ವಯ ಮತ್ತು ಜನಸಂದಣಿ ನಿರ್ವಹಣೆಯಲ್ಲಿನ ಲೋಪಗಳನ್ನು ತನಿಖೆ ಮಾಡಲು ಡಿ.ಕುನ್ಹಾ ಆಯೋಗಕ್ಕೆ ಒಂದು ತಿಂಗಳ ಕಾಲಾವಕಾಶ ನೀಡಲಾಗಿತ್ತು. ವಿಚಾರಣೆಯ ಅವಧಿಯಲ್ಲಿ ಆಯೋಗ ಸ್ಥಳ ಪರಿಶೀಲನೆ ನಡೆಸಿತ್ತು. ಪ್ರತ್ಯಕ್ಷದರ್ಶಿಗಳು, ಪೊಲೀಸ್‌‍ ಅಧಿಕಾರಿಗಳು, ಕೆಎಸ್‌‍ ಸಿಎ ಅಧಿಕಾರಿಗಳು ಮತ್ತು ಸರ್ಕಾರಿ ಪ್ರತಿನಿಧಿಗಳಿಂದ ಹೇಳಿಕೆಗಳನ್ನು ಪಡೆದುಕೊಂಡಿತ್ತು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಎರಡು ಸಂಪುಟಗಳ ವರದಿಯನ್ನು ನೀಡಲಾಗಿದೆ. ಜುಲೈ 17ರಂದು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ವರದಿ ಕುರಿತು ಚರ್ಚೆ ನಡೆಯಲಿದೆ ಎಂದು ಮುಖ್ಯಮಂತ್ರಿಗಳೇ ಹೇಳಿದ್ದಾರೆ.  ಈಗಾಗಲೇ ಆರ್‌ ಸಿ ಬಿ, ಕೆ ಎಸ್‌ ‍ಸಿ ಎ ಮತ್ತು ಡಿ ಎನ್‌ ಎ ಎಂಟರ್‌ ಟೈನೆಂಟ್‌ ವಿರುದ್ಧ ಎಫ್‌ ಐ ಆರ್‌ ದಾಖಲಿಸಲಾಗಿದೆ.

ಅಂದಿನ ಬೆಂಗಳೂರು ಪೊಲೀಸ್‌‍ ಆಯುಕ್ತರು ಮತ್ತು ಇತರ ಇಬ್ಬರು ಐಪಿಎಸ್‌‍ ಅಧಿಕಾರಿಗಳು ಸೇರಿದಂತೆ ಐವರು ಪೊಲೀಸ್‌‍ ಅಧಿಕಾರಿಗಳನ್ನು ಕರ್ತವ್ಯ ನಿರ್ಲಕ್ಷ್ಯ ತೋರಿದ ಆರೋಪದ ಮೇಲೆ ಸೇವೆಯಿಂದ ಅಮಾನತುಗೊಳಿಸಲಾಗಿದೆ.

More articles

Latest article