SSLC ಪರೀಕ್ಷೆ ಸುಧಾರಣಾ ಕ್ರಮ;  ಪಾಸ್‌ ಆಗಲು ಅಂಕಗಳ ಮಿತಿಯನ್ನು ಶೇ. 35 ರಿಂದ ಶೇ. 33 ಕ್ಕೆ ಇಳಿಸಲು ಸಲಹೆ

Most read

ಎಸ್‌ ಎಸ್‌ ಎಲ್‌ ಸಿ ಪರೀಕ್ಷೆ ಉತ್ತೀರ್ಣರಾಗಲು ಕನಿಷ್ಠ ಅಂಕಗಳನ್ನು ಶೇ. 35 ರಿಂದ ಶೇ. 33 ಕ್ಕೆ ಇಳಿಸಬೇಕು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಶಾಲಾ ಸಂಘ (ಅಸೋಸಿಯೇಟೆಡ್‌ ಮ್ಯಾನೇಜ್‌ ಮೆಂಟ್ಸ್‌ ಆಫ್‌ ಪ್ರೈಮರಿ ಅಂಡ್‌ ಸೆಕೆಂಡರಿ ಸ್ಕೂಲ್ಸ್‌ ಇನ್‌ ಕರ್ನಾಟಕ KAMS) ಕ್ಯಾಮ್ಸ್‌ ಸರ್ಕಾರವನ್ನು ಒತ್ತಾಯಿಸಿದೆ. ಎಸ್‌ ಎಸ್‌ ಎಲ್‌ ಸಿ ಪರೀಕ್ಷೆಯ ಫಲಿತಾಂಶ ಸುಧಾರಣೆಯಾಗುತ್ತದೆ ಮತ್ತು ರಾಷ್ಟ್ರೀಯ ಗುಣಮಟ್ಟಕ್ಕೆ ಹೊಂದಾಣಿಕೆಯಾಗಲಿದೆ ಎಂದೂ ಆಗ್ರಹಪಡಿಸಿದೆ.

ಈ ಸಂಬಂಧ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ್‌ ಅವರಿಗೆ ಕ್ಯಾಮ್ಸ್‌ ಮನವಿ ಸಲ್ಲಿಸಿದೆ. ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ, ಕೇರಳ ಮತ್ತು ಕೇಂದ್ರಾಡಳಿತ ಪ್ರದೇಶ ಪುದುಚೆರಿಯಲ್ಲಿನ ಶಿಕ್ಷಣ ವ್ಯವಸ್ಥೆಯೊಂದಿಗೆ ಹೋಲಿಕೆ ಮಾಡಿ ಅಧ್ಯಯನ ನಡೆಸಿ ಸುಧಾರಣಾ ಕ್ರಮಗಳನ್ನು ಸಲಹೆ ಮಾಡಿದೆ.

ಸರ್ಕಾರ ಕೂಡಲೇ ಎಸ್‌ ಎಸ್‌ ಎಲ್‌ ಸಿ ಪರೀಕ್ಷೆಯಲ್ಲಿ ಸುಧಾರಣೆಗಳನ್ನು ಜಾರಿಗೊಳಿಸಲು ಸುಧಾರಣಾ ಸಮಿತಿಯನ್ನು ರಚಿಸುವಂತೆ ಮನವಿ ಸಲ್ಲಿಸಿದೆ. ಇತರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಉತ್ತೀರ್ಣರಾಗಲು ಹೆಚ್ಚಿನ ಅಂಕಗಳನ್ನು ಗಳಿಸಬೇಕಿದೆ ಎಂಬ ಅಂಶವನ್ನೂ ಗಮನಕ್ಕೆ ತಂದಿದೆ.

ಕರ್ನಾಟಕದಲ್ಲಿ ರಾಜ್ಯಮಟ್ಟದ ಎಸ್‌ ಎಸ್‌ ಎಲ್‌ ಸಿ ಪರೀಕ್ಷೆ ಪಾಸಾಗಲು ಶೇ. 35 ಮತ್ತು ಸಿಬಿಎಸ್‌ ಇ ಸಿಲಬಸ್‌ ಪರೀಕ್ಷೆಗೆ ಶೇ. 33 ರಷ್ಟು ಅಂಕಗಳನ್ನು ಗಳಿಸಬೇಕಿದೆ. ಕೇರಳದಲ್ಲಿ ಎಲ್ಲ ವಿಷಯಗಳಲ್ಲೂ ಶೇ. 30 ರಷ್ಟು ಅಂಕಗಳನ್ನು ಗಳಿಸಬೇಕಿದೆ. ಆಂಧ್ರಪ್ರದೇಶದಲ್ಲಿ ಎಲ ವಿಷಯಗಳಲ್ಲಿ ಶೇ. 35 ಮತ್ತು ಹಿಂದಿಯಲ್ಲಿ ಶೇ. 20 ರಷ್ಟು ಅಂಕಗಳನ್ನು ಗಳಿಸಬೇಕಿದೆ. ಎಸ್‌ ಎಸ್‌ ಎಲ್‌ ಸಿ ಉತ್ತೀರ್ಣರಾಗಲು ಒಟ್ಟಾರೆ ಶೇ. 32.5 ರಷ್ಟು ಅಂಕಗಳನ್ನು ಗಳಿಸಬೇಕಿದೆ.

ವಿಷಯಗಳ ಕಲಿಕೆಯಲ್ಲೂ ಏಕರೂಪತೆ ಇಲ್ಲ. ಇಂಗ್ಲೀಷ್‌ ಸೇರಿ ಎರಡು ಭಾಷಾ ವಿಷಯಗಳ ಜತೆಗೆ ವಿಜ್ಞಾನ, ಅಂಕಗಣಿತ ಸಮಾಜ ವಿಜ್ಞಾನ ಸಾಮಾನ್ಯ ವಿಷಯಗಳಿರುತ್ತವೆ.ಮತ್ತೊಂದು ಪ್ರಾಂತೀಯ ಭಾಷೆಯಾಗಿರುತ್ತದೆ. ಎಲ್ಲ ಮಾದರಿಗಳಲ್ಲೂ  ಬಾಹ್ಯ ಮೌಲ್ಯಮಾಪನ ಸಾಮಾನ್ಯವಾಗಿರುತ್ತದೆ.

ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ ಆಂತರಿಕ ಮೌಲ್ಯಮಾಪನ ಅಂಕಗಳಿಲ್ಲ. ಈ ರಾಜ್ಯಗಳಲ್ಲಿ ವಿಜ್ಞಾನ ವಿಷಯದ ಪ್ರಾಕ್ಟಿಕಲ್ಸ್‌ ಅನ್ನು ಆಂತರಿಕ ಎಂದು ಪರಿಗಣಿಸಲಾಗಿದೆ. ಆದರೆ ಬಹುತೇಕ ರಾಜ್ಯಗಳಲ್ಲಿ ವಿದ್ಯಾರ್ಥಿಗಳ ಮೌಲ್ಯಮಾಪನ ಮಾಡಲು ಆಂತರಿಕ ಮತ್ತು ಬಾಹ್ಯ (ಇಂಟರ್ನಲ್‌ ಮತ್ತು ಎಕ್ಸ್‌ ಟರ್ನಲ್‌ ) ಮೌಲ್ಯಮಾಪನ ಮಾಡುವ ಪದ್ದತಿಯನ್ನು ಅನುಸರಿಸಲಾಗುತ್ತಿದೆ.

ತೆಲಂಗಾಣದಲ್ಲಿ ಪ್ರತಿ ವಿಷಯಕ್ಕೂ 20 ಅಂಕಗಳ ಆಂತರಿಕ ಮೌಲ್ಯಮಾಪನ ವಿರುತ್ತದೆ. ಕೇರಳದಲ್ಲಿ ಆಂತರಿಕ ಮೌಲ್ಯಮಾಪನಕ್ಕೆ 130 ಅಂಕಗಳು ಮತ್ತು ಬಾಹ್ಯ ಪರೀಕ್ಷೆಗಳಿಗೆ 520 ಅಂಕಗಳಿರುತ್ತವೆ. ಸಿಬಿಎಸ್‌ ಇ ಪರೀಕ್ಷೆಯಲ್ಲಿ ಆಂತರಿಕ ಮೌಲ್ಯಮಾಪನಕ್ಕೆ 20 ಅಂಕಗಳು ಮತ್ತು ಬಾಹ್ಯ ಮೌಲ್ಯಮಾಪನಕ್ಕೆ 80 ಅಂಕಗಳು ನಿಗದಿಯಾಗಿದ್ದು ವಿದ್ಯಾರ್ಥಿಯು ಉತ್ತೀರ್ಣರಾಗಲು ಶೇ. 33ರಷ್ಟು ಅಂಕಗಳನ್ನು ಗಳಿಸಬೇಕಿದೆ. ಆದರೆ ಕರ್ನಾಟಕದಲ್ಲಿ ವಿದ್ಯಾರ್ಥಿಯು ಮುಖ್ಯ ಪರೀಕ್ಷೆಯಲ್ಲಿ ಶೇ. 35 ರಷ್ಟು ಅಂಕಗಳನ್ನು ಗಳಿಸಬೇಕು. ಆದರೆ ಆಂತರಿಕ ಮೌಲ್ಯಮಾಪನ ಅಂಕಗಳನ್ನು ಪರಿಗಣಿಸಲಾಗುವುದಿಲ್ಲ.

ಅಂಕಗಣಿತ ಮತ್ತು ವಿಜ್ಞಾನ ವಿಷಯಗಳಲ್ಲಿ ದ್ವಿಪರೀಕ್ಷಾ ಆಯ್ಕೆ ಇರಬೇಕು ಎಂದು ಶಿಫಾರಸ್ಸು ಮಾಡಲಾಗಿದೆ. ಸಿಬಿಎಸ್‌ ಇ ಪದ್ದತಿಯಲ್ಲಿ ಬೇಸಿಕ್‌ ಅಂಕಗಣಿತ ಮತ್ತು ಸ್ಟ್ಯಾಂಡರ್ಡ್‌ ಅಂಕಗಣಿತ ಎರಡರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶವಿದೆ. ಇದೇ ಪದ್ದತಿಯನ್ನು ಕರ್ನಾಟಕದಲ್ಲೂ ಅಳವಡಿಸಿಕೊಂಡರೆ ವಿದ್ಯಾರ್ಥಿಗಳ ಮೇಲಿನ ಹೊರೆ ಕಡಿಮೆಯಾಗಲಿದೆ ದು ಸಂಘ ಅಭಿಪ್ರಾಯಪಟ್ಟಿದೆ. ಎನ್‌ ಸಿಇಆರ್‌ ಟಿ ಪಠ್ಯಪುಸ್ತಕಗಳಿಗೆ ಅನುಗುಣವಾಗಿ ಪಠ್ಯಪುಸ್ತಕಗಳನ್ನು ರಚಿಸಬೇಕು ಎಂದೂ ಹೇಳಿದೆ. ಶಿಕ್ಷಕರಿಗೆ ತರಬೇತಿ ನೀಡುವುದು, ಸಮಗ್ರ ಮೌಲ್ಯಮಾಪನ ಕ್ರಮವನ್ನು ಬಲಗೊಳಿಸಬೇಕು ಎಂದೂ ಸಲಹೆ ನೀಡಿದೆ.

More articles

Latest article