ಬೆಂಗಳೂರು: ಕಾಶ್ಮೀರ ಪ್ರವಾಸಕ್ಕೆಂದು ತೆರಳಿರುವ 40ಕ್ಕೂ ಅಧಿಕ ಕನ್ನಡಿಗರು ಭಯೋತ್ಪಾದಕ ದಾಳಿಯಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದು, ಅವರೆಲ್ಲರನ್ನೂ ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರಲು ವಿಶೇಷ ವಿಮಾನದ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಮುಖ್ಯಮಂತ್ರಿ ತಿಳಿಸಿದ್ದಾರೆ.
ಪ್ರತಿಯೊಬ್ಬ ಕನ್ನಡಿಗನನ್ನು ಮರಳಿ ರಾಜ್ಯಕ್ಕೆ ಕ್ಷೇಮವಾಗಿ ಕರೆತರುವ ಸಂಕಲ್ಪದೊಂದಿಗೆ ನಮ್ಮ ಸರ್ಕಾರವು ಕಾರ್ಯಾಚರಣೆಗೆ ಇಳಿದಿದೆ. ಯಾರೊಬ್ಬರೂ ಆತಂಕ ಪಡುವ ಅಗತ್ಯವಿಲ್ಲ ಎಂದು ಭರವಸೆ ನೀಡಿದ್ದಾರೆ. ಜಮ್ಮು-ಕಾಶ್ಮೀರದ ಪಹಲ್ಗಾಮ್ ನಲ್ಲಿ ಉಗ್ರರ ದಾಳಿಯಿಂದ ಮೃತಪಟ್ಟಿರುವ ಕರ್ನಾಟಕದ ಮೂವರ ಪಾರ್ಥೀವ ಶರೀರಗಳನ್ನು ಇಂದು ಸಂಜೆ ಅಥವಾ ನಾಳೆ ಬೆಳಗ್ಗೆ ತಾಯ್ನಾಡಿಗೆ ತರಲಾಗುವುದು ಎಂದು ಸರ್ಕಾರ ತಿಳಿಸಿದೆ.
ಜಮ್ಮು ಕಾಶ್ಮೀರ ಪ್ರವಾಸದಲ್ಲಿದ್ದ ಐಪಿಎಸ್ ಅಧಿಕಾರಿ ಆರ್.ಚೇತನ್ ಅವರು ಸ್ಥಳದಲ್ಲೇ ಮೊಕ್ಕಾಂ ಮಾಡಿದ್ದು, ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರೂ ಸಹ ಇಂದು ಮುಂಜಾನೆ ತೆರಳಿದ್ದು, ಪರಿಹಾರ ಕಾರ್ಯಗಳ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದಾರೆ.
ಪರಿಹಾರ ಘೋಷಣೆ: ಉಗ್ರರ ದಾಳಿಗೆ ಬಲಿಯಾದ ಮೃತ ಕುಟುಂಬಸ್ಥರಿಗೆ ತಲಾ 10 ಲಕ್ಷ ರೂ. ಪರಿಹಾರ ನೀಡುವುದಾಗಿ ಜಮ್ಮು-ಕಾಶ್ಮೀರ ಸರ್ಕಾರ ಘೋಷಿಸಿದೆ. ಗಂಭೀರವಾಗಿ ಗಾಯಗೊಂಡವರಿಗೆ 2 ಲಕ್ಷ ರೂ. ಸಣ್ಣ, ಪುಟ್ಟ ಗಾಯಾಳುಗಳಿಗೆ 1 ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದು ಸರ್ಕಾರ ತಿಳಿಸಿದೆ.