ಆಟೋಗೆ ಸಾರಿಗೆ ಸಂಸ್ಥೆ ಬಸ್‌ ಡಿಕ್ಕಿ; ಮೂವರ ಸಾವು, ಮೂವರ ಸ್ಥಿತಿ ಗಂಭೀರ

Most read

ನೆಲಮಂಗಲ: ಬೆಂಗಳೂರು ಹೊರವಲಯದ ನೆಲಮಂಗಲ ಸಮೀಪದ ಶಾಂತಿನಗರ ಗ್ರಾಮದ ಬಳಿ ವೇಗವಾಗಿ ಬಂದ ಸಾರಿಗೆ ಬಸ್‌ ಸಂಸ್ಥೆ ಬಸ್‌ ವೊಂದು ಆಟೋಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಮೃತಪಟ್ಟಿದ್ದು,  ಮೂವರು ಗಂಭೀರ ಗಾಯಗೊಂಡ ದುರಂತ ಘಟನೆ ನಡೆದಿದೆ.

ಹಾಸನ – ನೆಲಮಂಗಲ ರಾಷ್ಟ್ರೀಯ ಹೆದ್ದಾರಿಯ ಶಾಂತಿನಗರ ಗ್ರಾಮದ ಶ್ರೀನಿವಾಸ್ ಹಾಗೂ ಪುಟ್ಟಮ್ಮ ಸ್ಥಳದಲ್ಲೇ ಅಸು ನೀಗಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ 13 ವರ್ಷದ ಬಾಲಕಿ ವರ್ಷಿಣಿ ಮೃತಪಟ್ಟಿದ್ದಾಳೆ. ಘಟನೆಯಲ್ಲಿ ಗಂಭೀರ ಗಾಯಗೊಂಡ ಬಾಲಕಿ ಲೇಖನ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾಳೆ. ನಾಗರತ್ನಮ್ಮ ಹಾಗೂ ವೆಂಕಟೇಶ್‌ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ನೆಲಮಂಗಲ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

ಬೆಂಗಳೂರು ಮಾರ್ಗದಲ್ಲಿ ಹೊರನಾಡಿಗೆ ತೆರಳುತ್ತಿದ್ದ ಬಸ್ ನೆಲಮಂಗಲ ಬಳಿ ಆಟೋಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಮೃತ ಶ್ರೀನಿವಾಸ್ ಯಂಟಗಾನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ವಾಟರ್ ಮನ್ ಕೆಲಸ ಮಾಡಿಕೊಂಡು ಜತೆಗೆ ಆಟೋ ಓಡಿಸುತ್ತಿದ್ದರು. 

ಘಟನಾ ಸ್ಥಳಕ್ಕೆ ನೆಲಮಂಗಲ ಸಂಚಾರಿ ಪೊಲೀಸರು ಭೇಟಿ ನೀಡಿದ್ದು, ಮೃತದೇಹಗಳನ್ನು ನೆಲಮಂಗಲ ಸರ್ಕಾರಿ ಶವಗಾರಕ್ಕೆ ರವಾನೆ ಮಾಡಿದ್ದಾರೆ. ಈ ಘಟನೆಯಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಮೃತರು ಶಾಂತಿನಗರದಿಂದ ನೆಲಮಂಗಲ ನಗರಕ್ಕೆ ಬರುತ್ತಿದ್ದರು ಎಂದು ತಿಳಿದು ಬಂದಿದೆ. ಒಂದೇ ಕುಟುಂಬಕ್ಕೆ ಸೇರಿದ ಆರು ಮಂದಿ ಆಟೋದಲ್ಲಿ ಪ್ರಯಾಣಿಸುತ್ತಿದ್ದರು. ಬಸ್ ಚಾಲಕನ ಅಜಾಗರೂಕ ಚಾಲನೆಯಿಂದ ಈ ಅಪಘಾತ ಸಂಭವಿಸಿದೆಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.  

More articles

Latest article