ಬೆಂಗಳೂರು: ಗೆಜೆಟೆಡ್ ಪ್ರೊಬೆಷನರಿ ಗ್ರೂಪ್ ‘ಎ’ ಮತ್ತು ಗ್ರೂಪ್ ‘ಬಿ’ ವೃಂದದ 384 ಹುದ್ದೆಗಳ ನೇಮಕಾತಿಗಾಗಿ ನಡೆದ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎನ್ನುವುದು ಸುಳ್ಳು ಸುದ್ದಿಯಾಗಿದ್ದು, ಇಂತಹ ವದಂತಿಗಳಿಗೆ ಕಿವಿಗೊಡಬಾರದು ಎಂದು ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) ಮನವಿ ಮಾಡಿಕೊಂಡಿದೆ.
ಸೋಮವಾರ (ಮೇ 5) ನಡೆದ ಮುಖ್ಯ ಪರೀಕ್ಷೆಯ ಸಾಮಾನ್ಯ ಅಧ್ಯಯನ–1 ಪ್ರಶ್ನೆಪತ್ರಿಕೆ ಸೋರಿಕೆಯಾಗಿರುವ ಶಂಕೆ ವ್ಯಕ್ತವಾಗಿರುವ ಹಿನ್ನೆಲೆ ಅಭ್ಯರ್ಥಿಗಳು ಆಯೋಗಕ್ಕೆ ದೂರು ಸಲ್ಲಿಸಿದ್ದರು. ಬೆಂಗಳೂರಿನ ಕಸ್ತೂರಬಾ ನಗರದ ಬಿಬಿಎಂಪಿ ಸಂಯೋಜಿತ ಪಿಯು ಕಾಲೇಜಿನ ಪರೀಕ್ಷಾ ಕೇಂದ್ರಕ್ಕೆ ಬಂದಿದ್ದ ಪ್ರಶ್ನೆಪತ್ರಿಕೆ ಸೋರಿಕೆಯಾಗಿವೆ ಎಂದು ಅಭ್ಯರ್ಥಿಗಳು ಆಪಾದಿಸಿದ್ದರು.
ಈ ಪರೀಕ್ಷಾ ಕೇಂದ್ರಕ್ಕೆ ಕಳುಹಿಸಿದ ಪ್ರಶ್ನೆಪತ್ರಿಕೆಯ ಬಂಡಲ್ ಮೇಲ್ಬಾಗದಲ್ಲಿ ಮಾತ್ರ ಮುಚ್ಚಿದ್ದು, ಒಳ ಭಾಗದಲ್ಲಿ (ಎರಡನೇ ಶೀಲ್ಡ್) ತೆರೆದಿತ್ತು. ಈ ಕುರಿತು ಪರೀಕ್ಷಾ ಮೇಲ್ವಿಚಾರಕರು, ಅಲ್ಲಿನ ಪ್ರಾಂಶುಪಾಲರನ್ನು ಪ್ರಶ್ನಿಸಿದಾಗ, ಅದೇ ರೀತಿಯೇ ಕಳಹಿಸಿರುವುದಾಗಿ ಕೆಪಿಎಸ್ ಸಿ ತಿಳಿಸಿದೆ ಎಂದು ಉತ್ತರಿಸಿದ್ದರು. ಪರೀಕ್ಷೆಯ ನಂತರ ಕೇಂದ್ರಕ್ಕೆ ಬಂದ ಅಧಿಕಾರಿಗಳು, ಪ್ರಶ್ನೆ ಮಾಡಿದ ಅಭ್ಯರ್ಥಿಯೊಬ್ಬರ ಮೇಲೆ ಹಲ್ಲೆ ನಡೆಸಿದ್ದಾರೆ. ಇದು ಪರೀಕ್ಷಾ ಸಿಬ್ಬಂದಿ ಮತ್ತು ಅಭ್ಯರ್ಥಿಗಳ ಮಧ್ಯೆ ಘರ್ಷಣೆಗೆ ದಾರಿ ಮಾಡಿಕೊಟ್ಟಿದೆ. ಮೊಬೈಲ್ ನಿಷೇಧವಿದ್ದರೂ ಪ್ರಕರಣವನ್ನು ಚಿತ್ರೀಕರಿಸಲಾಗಿದೆ. ಮೊಬೈಲ್ ತರಲು ಅವಕಾಶ ಮಾಡಿಕೊಟ್ಟಿದ್ದಾರೆ. ಈ ಕುರಿತು ಸಮಗ್ರ ತನಿಖೆ ನಡೆಸಬೇಕು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದರು.
ಈ ಕುರಿತು ಪ್ರಕಟಣೆ ಹೊರಡಿಸುವ ಆಯೋಗ ಈ ವಿಷಯದ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಲಾಗಿದ್ದು, ಪರೀಕ್ಷಾ ಉಪ ಕೇಂದ್ರದ ಮೇಲ್ವಿಚಾರಕರು ಮತ್ತು ಆಯೋಗದಿಂದ ನಿಯೋಜಿತರಾದ ಸ್ಥಳೀಯ ನಿರೀಕ್ಷಣಾಧಿಕಾರಿಗಳಿಂದ ವಿಸ್ತ್ರತವಾದ ವರದಿಗಳನ್ನು ಪಡೆಯಲಾಗಿದೆ. ಕರ್ನಾಟಕ ಲೋಕಸೇವಾ ಆಯೋಗವು ಪ್ರೊಬೇಷನರಿ ಪರೀಕ್ಷೆಗಳೂ ಸೇರಿದಂತೆ ವಿವಿಧ ನೇಮಕಾತಿ ಪರೀಕ್ಷೆಗಳನ್ನು ನಡೆಸುವಾಗ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗದಂತೆ ಮತ್ತು ಪರೀಕ್ಷಾ ಗೌಪ್ಯತೆಯನ್ನು ಕಾಪಾಡುವ ಮತ್ತು ಪರೀಕ್ಷೆಯನ್ನು ಪಾರದರ್ಶಕವಾಗಿ ನಡೆಸುವ ಸಲುವಾಗಿ ಹಾಗೂ ದುರಾಚಾರ ಪ್ರಕರಣಗಳು ನಡೆಯದಂತೆ ತಡೆಯಲು ಹಲವು ಹಂತಗಳ ಸುರಕ್ಷಾ ಕ್ರಮಗಳನ್ನು ಅಳವಡಿಸಿಕೊಳ್ಳಲಾಗಿರುತ್ತದೆ. ಅದರಂತೆಯೇ ಈ ಪರೀಕ್ಷೆಯಲ್ಲಿಯೂ ಸಹ ಪ್ರಶ್ನೆ ಪತ್ರಿಕೆಯ ಭದ್ರತೆಗಾಗಿ ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದೆ.
ಪರೀಕ್ಷಾ ಗೌಪ್ಯ ಸಾಮಗ್ರಿಗಳ ಗೌಪ್ಯತೆ, ಸುರಕ್ಷತೆ ಮತ್ತು ಭದ್ರತೆಯನ್ನು ಕಾಪಾಡುವಲ್ಲಿ ಆಯೋಗವು ಜವಾಬ್ದಾರಿಯುತವಾಗಿ, ಪಾರದರ್ಶಕವಾಗಿ ಕಾರ್ಯನಿರ್ವಹಿಸಲು ಪ್ರಯತ್ನಿಸುತ್ತಿದೆ. ಮಾಧ್ಯಮದಲ್ಲಿ ಬಿತ್ತರಗೊಳ್ಳುತ್ತಿರುವ ವಿಷಯವು ಸತ್ಯಕ್ಕೆ ದೂರವಾಗಿದ್ದು, ಅಭ್ಯರ್ಥಿಗಳು ಹತಾಶರಾಗಬೇಕಿಲ್ಲ ಮತ್ತು ಇಂತಹ ಸುಳ್ಳು ವದಂತಿಗಳಿಗೆ ಕಿವಿಗೊಡಬಾರದು ಎಂದು ತಿಳಿಸಿದೆ.