ಬೆಂಗಳೂರು: ಕಿರುತೆರೆ ನಟಿ ಶೃತಿ ಅವರಿಗೆ ಆಕೆಯ ಪತಿಯೇ ಚಾಕುವಿನಿಂದ ಇರಿದು ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ವರದಿಯಾಗಿದೆ. ಪತ್ನಿಯ ಶೀಳ ಶಂಕಿಸಿ ಪತಿ ಅಮರೇಶ್ ಆಕೆಯ ಮೇಲೆ ಪೆಪ್ಪರ್ ಸ್ಪ್ರೇ ಎರಚಿ ಚಾಕುವಿನಿಂದ ಇರಿದಿದ್ದಾನೆ.
ಬೆಂಗಳೂರಿನ ಹನುಮಂತ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮುನೇಶ್ವರ ಲೇಔಟ್ ನಲ್ಲಿ ಜುಲೈ 4 ರಂದು ನಡೆದಿರುವ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಹನುಮಂತ ನಗರ ಪೊಲೀಸ್ ಠಾಣೆಯಲ್ಲಿ ಶ್ರುತಿ ದೂರು ನೀಡಿದ್ದು, ಪೊಲೀಸರು ಆರೋಪಿ ಅಮರೇಶ್‌ನನ್ನು ಬಂಧಿಸಿದ್ದಾರೆ. ಶೃತಿ ಸದ್ಯ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರು ಅಮೃತಧಾರೆ, ಸೇರಿದಂತೆ ಹಲವು ಸೀರಿಯಲ್ ಗಳಲ್ಲಿ ನಟಿಸಿದ್ದಾರೆ. ಜತೆಗೆ ಖಾಸಗಿ ವಾಹಿನಿಯೊಂದರಲ್ಲಿ ನಿರೂಪಕಿಯಾಗಿಯೂ ಆಗಿದ್ದಾರೆ.)
ಶೃತಿ ಮತ್ತು ಅಮರೇಶ್ 20 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಇವರಿಗೆ ಹನಿ ಮತ್ತು ನಿಧಿ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಹನುಮಂತ ನಗರದಲ್ಲಿ ಮನೆಯನ್ನು ಲೀಸ್ ಗೆ ಪಡೆದು ವಾಸವಿದ್ದರು. ಶೃತಿ ಧಾರಾವಾಹಿಗಳಲ್ಲಿ ನಟಿಸಲು ಆರಂಭಿಸುತ್ತಿದ್ದಂತೆ ಇಬ್ಬರ ನಡುವೆ ಕಲಹ ಏರ್ಪಟ್ಟಿತ್ತು. ಇಬ್ಬರ ನಡುವೆ ಹೊಂದಾಣಿಕೆ ಇರಲಿಲ್ಲ. ಹೀಗಾಗಿ ಗಂಡನಿಂದ ದೂರಾಗಿ ಶೃತಿ ಅಣ್ಣನ ಮನೆಯಲ್ಲಿ ವಾಸವಿದ್ದರು. ಇಬ್ಬರ ನಡುವೆ ಲೀಸ್ ಹಣ ಹಾಗೂ ಆಭರಣಗಳಿಗಾಗಿ ಜಗಳ ನಡೆದಿತ್ತು ಎಂದು ದೂರಿನಲ್ಲಿ ಹೇಳಲಾಗಿದೆ.
ಕಳೆದ ಗುರುವಾರ ದಂಪತಿ ನಡುವೆ ರಾಜಿ ಸಂದಾನ ನಡೆದಿದ್ದು ಒಂದಾಗಿದ್ದರು. ಆದರೆ, ಇಬ್ಬರೂ ಒಂದಾದ ಮರುದಿನವೇ ಅಮರೇಶ್ ಪತ್ನಿಗೆ ಇರಿದಿದ್ದಾನೆ. ಈ ಅವಧಿಯಲ್ಲಿ ಮಕ್ಕಳಿಬ್ಬರು ಕಾಲೇಜಿಗೆ ಹೋಗಿದ್ದರು.
ಜುಲೈ 4 ರಂದು ಬೆಳಗ್ಗೆ 7 ಗಂಟೆಗೆ ಮಕ್ಕಳು ಕಾಲೇಜಿಗೆ ಹೋಗಿದ್ದರು. ಹೊರಗೆ ಹೋಗಿದ್ದ ಪತಿ ಅಮರೇಶ್ ಮಧ್ಯಾಹ್ನ ಸುಮಾರು 12 ಗಂಟೆಗೆ ಮರಳಿದ್ದರು. ಬಾಗಿಲು ತೆರೆಯುತ್ತಿದ್ದಂತೆ ಪೆಪ್ಪರ್ ಸ್ಪ್ರೇಯನ್ನು ಮುಖಕ್ಕೆ ಹೊಡೆದಿದ್ದರು. ಇದರ ಉರಿಯಿಂದಾಗಿ ಕಣ್ಣು ಬಿಡಲು ಆಗಲಿಲ್ಲ. ಆಗ ಚಾಕುವಿನಿಂದ ಪಕ್ಕೆಲುಬು, ಎಡಭಾಗದ ತೊಡೆ ಹಾಗೂ ಕುತ್ತಿಗೆಗೆ ಚಾಕುವಿನಿಂದ ಇರಿದಿದ್ದಾನೆ. ನನ್ನ ಅರಚಾಟ ಕೇಳಿ ನೆರೆಹೊರೆಯವರು ಬಂದು ನನ್ನನ್ನು ಕಾಪಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.