ಬೆಂಗಳೂರು: ಹಠಾತ್ ಸಾವನ್ನು ಇನ್ನು ಮುಂದೆ ಅಧಿಸೂಚಿತ ರೋಗವನ್ನಾಗಿ ಪರಿಗಣಿಸಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಹೃದ್ರೋಗಗಳಿಂದ ಸಂಭವಿಸುತ್ತಿರುವ ಹಠಾತ್ ಸಾವುಗಳ ಬಗ್ಗೆ ಅಧ್ಯಯನಕ್ಕಾಗಿ ರಚಿಸಲಾಗಿದ್ದ ತಜ್ಞರ ಸಮಿತಿ ವರದಿಯನ್ನು ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹೃದಯಾಘಾತದಿಂದ ಮೃತಪಟ್ಟವರ ಮರಣೋತ್ತರ ಪರೀಕ್ಷೆಯನ್ನು ಕಡ್ಡಾಯಗೊಳಿಸಲಾಗುವುದು. ಪಠ್ಯಪುಸ್ತಕದಲ್ಲಿ ಹೃದಯಾಘಾತದ ಕುರಿತು ಪ್ರತ್ಯೇಕ ಪಠ್ಯ ಅಳವಡಿಸಲು ಶಿಕ್ಷಣ ಇಲಾಖೆಗೆ ಸೂಚಿಸಲಾಗುವುದು ಎಂದು ತಿಳಿಸಿದರು. ಹೃದಯ ಸಂಬಂಧದ ಕಾಯಿಲೆಗಳನ್ನು ತಪ್ಪಿಸಲು ಶಾಲೆಗಳಲ್ಲಿ ,ಸರ್ಕಾರಿ ನೌಕರರು, ಗುತ್ತಿಗೆ ನೌಕರರಿಗೆ ವಾರ್ಷಿಕ ನಿಯಮಿತ ತಪಾಸಣೆಗೆ ಕ್ರಮ ಕೈಗೊಳ್ಳುವುದಾಗಿ ಅವರು ಹೇಳಿದರು.
ಎಲ್ಲ ತಾಲ್ಲೂಕು ಆಸ್ಪತ್ರೆಗಳಿಗೆ ಹೃದಯ ಜ್ಯೋತಿ ಯೋಜನೆ ವಿಸ್ತರಿಸಲಾಗುವುದು. ಕೋವಿಡ್ ಪಾಸಿಟಿವ್ ಬಂದವರಲ್ಲಿ ಕೆಲವರಿಗೆ ಹೃದಯಾಘಾತ ಆಗಿದೆ. ಆದರೆ, ಅದು ಕೋವಿಡ್ ಲಸಿಕೆ ಯಿಂದ ಅಲ್ಲ. ಕೋವಿಡ್ ಲಸಿಕೆಯಿಂದ ಜನರಿಗೆ ಅನುಕೂಲ ಆಗಿದೆ. ಕೋವಿಡ್ ಬಂದಾಗ ಸೇವಿಸಿದ ಬೇರೆ ಔಷಧಗಳಿಂದ ಪರಿಣಾಮ ಆಗಿದೆ. ಬೊಜ್ಜು, ಮಧುಮೇಹ ಮತ್ತಿತರ ಸಮಸ್ಯೆಗಳೂ ಹೃದಯಾಘಾತಕ್ಕೆ ಕಾರಣವಾಗಿದೆ ಎಂದರು.
ಹಠಾತ್ ಹೃದಯಘಾತದ ಕುರಿತು ತನಿಖೆ ನಡೆಸುವಂತೆ ಮುಖ್ಯಮಂತ್ರಿ ಆದೇಶಿಸಿದ್ದರು. ಹೀಗಾಗಿ, ಡಾ. ರವೀಂದ್ರಾಥ್ ಅವರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು. ಈ ಸಮಿತಿ ವರದಿ ನೀಡಿದೆ ಎಂದರು.
ಜನರಲ್ಲಿ ಜಾಗೃತಿ ಮೂಡಿಸಲು ತಪಾಸಣೆಯನ್ನು ಹೆಚ್ಚಿಸಲಾಗುವುದು. 15 ವರ್ಷದೊಳಗಿನ ಮಕ್ಕಳಿಗೆ ವರ್ಷಕ್ಕೊಮ್ಮೆ ಹೃದಯದ ತಪಾಸಣೆ ನಡೆಸಲಾಗುವುದು. ಹುಟ್ಟಿನಿಂದಲೇ ಬಂದಿರುವ (ಕಾಂಜಿನೇಟಲ್ ಡಿಸೀಸ್) ಆರೋಗ್ಯ ಸಮಸ್ಯೆಗಳನ್ನು ಪತ್ತೆ ಹಚ್ಚಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಎಇಡಿಗಳು ಹೃದಯಾಘಾತದ ಸಂದರ್ಭದಲ್ಲಿ ತುರ್ತು ಚಿಕಿತ್ಸೆಗೆ ನೆರವಾಗಲಿವೆ ಎಂದರು.ಸರ್ಕಾರಿ ನೌಕರರು ಮತ್ತು ಗುತ್ತಿಗೆ ನೌಕರರಿಗೆ ವರ್ಷಕ್ಕೊಮೆ ಹೃದ್ರೋಗ, ರಕ್ತದೊತ್ತಡ, ಕ್ಯಾನ್ಸರ್ನಂತಹ ತಪಾಸಣೆ ನಡೆಸಲಾಗುವುದು. ಖಾಸಗಿ ವಲಯದಲ್ಲೂ ಪ್ರತೀವರ್ಷ ಈ ರೀತಿಯ ತಪಾಸಣೆಗೆ ನಿರ್ದೇಶನ ನೀಡುವುದಾಗಿ ಹೇಳಿದರು.
ಗೃಹ ಆರೋಗ್ಯ ಯೋಜನೆಯಲ್ಲೂ ಈ ತಪಾಸಣೆಗೆ ಒಳಪಡಿಸಲಾಗುತ್ತದೆ. ಮುಖ್ಯಮಂತ್ರಿಯವರ ಜೊತೆ ಚರ್ಚಿಸಿ ಮತ್ತಷ್ಟು ಉಪಕ್ರಮಗಳನ್ನು ಕೈಗೊಳ್ಳುವುದಾಗಿ ಹೇಳಿದರು. ಹೃದಯಾಘಾತಗಳಿಗೆ ಪರಿಸರ ಮಾಲಿನ್ಯ, ಧೂಮಪಾನ, ಜೀವನಶೈಲಿ ಪ್ರಮುಖ ಕಾರಣಗಳಾಗಿವೆ. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧಿಸಲಾಗಿದೆ ಎಂದರು.