ಬೆಂಗಳೂರು: ಮಂಡ್ಯದಲ್ಲಿ ನಡೆದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿರುವುದು ಬೆಳಕಿಗೆ ಬಂದಿದೆ. ಮಾರುಕಟ್ಟೆ ದರಕ್ಕಿಂತ ದುಬಾರಿ ದರಕ್ಕೆ ಖರೀದಿ ಮತ್ತು ಬಾಡಿಗೆ ನೀಡಿರುವುದು ಪತ್ತೆಯಾಗಿದೆ.
ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ (ಕೆಟಿಟಿಪಿ) ಕಾಯ್ದೆಯ 4ಜಿ ವಿನಾಯಿತಿ ಪಡೆದು, ಗುತ್ತಿಗೆದಾರರು ಹಾಗೂ ಏಜೆನ್ಸಿಗಳೊಂದಿಗೆ ಕೆಎಸ್ ಎಂಸಿಎ, ಸಾಹಿತ್ಯ ಪರಿಷತ್ ಮತ್ತು ಸಮಿತಿಗಳು ಒಳ ಒಪ್ಪಂದ ಮಾಡಿಕೊಂಡು ಹಣ ದುರುಪಯೋಗ ಮಾಡಿರುವುದು ಕಂಡು ಬಂದಿದೆ.ಈ ಸಂಬಂಧ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಮತ್ತು ಆರ್ಥಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್ ಅವರಿಗೆ ಈ ಬಗ್ಗೆ ದೂರು ಸಲ್ಲಿಸಲಾಗಿದೆ. ಎಫ್.ಎಂ. ಇಟಗಿ ಎಂಬವರು ಎಂ. ಬಿ. ಪಾಟೀಲ ಅವರಿಗೆ ಸಲ್ಲಿಸಿರುವ ದೂರಿಗೆ ಸಂಬಂಧಿಸಿದಂತೆ ವಿವರಣೆ ನೀಡುವಂತೆ ಕರ್ನಾಟಕ ಸ್ಟೇಟ್ ಮಾರ್ಕೆಟಿಂಗ್ ಕಮ್ಯೂನಿಕೇಷನ್ ಆ್ಯಂಡ್ ಅಡ್ವಟೈಸಿಂಗ್ ಲಿಮಿಟೆಡ್ (ಕೆಎಸ್‌ಎಂಸಿಎ) ವ್ಯವಸ್ಥಾಪಕ ನಿರ್ದೇಶಕರಿಗೆ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ನಿರ್ದೇಶನ ನೀಡಿದ್ದಾರೆ. ಶಿವಮೊಗ್ಗದ ಬಿ. ಚಂದ್ರೇಗೌಡ ಅವರು ಆರ್ಥಿಕ ಇಲಾಖೆಗೆ ಸಲ್ಲಿಸಿದ ದೂರಿನ ಮೇಲೆ ಕ್ರಮ ತೆಗೆದುಕೊಳ್ಳುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿ ತಮ್ಮ ಇಲಾಖೆಯ ನಿರ್ದೇಶಕರಿಗೆ ಸೂಚನೆ ನೀಡಿದ್ದಾರೆ.
2024ರ ಡಿಸೆಂಬರ್ 20ರಿಂದ 22ರವರೆಗೆ ಮಂಡ್ಯದಲ್ಲಿ ಜರುಗಿದ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಒಟ್ಟು ರೂ. 29.65 ಕೋಟಿ ವೆಚ್ಚವಾಗಿತ್ತು. ಅದರಲ್ಲಿ ರೂ.3.17 ಕೋಟಿ ಜಿಎಸ್‌ಟಿ,ರೂ. ₹1.08 ಕೋಟಿ ಕೆಎಸ್ ಎಂಸಿಎ ಸೇವಾ ಶುಲ್ಕ ಸೇರಿದೆ. ಸರ್ಕಾರ ಎರಡು ಹಂತಗಳಲ್ಲಿ ಒಟ್ಟು ರೂ.30 ಕೋಟಿ ಅನುದಾನ ನೀಡಿತ್ತು. ಜತೆಗೆ ಇತರ ಮೂಲಗಳಿಂದ ಸೇರಿ ಒಟ್ಟು ರೂ.32.74 ಕೋಟಿ ಸಂಗ್ರಹವಾಗಿತ್ತು.
ಸಮ್ಮೇಳನದ ಅಗತ್ಯವಾಗಿದ್ದ ಶಾಮಿಯಾನ, ಸೇರಿದಂತೆ ವಿವಿಧ ಸಾಮಗ್ರಿಗಳೀಗೆ ಮಾರುಕಟ್ಟೆ ದರಕ್ಕಿಂತ ಮೂರು ಪಟ್ಟು ದರ ವಿಧಿಸಿ ಬಿಲ್ ಸಲ್ಲಿಸಲಾಗಿದೆ.ಈ ಬಿಲ್‌ಗಳಿಗೆ ಕೆಎಸ್ ಎಂಸಿಎ ಹಣ ಪಾವತಿಸಿದೆ. ಸಮರ್ಪಕ ತನಿಖೆ ನಡೆದರೆ ತಪ್ಪಿತಸ್ಥರು ಯಾರು ಎನ್ನುವುದನ್ನು ಪತ್ತೆ ಹಚ್ಚಿ ಶಿಕ್ಷೆ ವಿಧಿಸಬೇಕು ಎಂದು ಕನ್ನಡ ಪರ ಹೋರಾಟಗಾರರು ಆಗ್ರಹಪಡಿಸಿದ್ದಾರೆ.