ದೇವನಹಳ್ಳಿ ರೈತರ ಹೋರಾಟ: ನಿಮಗೆ ಮತ್ತಷ್ಟು ಕಾಲಾವಕಾಶ ಏಕೆ ಬೇಕು? ಸರ್ಕಾರಕ್ಕೆ ಶಿವಸುಂದರ್‌ ಪ್ರಶ್ನೆ

Most read

ಬೆಂಗಳೂರು: ದೇವನಹಳ್ಳಿಯಲ್ಲಿ ರೈತರು ನಡೆಸುತ್ತಿರುವ ಹೋರಾಟ ಕುರಿತು ಹಿರಿಯ ಹೋರಾಟಗಾರ ಚಿಂತಕ ಶಿವಸುಂದರ್‌ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಹಿರಂಗ ಪತ್ರ ಬರೆದಿದ್ದಾರೆ. ರೈತರು ಸಾವಿರ ದಿನಗಳಿಂದ ಹೋರಾಟ ನಡೆಸುತ್ತಿದ್ದರೂ ನಿರ್ಧಾರ ಕೈಗೊಳ್ಳಲು ನಿಮಗೆ ಮತ್ತಷ್ಟು ಕಾಲಾವಕಾಶ ಏಕೆ ಬೇಕು ಎಂದು ಪ್ರಶ್ನಿಸಿದ್ದಾರೆ. ಅವರ ಪತ್ರದ ಒಕ್ಕಣೆ ಹೀಗಿದೆ.

ಮಾನ್ಯ ಮುಖ್ಯಮಂತ್ರಿಗಳೇ…

ಸಾವಿರ ದಿನಗಳ ನಂತರವೂ, ಮತ್ತೆ ಹತ್ತು ದಿನಗಳ ಕಾಲಾವಕಾಶವೇಕೆ ಬೇಕು? ನೀವು ಮತ್ತು ಎಂಬಿ ಪಾಟೀಲರು, ಗುಡ್ ಕಾಪ್, ಬ್ಯಾಡ್ ಕಾಪ್ ಆತವಾಡುತ್ತಿದ್ದೀರಾ?

ದೇವನಹಳ್ಳಿಯ ಬಲವಂತದ ಭೂ ಸ್ವಾಧೀನಾ ವಿಷಯದ ಬಗ್ಗೆ ತಾವು ನಿನ್ನೆ ಸಂಬಂಧಪಟ್ಟ ಸಚಿವರ ಮತ್ತು ಅಧಿಕಾರಿಗಳ ಸಭೆ ನಡೆಸಿದ್ದು, ತಾವು ಹೋರಾಟಗಾರರ ಬಳಿ ಇನ್ನು ಹತ್ತು ದಿನ ಅವಕಾಶ ಕೇಳಿರುವುದು ಇಂದಿನ ಪತ್ರಿಕೆಗಳಲ್ಲಿ ವರದಿಯಾಗಿದೆ..

ಆದರೆ,

1.ಈಗಾಗಲೇ ದೇವನಹಳ್ಳಿ ಯ ರೈತರು ಸಾವಿರಕ್ಕೂ ಹೆಚ್ಚು ದಿನಗಳ ಕಾಲಾವಕಾಶ ಕೊಟ್ಟ ಮೇಲೆ ಇನ್ನು ಹತ್ತು ದಿನಗಳ ಕಾಲಾವಕಾಶವೇಕೆ ಬೇಕು?

2.ದೇವನಹಳ್ಳಿಗಳ ಭೂ ಸ್ವಾಧೀನವನ್ನು ಖಂಡಿಸಲು ವಿರೋಧ ಪಕ್ಷದ ನಾಯಕರಾದಾಗ ಒಂದು ದಿನದ ಕಾಲಾವಕಾಶವೂ ಕೇಳದವರು, ಮುಖ್ಯಮಂತ್ರಿಯಾದಾಗ ಹತ್ತು ದಿನಗಳೇಕೆ ಬೇಕು? ಅದೂ ಹೋರಾಟವೇ ಸಾವಿರ ದಿನಗಳನ್ನು ದಾಟಿರುವಾಗ…

3.ದೇವನಹಳ್ಳಿ ಯಲ್ಲಿ ಸರ್ಕಾರ ಬಲವಂತವಾಗಿ ವಶ ಪಡಿಸಿಕೊಳ್ಳುತ್ತಿರುವುದು :

-ಫಲವತ್ತಾದ ಭೂಮಿ,

-ರೈತರಿಗೆ ಕೊಡಲು ಸಮ್ಮತಿಯಿಲ್ಲ. -ಬಲವಂತದ ಭೂಸ್ವಾಧೀನಾ ಸಮಾಜವಾದವಲ್ಲ.

-ಸಂವಿಧಾನ ಬದ್ಧವಲ್ಲ…

ವಿಷಯ ಇಷ್ಟು ಸರಳವಿರುವಾಗ ಅದನ್ನು ಅರ್ಥ ಮಾಡಿಕೊಳ್ಳಲು, ಭೂ ಸ್ವಾಧೀನಾ ಕೈಬಿಡಲು ಹತ್ತು ದಿನಗಳೇಕೆ ಬೇಕು?

5.ಅಸಲು, ತಮ್ಮ UPA ಸರ್ಕಾರವೇ 2013 ರಲ್ಲಿ ಬಲವಂತದ ಭೂ ಸ್ವಾಧೀನಾ ಮಾಡುವಂತಿಲ್ಲ ಎಂಬ ಕಾಯಿದೆ ಮಾಡಿದ್ದರೂ, 2019 ರಲ್ಲಿ ನಿಮ್ಮ ಸರ್ಕಾರ ಕರ್ನಾಟಕದಲ್ಲಿ ಆ ಕಾಯಿದೆಗೆ ಕೇಂದ್ರದಲ್ಲಿ ಮೋದಿ ಸರ್ಕಾರ ಮಾಡಿದ ತಿದ್ದುಪಡಿಗಳನ್ನು ಮಾಡಿದ್ದೇಕೆ?

6.KIADB ಈವರೆಗೆ ಕರ್ನಾಟಕದಲ್ಲಿ ಬೇಜವಾಬ್ದಾರಿ ಯಿಂದ ವಶಪಡಿಸಿಕೊಂಡಿರುವ 30000 ಎಕರೆ ಜಾಗ ಖಾಲಿ ಬಿದ್ದಿದೆ ಎಂದು CAG ಯ  2017 ರ ಆಡಿಟ್ ವರದಿಯೇ ಹೇಳುತ್ತಿರುವಾಗ ಮತ್ತೆ ಹೆಚ್ಚುವರಿ ಭೂಮಿಯನ್ನು ದೇವನಹಳ್ಳಿಯಲ್ಲೂ ವಶಪಡಿಸಿಕೊಳ್ಳುತ್ತಿರುವುದೇಕೆ?

7.ಹೂಡಿಕೆದಾರರು ಕೇಳುವ ಕಡೆ, ಕೇಳುವಷ್ಟು ಜಮೀನು ಕೊಡಲೆಬೇಕಾಗುತ್ತದೆ ಎಂಬ ನೀತಿ ಪಾಲಿಸುವ ನಿಮ್ಮ ಸರ್ಕಾರಕ್ಕೂ ಬಿಜೆಪಿ ಸರ್ಕಾರಕ್ಕೂ ಏನು ವ್ಯತ್ಯಾಸ ಉಳಿಯುತ್ತದೆ?

8.ಹೀಗಾಗಿ ನೀವು ಹತ್ತು ದಿನಗಳ ಕಾಲಾವಕಾಶ ಕೇಳುತ್ತಿರುವುದು ಹೋರಾಟದ ಕಾವಿಗೆ ನೀರು ಸುರಿಯುವ , ರೈತರನ್ನು ಒಡೆಯುವ, ಭೂ ಸ್ವಾಧೀನಾ ಮಾಡಿಕೊಳ್ಳುವ ಕಾಂಗ್ರೆಸ್ಸಿನ ಹಳೆಯ ತಂತ್ರವೇ?

9.ನಿನ್ನೆಯ ಸಚಿವ- ಅಧಿಕಾರಿಗಳ ಸಭೆಯ ನಂತರ ಸರ್ಕಾರದ ಪರವಾಗಿ ಪ್ರತಿಕ್ರಿಯಿಸಿದ ಕೈಗಾರಿಕ ಮಂತ್ರಿ ಎಂ. ಬಿ. ಪಾಟೀಲ್, ಅಭಿವೃದ್ಧಿಗೆ ಭೂಮಿ ಬೇಕು, ರೈತರ ಮನವೊಲಿಸಲಾಗುವುದು ಎಂದಿರುವುದರ ಅರ್ಥವೇನು?

10.ರೈತಹೋರಾಟವನ್ನು ಮಣಿಸಲು ತಾವು ಮತ್ತು ಎಂಬಿ ಪಾಟೀಲರು ಗುಡ್ ಕಾಪ್- ಬ್ಯಾಡ್ ಕಾಪ್ (ಒಳ್ಳೆ ಪೊಲೀಸ್ – ಕೆಟ್ಟ ಪೊಲೀಸ್ )ಆಟ ಆಡುತ್ತಿದ್ದೀರಾ?

11.ಭಾರತದಲ್ಲಿ ಕರ್ನಾಟಕದಲ್ಲಿ ಇರುವುದು ಪ್ರಜೆಗಳ ಇಚ್ಛೆಯಂತೆ ನಡೆವ ಪ್ರಜಾತಂತ್ರವೋ? ಕಾರ್ಪೋರೆಟ್ ಗಳ ಕಾರ್ಪೋರೆಟೋಕ್ರಸಿಯೋ?

More articles

Latest article