ಶಿವಕಾಶಿ: ತಮಿಳುನಾಡಿನ ಪಟಾಕಿ ಕಾರ್ಖಾನೆಯೊಂದರಲ್ಲಿ ಇಂದು ಮುಂಜಾನೆ ಸಂಭವಿಸಿದ ಭೀಕರ ಸ್ಫೋಟದಲ್ಲಿ ನಾಲ್ವರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಶಿವಕಾಶಿ ಸಮೀಪದ ಚಿನ್ನ ಕಾಮನಪಟ್ಟಿ ಗ್ರಾಮದ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಗ್ನಿಶಾಮಕ ಮತ್ತು ತುರ್ತು ಸೇವೆಗಳು ಘಟನಾ ಸ್ಥಳಕ್ಕೆ ದೌಡಾಯಿಸಿದ್ದು, ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿವೆ.
ಸ್ಫೋಟ ಸಂಭವಿಸುತ್ತಿದ್ದಂತೆ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, ಕಾರ್ಖಾನೆಯಿಂದ ದಟ್ಟವಾದ ಹೊಗೆ ಆವರಿಸಿದೆ. ಕಾರ್ಖಾನೆ ಒಳಗಿನಿಂದ ನಿರಂತರವಾಗಿ ಪಟಾಕಿ ಸಿಡಿಯುವ ಶಬ್ಧ ಕೇಳಿಬುತ್ತಿತ್ತು ಎಂದು ಸ್ಥಳೀಯರು ಹೇಳಿದ್ದಾರೆ. ಸ್ಫೋಟಕ್ಕೆ ನಿಖರವಾದ ಕಾರಣ ತಿಳಿದುಬಂದಿಲ್ಲ. ತನಿಖೆಯ ನಂತರ ತಿಳಿದು ಬರಲಿದೆ ಎಂದು ಪೊಲೀಸರು ಹೇಳಿದ್ದಾರೆ.
ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಶಿವಕಾಶಿಯನ್ನು ಭಾರತದ ಪಟಾಕಿಗಳ ರಾಜಧಾನಿ ಎಂದು ಕರೆಯಲಾಗುತ್ತದೆ. ಶಿವಕಾಶಿ ಬೆಂಕಿಕಡ್ಡಿ ಉದ್ಯಮ ಮತ್ತು ಮುದ್ರಣಕ್ಕೆ ಹೆಸರುವಾಸಿಯಾಗಿದೆ.