ನ್ಯಾಯಮೂರ್ತಿಗಳ ನೇಮಕದಲ್ಲಿ ಹಿಡಿತ ಸಾಧಿಸಲು ಕೇಂದ್ರ ಪರೋಕ್ಷ ಯತ್ನ: ಕಪಿಲ್‌ ಸಿಬಲ್ ಆರೋಪ

Most read

ನವದೆಹಲಿ: ನ್ಯಾಯಮೂರ್ತಿ ಯಶವಂತ ವರ್ಮಾ ಅವರ ನಿವಾಸದಲ್ಲಿ ಅಪಾರ ಪ್ರಮಾಣದ ನಗದು ಪತ್ತೆಯಾಗಿದ್ದರೂ ಅವರ ವಿರುದ್ಧ ವಾಗ್ದಂಡನೆ ನಿಲುವಳಿ ಮಂಡಿಸುವ ಕೇಂದ್ರ ಸರ್ಕಾರದ ಉದ್ದೇಶವು ನ್ಯಾಯಮೂರ್ತಿಗಳ ನೇಮಕ ಪ್ರಕ್ರಿಯೆಯಲ್ಲಿ ನಿಯಂತ್ರಣ ಹೊಂದುವುದೇ ಆಗಿದೆ ಎಂದು ರಾಜ್ಯಸಭೆ ಸದಸ್ಯ ಕಪಿಲ್‌ ಸಿಬಲ್ ಆರೋಪ ಮಾಡಿದ್ದಾರೆ.

ಈಗಿರುವ ಕೊಲಿಜಿಯಂ ವ್ಯವಸ್ಥೆ ರದ್ದುಪಡಿಸಿ, ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗ (ಎನ್‌ ಜೆಎಸಿ) ಅಸ್ತಿತ್ವಕ್ಕೆ ತರುವ ಮೂಲಕ ನ್ಯಾಯಮೂರ್ತಿಗಳ ನೇಮಕದಲ್ಲಿ ನಿಯಂತ್ರಣ ಸಾಧಿಸುವ ಗುರಿಯನ್ನು ಸರ್ಕಾರ ಹೊಂದಿದೆ. ನ್ಯಾಯಮೂರ್ತಿಗಳಾದ ಯಶವಂತ ವರ್ಮಾ, ಶೇಖರ್ ಯಾದವ್‌ ಪ್ರಕರಣದ ನಿರ್ವಹಣೆಯಲ್ಲಿ ಕೇಂದ್ರವು ಭಿನ್ನ ನಿಲುವು ತಳೆದಿದೆ ಎಂದಿದ್ದಾರೆ.

ಕೋಮುವಾದಿ ಹೇಳಿಕೆ ನೀಡಿರುವ ಯಾದವ್ ಅವರ ವಿರುದ್ಧ ವಾಗ್ದಂಡನೆ ನಿಲುವಳಿ ಮಂಡಿಸಲು ಆಗ್ರಹಿಸಿ ಪ್ರತಿಪಕ್ಷಗಳ ಸಂಸದರು ಕಳೆದ ವರ್ಷ ರಾಜ್ಯಸಭೆಯಲ್ಲಿ ನೋಟಿಸ್‌ ನೀಡಿ ಒತ್ತಾಯಿಸಿದ್ದರು. ಈ ಬಗ್ಗೆ ರಾಜ್ಯಸಭೆ ಅಧ್ಯಕ್ಷರು ನಿರ್ಧಾರ ಕೈಗೊಳ್ಳಬೇಕಿದೆ.  

ನ್ಯಾಯಮೂರ್ತಿ ವರ್ಮಾ ಪ್ರಕರಣದಲ್ಲಿ ಎಲ್ಲ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರ ವಿರುದ್ಧ ವಾಗ್ದಂಡನೆ ನಿಲುವಳಿಯನ್ನು ಮಂಡಿಸಲು ಸರ್ಕಾರ ನಿರ್ಧರಿಸಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಇತ್ತೀಚೆಗೆ ತಿಳಿಸಿದ್ದರು. ನಾನು ವಾದ ಮಂಡಿಸಿರುವ ಅತ್ಯುತ್ತಮ ನ್ಯಾಯಮೂರ್ತಿಗಳಲ್ಲಿ ವರ್ಮಾ ಅವರೂ ಒಬ್ಬರು ಎಂದು ಜವಾಬ್ದಾರಿಯುತವಾಗಿ ಹೇಳುತ್ತಿದ್ದೇನೆ. ಇದನ್ನು ಯಾವುದೇ ವಕೀಲರಲ್ಲಿ ಕೇಳಬಹುದು ಎಂದು ಕಪಿಲ್ ಸಿಬಲ್ ಪ್ರತಿಪಾದಿಸಿದ್ದಾರೆ.

ಕೇಂದ್ರ ಸರ್ಕಾರವು ಪ್ರಸ್ತುತ ಯಾವುದೇ ಸಾಕ್ಷ್ಯವಿಲ್ಲದ ನ್ಯಾಯಮೂರ್ತಿಯನ್ನು ದಂಡಿಸಲು ಮುಂದಾಗಿದೆ. ಆದರೆ, ಸಾರ್ವಜನಿಕ ವೇದಿಕೆಯಲ್ಲಿಯೇ ಕೋಮುವಾದಿ ಹೇಳಿಕೆ ನೀಡಿದ್ದ ನ್ಯಾಯಮೂರ್ತಿಗಳನ್ನು ರಕ್ಷಿಸುತ್ತಿದೆ ಎಂದು ಸಿಬಲ್‌ ಆಪಾದಿಸಿದ್ದಾರೆ.

More articles

Latest article