ನವದೆಹಲಿ: ಮತದಾರರು ತಾವು ನೆಲಸಿದ ಕ್ಷೇತ್ರದಲ್ಲಿ ಮಾತ್ರ ಮತದಾರರ ಪಟ್ಟಿಯಲ್ಲಿ ಸ್ವಯಂ ನೋಂದಣಿ ಮಾಡಿಸಿಕೊಳ್ಳಬೇಕೇ ಹೊರತು ಸ್ವಂತ ಮನೆ ಅಥವಾ ಸ್ವಂತ ಊರಿನಲ್ಲಿ ಅಲ್ಲ ಎಂದು ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಮನವಿ ಮಾಡಿಕೊಂಡಿದ್ದಾರೆ. ಈ ವರ್ಷದ ಕೊನೆಯಲ್ಲಿ ಬಿಹಾರ ವಿಧಾನಸಭಾ ಚುನಾವಣೆ ನಡೆಯಲಿದ್ದು, ಚುನಾವಣಾ ಆಯೋಗವು ಮತದಾರರ ಪಟ್ಟಿಯ ವಿಶೇಷ ಪರಿಶೀಲನಾ ಕಾರ್ಯದಲ್ಲಿ ತೊಡಗಿರುವ ಹಿನ್ನೆಲೆಯಲ್ಲಿ ಈ ಹೇಳಿಕೆ ನೀಡಿದ್ದಾರೆ.
ಬೂತ್ ಮಟ್ಟದ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಜನಪ್ರತಿನಿಧಿ ಕಾಯ್ದೆ ಪ್ರಕಾರ, ಒಬ್ಬ ಮತದಾರನು ಸಾಮಾನ್ಯ ನಾಗರಿಕರಾಗಿದ್ದರೆ, ಒಂದು ವಿಧಾನಸಭಾ ಕ್ಷೇತ್ರದಲ್ಲಿ ಮಾತ್ರ ಮತದಾರರಾಗಿರಲು ಅವಕಾಶವಿದೆ. ವ್ಯಕ್ತಿಯು ದೆಹಲಿಯಲ್ಲಿ ನೆಲಸಿದ್ದು, ಪಾಟ್ನಾದಲ್ಲಿ ಮನೆ ಹೊಂದಿದ್ದರೆ ಅಂತಹ ಸಂದರ್ಭದಲ್ಲಿ ದೆಹಲಿಯಲ್ಲಿ ಮಾತ್ರ ಮತದಾರರ ಪಟ್ಟಿಯಲ್ಲಿ ನೋಂದಾಯಿಸಿಕೊಳ್ಳಬೇಕು ಎಂದಿದ್ದಾರೆ.
ಕೆಲವು ಮತದಾರರು ತಿಳಿದೋ ತಿಳಿಯದೆಯೋ ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ ನೋಂದಣಿ ಮಾಡಿಕೊಳ್ಳುವ ಮೂಲಕ ಮತದಾರರಾಗಿದ್ದಾರೆ. ಅಂತಹವರನ್ನು ಪತ್ತೆಹಚ್ಚಲು ಆಯೋಗವು ವಿಶೇಷ ಅಭಿಯಾನ ನಡೆಸುತ್ತಿದೆ.