ಮುಂಬೈ: ತ್ರಿಭಾಷಾ ನೀತಿಯ ಅನುಷ್ಠಾನ ಕುರಿತು ಹೊರಡಿಸಲಾಗಿದ್ದ ಆದೇಶಗಳನ್ನು ಮುಖ್ಯಮಂತ್ರಿ ದೇವೇಂದ್ರ ಫಡನವೀಸ್ ಸರ್ಕಾರ ಹಿಂಪಡೆದಿರುವ ಬಗ್ಗೆ ಪ್ರತಿಕಿಯಿಸಿರುವ ಶಿವಸೇನಾ (ಯುಬಿಟಿ) ಮುಖಂಡ ಸಂಜಯ್ ರಾವುತ್ ಭವಿಷ್ಯದಲ್ಲಿ ಅಂತಹ ನೀತಿಗಳನ್ನು ಸ್ವೀಕರಿಸುವುದಿಲ್ಲ ಎಂದು ಘೋಷಿಸಿದ್ದಾರೆ.
ಮಹಾರಾಷ್ಟ್ರದ ಶಾಲೆಗಳಲ್ಲಿ 1 ರಿಂದ 5ನೇ ತರಗತಿಯವರೆಗೆ ಹಿಂದಿ ಭಾಷೆಯನ್ನು ಕಲಿಸುವುದಕ್ಕೆ ಸಂಬಂಧ ಪಟ್ಟಂತೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಭಾನುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ತ್ರಿಭಾಷಾ ನೀತಿಯ ಅನುಷ್ಠಾನದ ಕುರಿತಾದ ಸರ್ಕಾರಿ ಆದೇಶಗಳನ್ನು ಹಿಂತೆಗೆದುಕೊಳ್ಳಲು ಫಡನವೀಸ್ ಸರ್ಕಾರ ನಿರ್ಧರಿಸಿತ್ತು.
ಭಾಷಾ ನೀತಿಯ ಕುರಿತು ಮುಂದಿನ ಮಾರ್ಗ ಸೂಚಿಸಲು ಶಿಕ್ಷಣ ತಜ್ಞ ನರೇಂದ್ರ ಜಾಧವ್ ನೇತೃತ್ವದಲ್ಲಿ ಸಮಿತಿಯನ್ನು ರಚಿಸುವುದಾಗಿ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ನಂತರ ಘೋಷಿಸಿದ್ದರು. ಫಡಣವೀಸ್ ಅವರು ಇಂತಹ ಸಮಿತಿಗಳು ಮತ್ತು ಎಸ್ ಐಟಿಗಳನ್ನು ರಚಿಸಲು ಇಷ್ಟಪಡುತ್ತಾರೆ. ಆದರೆ, ಏನನ್ನೂ ಜಾರಿ ಮಾಡುವುದಿಲ್ಲಎಂದು ರಾವುತ್ ವ್ಯಂಗ್ಯವಾಡಿದ್ದಾರೆ.
ಜಾಧವ್ ಅವರನ್ನು ಅರ್ಥಶಾಸ್ತ್ರಜ್ಞರಾಗಿ ಗೌರವಿಸಲಾಗುತ್ತದೆ. ಆದರೆ, ಅವರ ನೇತೃತ್ವದಲ್ಲಿ ರಚಿಸಲಾಗಿರುವ ಸಮಿತಿ ಅಪ್ರಸ್ತುತವಾಗುತ್ತದೆ. ಭವಿಷ್ಯದಲ್ಲಿ ತ್ರಿಭಾಷಾ ನೀತಿಯನ್ನು ನಾವು ಎಂದಿಗೂ ಸ್ವೀಕರಿಸುವುದಿಲ್ಲ ಎಂದು ರಾವುತ್ ಪ್ರತಿಪಾದಿಸಿದ್ದಾರೆ.
ಜುಲೈ 5 ರಂದು ಮುಂಬೈನಲ್ಲಿ ಶಿವಸೇನಾ (ಯುಬಿಟಿ) ಮತ್ತು ರಾಜ್ ಠಾಕ್ರೆ ಅವರ ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್ ಎಸ್) ಜಂಟಿಯಾಗಿ ‘ಮರಾಠಿ ವಿಜಯ್ ದಿವಸ್’ ಆಯೋಜಿಸಿವೆ. ಸಭೆಗೆ ಪ್ರಮುಖ ನಾಯಕರು ಮತ್ತು ಸಾರ್ವಜನಿಕರನ್ನು ಆಹ್ವಾನಿಸಲಾಗಿದೆ. ನಾವು ಕೇವಲ ಸಂಘಟಕರು. ಎಂಎನ್ ಎಸ್ ಮುಖ್ಯಸ್ಥ ರಾಜ್ ಠಾಕ್ರೆ ಮತ್ತು ನಮ್ಮ ನಾಯಕ ಉದ್ಧವ್ ಠಾಕ್ರೆ ಇಬ್ಬರೂ ಚರ್ಚೆ ನಡೆಸಲಿದ್ದಾರೆ ಎಂದು ರಾವುತ್ ತಿಳಿಸಿದ್ದಾರೆ.