ಕಾಲ್ತುಳಿತ ಅವಘಡ: ಸಾರ್ವಜನಿಕ ಸಭೆಗಳಲ್ಲಿ ಜನಸಂದಣಿ ನಿಯಂತ್ರಣಕ್ಕೆ ಹೊಸ ಮಾರ್ಗಸೂಚಿ ಬಿಡುಗಡೆ

Most read

ಬೆಂಗಳೂರು: ಆರ್‌ ಸಿ ಬಿಯಲ್ಲಿ ಗೆಲುವು ಸಾಧಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿಜಯೋತ್ಸವದ ಸಂದರ್ಭದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭವಿಸಿದ ಕಾಲ್ತುಳಿತದ ಹಿನ್ನೆಲೆಯಲ್ಲಿ, ರಾಜ್ಯ ಗೃಹ ಇಲಾಖೆ ಸಾರ್ವಜನಿಕ ಸಮಾರಂಭಗಳಲ್ಲಿ ಜನಸಂದಣಿ ನಿಯಂತ್ರಣಕ್ಕಾಗಿ ಸಮಗ್ರ ಮಾರ್ಗಸೂಚಿಯನ್ನು ಜಾರಿಗೊಳಿಸಿದೆ.

ಈ ಮಾರ್ಗಸೂಚಿಗಳು ಹಬ್ಬ, ಪ್ರತಿಭಟನೆ, ಮೆರವಣಿಗೆ ಮತ್ತು ಕ್ರೀಡಾ ಕೂಟಗಳಂತಹ ಬೃಹತ್​​ ಜನಸಂದಣಿ ಸೇರುವ ಯಾವುದೇ ಕಾರ್ಯಕ್ರಮಗಳಲ್ಲಿ ಸಾರ್ವಜನಿಕ ಭದ್ರತೆ, ಕಾನೂನು-ಸುವ್ಯವಸ್ಥೆ ಕಾಪಾಡುವ ಉದ್ದೇಶವನ್ನು ಹೊಂದಿದೆ.

ಹೊಸ ಮಾರ್ಗಸೂಚಿಗಳ ಪ್ರಕಾರ ಯಾವುದೇ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಪೊಲೀಸರು ಕೈಗೊಳ್ಳುವ ಕ್ರಮವು ಜೀವ ರಕ್ಷಣೆ, ಆಸ್ತಿ ಸುರಕ್ಷತೆ, ಜನರ ಹಕ್ಕುಗಳ ರಕ್ಷಣೆಗೆ ಆದ್ಯತೆ ನೀಡಬೇಕು. ಈ ಮಾರ್ಗಸೂಚಿಯು ತುರ್ತು ಸಂದರ್ಭಗಳಿಗಾಗಿ ಮುಂಜಾಗ್ರತಾ ಯೋಜನೆಗಳನ್ನು ರೂಪಿಸುವುದು, ಪಾಲುದಾರರ ನಡುವೆ ಸಮನ್ವಯ ಸಾಧಿಸುವುದು ಮತ್ತು ಅಗತ್ಯವಿದ್ದಾಗ ಮಾತ್ರ ವಿವೇಚನಾಯುಕ್ತವಾಗಿ ಬಲವನ್ನು ಬಳಸುವುದರ ಮೇಲೆ ನಿಂತಿದೆ.

ಕಾರ್ಯಕ್ರಮಪೂರ್ವ ತಯಾರಿ, ಯೋಜನೆ:

ಸಾರ್ವಜನಿಕ ಕಾರ್ಯಕ್ರಮಕ್ಕೂ ಮುನ್ನ ಅಪಾಯದ ವಿಶ್ಲೇಷಣೆ, ಸ್ಥಳದ ಸಂಪೂರ್ಣ ಪರಿಶೀಲನೆ ಮತ್ತು ಕಾರ್ಯಕ್ರಮ ಆಯೋಜಕರ ಸಹಯೋಗದೊಂದಿಗೆ ವಿವರವಾದ ಯೋಜನೆ ರಚಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಕಾರ್ಯಕ್ರಮ ನಡೆಯುವ ಸ್ಥಳದ ಸಾಮರ್ಥ್ಯ, ತುರ್ತು ನಿರ್ಗಮನ ಮಾರ್ಗಗಳ ಲಭ್ಯತೆ ಮತ್ತು ತಂತ್ರಜ್ಞಾನದ ಬಳಕೆಯ ಸಾಧ್ಯತೆಗಳನ್ನು ಪರಿಶೀಲಿಸಲೇಬೇಕು. ಜನಸಂದಣಿ ನಿರ್ವಹಣೆಗೆ ಪೊಲೀಸರ ಹೊಣೆಗಾರಿಕೆಗಳು, ಟ್ರಾಫಿಕ್ ನಿಯಂತ್ರಣ, ವೈದ್ಯಕೀಯ ನೆರವು ಮತ್ತು ಟಿಕೆಟ್ ವ್ಯವಸ್ಥೆಗಳನ್ನು ಮಾಡಲೇಬೇಕಾಗಿರುತ್ತದೆ.

ನೂತನ ಮಾರ್ಗಸೂಚಿ ಪ್ರಕಾರ, ಸಾರ್ವಜನಿಕರ ಪ್ರವೇಶ ದ್ವಾರಗಳಲ್ಲಿ ತರಬೇತಿ ಪಡೆದ ಸಿಬ್ಬಂದಿಯನ್ನು ನಿಯೋಜಿಸಬೇಕು. ಜನಸಂದಣಿಯನ್ನು ಸುಗಮಗೊಳಿಸಲು QR ಕೋಡ್ ಅಥವಾ ಬಯೋಮೆಟ್ರಿಕ್ ತಂತ್ರಜ್ಞಾನದ ಬಳಕೆ ಮತ್ತು ವಿಭಿನ್ನ ವರ್ಗಗಳಿಗೆ (ಉದಾ: ಪುರುಷರು, ಮಹಿಳೆಯರು, ವೃದ್ಧರು, ವಿಶೇಷಚೇತನರು) ಪ್ರತ್ಯೇಕ ಪ್ರವೇಶ ದ್ವಾರಗಳನ್ನು ಒದಗಿಸಬೇಕು. ತುರ್ತು ನಿರ್ಗಮನ ಮಾರ್ಗಗಳನ್ನು ಸ್ಪಷ್ಟವಾಗಿ ಗುರುತಿಸಬೇಕು ಮತ್ತು ಲೌಡ್‌ ಸ್ಪೀಕರ್‌ಗಳ ಮೂಲಕ ಸಾರ್ವಜನಿಕರಿಗೆ ಸೂಚನೆಗಳನ್ನು ನೀಡುವ ವ್ಯವಸ್ಥೆ ಇರಬೇಕು. ಅಲ್ಲದೆ, ತುರ್ತು ವಾಹನಗಳಾದ ಅಂಬುಲೆನ್ಸ್‌ಗಳಿಗೆ ಪಾರ್ಕಿಂಗ್ ವ್ಯವಸ್ಥೆ ಸೇರಿದಂತೆ ವೈದ್ಯಕೀಯ ನೆರವಿನ ವ್ಯವಸ್ಥೆಗಳನ್ನು ಖಚಿತಪಡಿಸಿಕೊಳ್ಳಬೇಕಾಗಿರುತ್ತದೆ.

ತುರ್ತು ಪರಿಸ್ಥಿತಿ ನಿರ್ವಹಣೆಗೆ ಸಿದ್ದತೆ:

ಪ್ರತಿಭಟನೆ ಅಥವಾ ಹವಾಮಾನ ದುರಂತಗಳಂತಹ ಅನಿರೀಕ್ಷಿತ ಪರಿಸ್ಥಿತಿಗಳಿಗೆ ತಯಾರಿ ನಡೆಸಲು ಸಿಮ್ಯುಲೇಷನ್ ಡ್ರಿಲ್‌ ಗಳನ್ನು ನಡೆಸುವ ಮೂಲಕ ರಕ್ಷಣಾ ತಂಡಗಳ ಜವಾಬ್ದಾರಿಗಳನ್ನು ಮೊದಲೇ ಗುರುತಿಸಬೇಕು. ಯಾವುದೇ ಘಟನೆಯ ಸಮಯದಲ್ಲಿ, ಪೊಲೀಸರು ಅನಗತ್ಯ ತಕರಾರುಗಳನ್ನು ತಪ್ಪಿಸಿ, ಸ್ಥಳೀಯರ ಸುರಕ್ಷತೆಗೆ ಆದ್ಯತೆ ನೀಡಬೇಕು. ಜನಸಂದಣಿ ನಿಯಂತ್ರಿಸಲು ಅಥವಾ ಚದುರಿಸಲು ಬಲವನ್ನು ಬಳಸುವ ಅನಿವಾರ್ಯತೆ ಬಂದಾಗ, ಮೂರು ಬಾರಿ ಎಚ್ಚರಿಕೆಗಳನ್ನು ನೀಡಿದ ನಂತರವೇ ಶಕ್ತಿ ಬಳಕೆ ಮತ್ತು ಕಾನೂನುಬದ್ಧ ಬಂಧನಕ್ಕೆ ಮುಂದಾಗಬೇಕೆಂದು ಎಂದು ಹೇಳಲಾಗಿದೆ.

ಭವಿಷ್ಯದ ಸುಧಾರಣೆಗಾಗಿ, ಜನಸಂದಣಿಯ ಸಂಚಾರ, ತೆಗೆದುಕೊಂಡ ನಿರ್ಧಾರಗಳು ಮತ್ತು ನೀಡಿದ ಎಚ್ಚರಿಕೆಗಳನ್ನು ಆಡಿಯೋ/ವಿಡಿಯೋ ದಾಖಲೆಗಳ ಮೂಲಕ ದಾಖಲಿಸಬೇಕು. ಈ ಹೊಸ ಮಾರ್ಗಸೂಚಿ ಪ್ರಕಾರ ಕರ್ನಾಟಕ ಪೊಲೀಸ್​ ಕಾಯಿದೆ ಮತ್ತು ಬಿಎನ್‌ಎಸ್‌ಎಸ್  ಸೆಕ್ಷನ್‌ ಗಳನ್ನು ಪಾಲಿಸಬೇಕಾಗಿರುತ್ತದೆ.

More articles

Latest article